Home ಅಪರಾಧ ಫೈರಿಂಗ್ ಪ್ರಕರಣದಲ್ಲಿ ಖ್ಯಾತ ಶಿಕ್ಷಕ ‘ಖಾನ್ ಸರ್’ ಬಂಧನಕ್ಕೆ ಪಾಟ್ನಾ ಕೋರ್ಟ್ ತಡೆಯಾಜ್ಞೆ

ಫೈರಿಂಗ್ ಪ್ರಕರಣದಲ್ಲಿ ಖ್ಯಾತ ಶಿಕ್ಷಕ ‘ಖಾನ್ ಸರ್’ ಬಂಧನಕ್ಕೆ ಪಾಟ್ನಾ ಕೋರ್ಟ್ ತಡೆಯಾಜ್ಞೆ

0

ಬಿಹಾರದ ಖ್ಯಾತ ಶಿಕ್ಷಕ ಮತ್ತು ಯೂಟ್ಯೂಬರ್ ‘ಖಾನ್ ಸರ್’ (Khan Sir) ಅವರಿಗೆ ಬಿಹಾರದ ಪಾಟ್ನಾ ನ್ಯಾಯಾಲಯದಿಂದ ಭಾರಿ ರಿಲೀಫ್ ಸಿಕ್ಕಿದೆ. ಕೋಚಿಂಗ್ ಸೆಂಟರ್ ಹೊರಗಡೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಹೊರಡಿಸಲಾಗಿದ್ದ ಬಂಧನ ವಾರೆಂಟ್‌ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಪಾಟ್ನಾದಲ್ಲಿರುವ ಖಾನ್ ಸರ್ ಅವರ ಕೋಚಿಂಗ್ ಸೆಂಟರ್ ಬಳಿ ಇತ್ತೀಚೆಗೆ ಎರಡು ಗುಂಪುಗಳ ನಡುವೆ ಭಾರಿ ಘರ್ಷಣೆ ನಡೆದಿತ್ತು. ಈ ವೇಳೆ ಪ್ರತಿಭಟನಾಕಾರರ ಮೇಲೆ ಖಾನ್ ಸರ್ ಅವರ ಭದ್ರತಾ ಸಿಬ್ಬಂದಿಯೇ ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮತ್ತೊಂದೆಡೆ, ಬಿಹಾರದ ಅಗ್ನಿಶಾಮಕ ಇಲಾಖೆಯು ಖಾನ್ ಸರ್ ಅವರ ಕೋಚಿಂಗ್ ಸೆಂಟರ್‌ನಲ್ಲಿ ಸೂಕ್ತ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ ಹಾಗೂ ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ನೋಟಿಸ್ ಜಾರಿ ಮಾಡಿದೆ.

ಈ ಮಧ್ಯೆ, ‘ಖಾನ್ ಗ್ಲೋಬಲ್ ಸ್ಟಡೀಸ್’ ಕೋಚಿಂಗ್ ಸೆಂಟರ್ ಹೊರಗಡೆ ನಡೆದ ಈ ಗಲಾಟೆ ಮತ್ತು ಗುಂಡಿನ ದಾಳಿಗೂ ಖಾನ್ ಸರ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರ ಪರ ವಕೀಲ ಅರವಿಂದ್ ಕುಮಾರ್ ಮಾಹೂರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಾಧಾರಗಳನ್ನು ನ್ಯಾಯಾಧೀಶರ ಮುಂದೆ ಮಂಡಿಸಲಾಗಿದ್ದು, ಖಾನ್ ಸರ್ ಅವರಿಗೆ ನಿರಪೇಕ್ಷ ಜಾಮೀನು ನೀಡುವಂತೆ ವಕೀಲರು ವಾದಿಸಿದ್ದಾರೆ. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಸದ್ಯಕ್ಕೆ ಖಾನ್ ಸರ್ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಿದೆ.

ಇದೇ ವೇಳೆ, ಖಾನ್ ಗ್ಲೋಬಲ್ ಸ್ಟಡೀಸ್ ನೀಡಿದ ದೂರಿನ ಆಧಾರದ ಮೇಲೆ ಅವರ ಪ್ರತಿಸ್ಪರ್ಧಿ ಕೋಚಿಂಗ್ ಸೆಂಟರ್‌ನ ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ. ಪಾಟ್ನಾದ ಮತ್ತೊಂದು ಅತ್ಯಂತ ಪ್ರಸಿದ್ಧ ಕೋಚಿಂಗ್ ಸಂಸ್ಥೆಯಾದ ‘ಜ್ಞಾನ ಬಿಂದು ಅಕಾಡೆಮಿ’ಯ ನಿರ್ದೇಶಕ ರೌಶನ್ ಆನಂದ್ ಎಂಬುವವರನ್ನು ಕೆಲವು ದಿನಗಳ ಹಿಂದಷ್ಟೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಟ್ನಾದಲ್ಲಿ ಈ ಎರಡೂ ಕೋಚಿಂಗ್ ಸೆಂಟರ್‌ಗಳ ನಡುವೆ ಕಳೆದ ಕೆಲವು ವರ್ಷಗಳಿಂದ ತೀವ್ರ ಪೈಪೋಟಿ ಮತ್ತು ಆಧಿಪತ್ಯದ ಹೋರಾಟ ನಡೆಯುತ್ತಿದೆ. ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಗಳಲ್ಲಿ ಈ ಎರಡೂ ಸಂಸ್ಥೆಗಳಲ್ಲಿ ಓದಿದ ವಿದ್ಯಾರ್ಥಿಗಳೇ ಅತಿ ಹೆಚ್ಚು ಸಂಖ್ಯೆಯಲ್ಲಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳನ್ನು ಸೆಳೆಯಲು ಇವೆರಡರ ನಡುವೆ ಶೀತಲ ಸಮರ ಏರ್ಪಟ್ಟಿದ್ದು, ಇದು ಹಲವು ಬಾರಿ ಬೀದಿ ಜಗಳಕ್ಕೂ ಕಾರಣವಾಗಿದೆ. ಸದ್ಯದ ಮಾರುಕಟ್ಟೆಯಲ್ಲಿ ಖಾನ್ ಸರ್ ಆನ್‌ಲೈನ್‌ನಲ್ಲಿ ಭಾರಿ ಜನಪ್ರಿಯತೆ ಹೊಂದಿದ್ದರೆ, ಜ್ಞಾನ ಬಿಂದು ಅಕಾಡೆಮಿಯು ಆಫ್‌ಲೈನ್ ತರಗತಿಗಳಲ್ಲಿ ಹೆಚ್ಚು ಫಾಲೋಯಿಂಗ್ ಹೊಂದಿದೆ ಎಂದು ಹೇಳಲಾಗುತ್ತಿದೆ.

You cannot copy content of this page

Exit mobile version