ಬೆಂಗಳೂರು, ಅಕ್ಟೋಬರ್ 13: ಪಿಸಿಪಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಸಿದ್ಧಾರ್ಥ ವಿಹಾರ್ ಟ್ರಸ್ಟ್‌ನ ಅಧ್ಯಕ್ಷ ರಾಹುಲ್ ಎಂ ಖರ್ಗೆ ಮುಖ್ಯ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಬಹು ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ತಮ್ಮ ಟ್ರಸ್ಟ್‌ಗೆ ಬೆಂಗಳೂರಿನಲ್ಲಿ ಐದು ಎಕರೆ ಮಂಜೂರು ಮಾಡುವಂತೆ ಕೋರಿ ಸಲ್ಲಿಸಿದ್ದ ತಮ್ಮ ಹಿಂದಿನ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ಅವರು ಘೋಷಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಪತ್ರ ಬರೆಯಲಾಗಿದೆ. ಈ ಹಿಂದೆ ಕೆಐಎಡಿಬಿ ಖರ್ಗೆ ಕುಟುಂಬಕ್ಕೆ ಸೇರಿದ ಈ ಟ್ರಸ್ಟ್‌ಗೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು, ಇದನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು. ಈಗಾಗಲೇ ಮುಡಾ ಭೂ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ತಮಗೆ ಮಂಜೂರಾಗಿದ್ದ 14 ನಿವೇಶನಗಳನ್ನು ವಾಪಸ್ ನೀಡಿದ್ದಾರೆ.
ಇದೇ ವೇಳೆ ರಾಹುಲ್ ಖರ್ಗೆಯವರಿಗೆ ಭೂಮಿ ಮಂಜೂರು ಮಾಡಿರುವುದು ಅಧಿಕಾರ ದುರುಪಯೋಗ ಮತ್ತು ಸ್ವಜನಪಕ್ಷಪಾತ ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯ ಟೀಕಿಸಿದ್ದರು.