Home ಇನ್ನಷ್ಟು ಕೋರ್ಟು - ಕಾನೂನು ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು

ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು

0

ಬೆಂಗಳೂರು: ಮಾಜಿ ಸಂಸದ ‍‍ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆಯೊಬ್ಬರ ಅಪಹರಣದ ಆರೋಪಕ್ಕೆ ಗುರಿಯಾಗಿರುವ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ

‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಈ ಆದೇಶವನ್ನು ಪ್ರಕಟಿಸಿದೆ.

‘ಮಹಿಳೆಯರ ರಕ್ಷಣೆ ವಿಚಾರದಲ್ಲಿ ಅವರನ್ನು ಅನಗತ್ಯವಾಗಿ ವಶಕ್ಕೆ ಪಡೆಯುವ ಅಗತ್ಯವಿಲ್ಲ. ಆದಾಗ್ಯೂ ಅವರನ್ನು ತನಿಖೆಗಾಗಿ ಮೈಸೂರು ಮತ್ತು ಹಾಸನ ಹಾಗೂ ಅಗತ್ಯವಿದ್ದ ಕಡೆ ಕರೆದುಕೊಂಡು ಹೋಗಬಹುದಾಗಿದೆ. ಈಗಾಗಲೇ ಅರ್ಜಿದಾರರು ತನಿಖೆಗೆ ಸಹಕಾರ ನೀಡಿದ್ದಾರೆ. ಅವರಿಗೆ ತನಿಖೆಯ ವೇಳೆ 85 ಪ್ರಶ್ನೆಗಳನ್ನು ಕೇಳಲಾಗಿದೆ. ಅವರು ಎಲ್ಲವಕ್ಕೂ ಉತ್ತರಿಸಿದ್ದಾರೆ. ಪೊಲೀಸರು ಕೇಳಿದ ರೀತಿಯಲ್ಲೇ ಉತ್ತರಿಸಬೇಕು ಎಂದು ಹೇಳಲಾಗುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಮಾದ್ಯಮಗಳಿಗೆ ಬುದ್ಧಿ ಹೇಳಿದ ಕೋರ್ಟ್‌: ಸಾಮಾನ್ಯ ಜನರು ಮಾಧ್ಯಮಗಳನ್ನು ಗಮನಿಸಿ ಚರ್ಚೆ ನಡೆಸುತ್ತಾರೆ. ಆದರೆ, ಈ ಬಗ್ಗೆ ಯಾರೂ ನಿರ್ಧಾರ ಮಾಡುವುದಕ್ಕೆ ಸಾಧ್ಯವಿಲ್ಲ ಪತ್ರಿಕೆಗಳನ್ನು ನೋಡಿ ನಾವು ಆದೇಶ ನೀಡಲಾಗದು. ನಾಗರಿಕ ಸಮಾಜ ಸ್ವಲ್ಪ ಸಂಯಮ ಪ್ರದರ್ಶನ ಮಾಡಬೇಕು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಸ್ತ್ರೀಯರು ಈ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶಗಳಿರುವಾಗ ವಾರ್ತಾ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಸಂಯಮದಿಂದ ಇರಬೇಕಾಗುತ್ತದೆ. ಈಗಲೇ ಅಪರಾಧಿ ಎಂದರೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗಲಿದೆ. ಮಾಧ್ಯಮಗಳ ವಿಚಾರಣೆ ಪರಿಗಣಿಸಲಾಗದು’ ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ನ್ಯಾಯಪೀಠ ಉಲ್ಲೇಖಿಸಿದೆ.

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಪ್ರಕರಣದ ಮೊದಲ ಆರೋಪಿ ಎಚ್‌.ಡಿ.ರೇವಣ್ಣ ಬಂಧನಕ್ಕೊಳಗಾಗಿದ್ದರು. ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದಲ್ಲಿ ಭವಾನಿ ಅವರ ಹೆಸರೂ ಕೇಳಿ ಬಂದ ಕಾರಣ ಭವಾನಿ ನಿರೀಕ್ಷಣಾ ಜಾಮೀನು ಕೋರಿದ್ದರು. ಅವರನ್ನು ಬಂಧಿಸದಂತೆ ಹೈಕೋರ್ಟ್‌ನ ಜನಪ್ರತಿನಿಧಿಗಳ ವಿಶೇಷ ನ್ಯಾಯಪೀಠ ಮಧ್ಯಂತರ ಜಾಮೀನು ನೀಡಿತ್ತು. ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಇದೇ 7ರಂದು ಸೂಚಿಸಿತ್ತು.

You cannot copy content of this page

Exit mobile version