ನವದೆಹಲಿ: ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಮಂಗಳವಾರ ಜಂತರ್ ಮಂತರ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರು ಈ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
“24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದಾರೆ. ಅವರು ಪರೀಕ್ಷೆಗೆ ದಿನಕ್ಕೆ 16ರಿಂದ 18 ಗಂಟೆಗಳ ಕಾಲ ತಯಾರಿ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಪಾಸ್ ಆಗಲು ಲಂಚ ಕೊಡುವ ಪರಿಪಾಟವನ್ನು ಈ ಹಿಂದೆ ಜನರು ಕೇಳಿರಲಿಲ್ಲ” ಎಂದು ಅವರು ಹೇಳಿದರು.
ಭಾರದ್ವಾಜ್ ಅವರು ಬಿಹಾರದ ಉದಾಹರಣೆಯನ್ನು ಉಲ್ಲೇಖಿಸಿ, ಕೆಲವು ಆಕಾಂಕ್ಷಿಗಳಿಗೆ ಮೇ 5ರ ಪರಿಕ್ಷೆಗೂ ಒಂದು ದಿನ ಮೊದಲು ಪಾಟ್ನಾ ಬಳಿಯ ಮನೆಯೊಂದರಲ್ಲಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ನೀಡಲಾಗಿತ್ತು ಎಂದು ಹೇಳಿದರು.
“ಕೆಲವು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಈ ವಿಷಯವನ್ನು ತನಿಖೆ ಮಾಡಲು ಸಮಿತಿಯನ್ನು ರಚಿಸಬೇಕು ಮತ್ತು ಅದನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡಬೇಕು” ಎಂದು ಅವರು ಹೇಳಿದರು.
NEET-UG 2024ರ ಸಾಲಿನ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿತ್ತು. ಈ ಪರೀಕ್ಷೆಯಲ್ಲಿ 571 ನಗರಗಳ 4,750 ಕೇಂದ್ರಗಳಲ್ಲಿ 24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಭವಿಷ್ಯ ಪರೀಕ್ಷಿಸಿದ್ದರು.