Home ದೇಶ ರಾಜ್ಯಸಭೆಗೆ ನಿತೀಶ್ ನಾಮಪತ್ರ: ಜೆಡಿಯು ಕಚೇರಿ ಮುಂದೆ ಕಾರ್ಯಕರ್ತರಿಂದ ಭಾರಿ ಪ್ರತಿಭಟನೆ

ರಾಜ್ಯಸಭೆಗೆ ನಿತೀಶ್ ನಾಮಪತ್ರ: ಜೆಡಿಯು ಕಚೇರಿ ಮುಂದೆ ಕಾರ್ಯಕರ್ತರಿಂದ ಭಾರಿ ಪ್ರತಿಭಟನೆ

0

ಶುಕ್ರವಾರ ಪಾಟ್ನಾದಲ್ಲಿರುವ ಜೆಡಿಯು ಕಚೇರಿ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು, ತಮ್ಮದೇ ಪಕ್ಷದ ಕೆಲವು ನಾಯಕರು ಮತ್ತು ಮೈತ್ರಿ ಪಕ್ಷ ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಮದ್ಯಪಾನ ನಿಷೇಧ ಜಾರಿಗೆ ತಂದಿದ್ದ ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು “ಮದ್ಯದ ಮಾಫಿಯಾ” ದೊಡ್ಡ ಮಟ್ಟದ ಪಿತೂರಿ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

ಕಾರ್ಯಕರ್ತರು ತಮ್ಮ ಪಕ್ಷದ ಹಿರಿಯ ನಾಯಕರಾದ ಕೇಂದ್ರ ಸಚಿವ ಲಲನ್ ಸಿಂಗ್ ಮತ್ತು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, ಪಕ್ಷದಲ್ಲಿ “ಜಯಚಂದರ” (ದ್ರೋಹಿಗಳ) ಪಾತ್ರ ವಹಿಸುತ್ತಿರುವವರು ಇದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯೊಂದಿಗೆ ಕೋಟಿಗಟ್ಟಲೆ ರೂಪಾಯಿಗಳ ಡೀಲ್ ಕುದುರಿಸಲಾಗಿದ್ದು, ನಿತೀಶ್ ಕುಮಾರ್ ಅವರನ್ನು ಬಿಹಾರದಿಂದ ಹೊರಹಾಕುವ ಮೂಲಕ ಮದ್ಯಪಾನ ನಿಷೇಧವನ್ನು ರದ್ದುಗೊಳಿಸಲು ದಾರಿ ಮಾಡಿಕೊಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

“ಬಿಜೆಪಿಯು ಕೇಂದ್ರದಲ್ಲಿ ನಮ್ಮ ಸಹಾಯದಿಂದ ಸರ್ಕಾರ ನಡೆಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಬಹುಮತ ಕಳೆದುಕೊಂಡಿದ್ದರು. ಆದರೆ ಬಿಹಾರದಲ್ಲಿ ‘ಪಚೀಸ್ ಸೇ ತೀಸ್, ಫಿರ್ ಸೇ ನಿತೀಶ್’ (2025 ರಿಂದ 30ರವರೆಗೆ ಮತ್ತೆ ನಿತೀಶ್) ಎಂಬ ಘೋಷಣೆಯಡಿ ಎನ್‌ಡಿಎ ಭರ್ಜರಿ ಜಯ ಸಾಧಿಸಿತ್ತು. ಈಗ ನಮ್ಮ ನಾಯಕನ ವಿರುದ್ಧವೇ ಸಂಚು ಹೂಡಿರುವ ಬಿಜೆಪಿಗೆ ಬಿಹಾರದಲ್ಲಿ ತಕ್ಕ ಪಾಠ ಕಲಿಸಲಾಗುವುದು” ಎಂದು ಜೆಡಿಯು ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಪಕ್ಷವು ವಿಘಟನೆಯಾಗುವುದನ್ನು ತಡೆಯಲು ನಿತೀಶ್ ಕುಮಾರ್ ಅವರ ಏಕೈಕ ಪುತ್ರ ನಿಶಾಂತ್ ಕುಮಾರ್ ಅವರನ್ನು ಸಕ್ರಿಯ ರಾಜಕೀಯಕ್ಕೆ ತರಲು ಸಿದ್ಧತೆ ನಡೆಸಲಾಗಿದೆ. ನಿನ್ನೆ ಸಂಜೆ ನಿತೀಶ್ ಕುಮಾರ್ ಅವರ ನಿವಾಸದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿಶಾಂತ್ ಅವರಿಗೆ ಪಕ್ಷದಲ್ಲಿ ಯಾವ ಜವಾಬ್ದಾರಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಿದ್ದ ನಿತೀಶ್, ಈಗ ಪಕ್ಷದ ಹಿತದೃಷ್ಟಿಯಿಂದ ಪುತ್ರನನ್ನು ರಾಜಕೀಯಕ್ಕೆ ತರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

You cannot copy content of this page

Exit mobile version