ಮುಂಬೈ: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಹಿರಿಯ ವೈದ್ಯರೊಬ್ಬರು 2021ರಲ್ಲಿ ತಮ್ಮ ಸಹೋದ್ಯೋಗಿಯ ಬಳಿ ಕೋವಿಡ್ ರೋಗಿಯನ್ನು ಕೊಲ್ಲಲು ಹೇಳಿದ್ದರ ವಿರುದ್ಧ ಪ್ರಕರಣ ದಾಖಲಾಗಿದೆ.
ಅದೃಷ್ಟವಶಾತ್, ರೋಗಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಪೊಲೀಸರ ಪ್ರಕಾರ, ಕೌಸರ್ ಫಾತಿಮಾ (41) ಅವರನ್ನು 2021ರಲ್ಲಿ ಕೋವಿಡ್ -19 ಚಿಕಿತ್ಸೆಗಾಗಿ ಉದ್ಗೀರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ, ಸಾಂಕ್ರಾಮಿಕ ಪಿಡುಗು ಉತ್ತುಂಗದಲ್ಲಿತ್ತು.
ಡಾ. ಶಶಿಕಾಂತ್ ದೇಶಪಾಂಡೆ ಈ ಆಸ್ಪತ್ರೆಯಲ್ಲಿ ಹೆಚ್ಚುವರಿ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡುತ್ತಿದ್ದರು. ಡಾ. ಡಾಂಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ, ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿದ್ದವು. ದೇಶಪಾಂಡೆ ತಮ್ಮ ಸಹೋದ್ಯೋಗಿ ಡಾ. ಡಾಂಗೆ ಅವರೊಂದಿಗೆ ಮಾತನಾಡುತ್ತಿರುವ ಆಡಿಯೋ ಕ್ಲಿಪ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ, ಡಾ. ದೇಶಪಾಂಡೆ ‘ಯಾರನ್ನೂ ಒಳಗೆ ಬಿಡಬೇಡಿ’ ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ.
ದಯಾಮಿ ‘ಮಹಿಳೆಯನ್ನು ಕೊಲ್ಲು’ ಎಂದು ಹೇಳುತ್ತಿರುವುದು ಸಹ ಇದೇ ಆಡಿಯೋದ್ಲಲಿ ಕೇಳಿಸುತ್ತದೆ. ಇದಕ್ಕೆ ಪ್ರತಿಕ್ರಿಯಿಸುತ್ತಾ ಡಾ. ಡಾಂಗೆ ಅವರ ಆಕ್ಸಿಜನ್ ಸಪೋರ್ಟ್ ಕಡಿಮೆಯಾಗಿದೆ ಎಂದು ಹೇಳುತ್ತಿರುವುದು ಕೇಳಿದೆ.
ರೋಗಿಯ ಪತಿ ದಯಾಮಿ ಅಜೀಮುದ್ದೀನ್ ಗೌಸುದ್ದೀನ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಫೋನ್ ಸಂಭಾಷಣೆ ನಡೆದಾಗ ತಾವು ಡಾ. ಡಾಂಗೆ ಜೊತೆಗಿದ್ದೆವು ಎಂದು ಹೇಳಿದ್ದಾರೆ. ಏಳನೇ ದಿನ ಈ ವೈದ್ಯರು ಈ ರೀತಿ ಮಾತನಾಡಿದರು ಎಂದು ಅವರು ಹೇಳಿದರು.