ಬೆಂಗಳೂರಿನ ಕೋಗಿಲು ಪ್ರದೇಶದಲ್ಲಿ ನಡೆದ ಅನಧಿಕೃತ ಬಡಾವಣೆ ಮತ್ತು ಗುಡಿಸಲುಗಳ ತೆರವು ಕಾರ್ಯಾಚರಣೆಯ ಕುರಿತು ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಈ ಬಡಾವಣೆ ಬಿಜೆಪಿ ಆಡಳಿತಾವಧಿಯಲ್ಲೇ ನಿರ್ಮಾಣವಾಗಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ವಿವಿಧ ಪಕ್ಷಗಳು ಅಧಿಕಾರ ನಡೆಸಿವೆ, ಹೀಗಾಗಿ ಕೋಗಿಲು ಬಡಾವಣೆ ಯಾರ ಅವಧಿಯಲ್ಲಿ ನಿರ್ಮಾಣವಾಯಿತು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ ಎಂದು ಅವರು ತಿಳಿಸಿದರು.
ಕೋಗಿಲು ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಗುಡಿಸಲುಗಳು ಅನಧಿಕೃತವಾಗಿದ್ದ ಕಾರಣ ಅವುಗಳನ್ನು ತೆರವುಗೊಳಿಸಲಾಗಿದೆ. ಇದು ಚರ್ಚೆ ಮಾಡುವಂತಹ ದೊಡ್ಡ ವಿಷಯವಲ್ಲ ಎಂದು ಹೇಳಿದ ಸಚಿವರು, ಈಗಾಗಲೇ ಸಂತ್ರಸ್ತರಿಗೆ ಪರಿಹಾರ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರವು ಪರ್ಯಾಯ ಕ್ರಮಗಳ ಭರವಸೆ ನೀಡಿರುವುದರಿಂದ ಈ ವಿಷಯವನ್ನು ಮತ್ತೆ ಪ್ರಸ್ತಾಪಿಸುವುದು ಅಪ್ರಸ್ತುತ ಎಂದು ಅವರು ಪ್ರತಿಪಾದಿಸಿದರು.
