“..ಟೀಮ್ ಇಂಡಿಯಾ ಮುಂದಿನ ಟೆಸ್ಟ್ ಮ್ಯಾಚ್ ಆಡಲು ಬರೋಬ್ಬರಿ ಏಳೆಂಟು ತಿಂಗಳು ಕಾಯಬೇಕು. ಈ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ಜಡೇಜಾ ರಿಟೈರ್‌ಮೆಂಟ್ ಘೋಷಿಸಿ, ಹೊಸ ಆಟಗಾರರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು..”
ಬಾರ್ಡರ್ ಗವಾಸ್ಕರ್ ಟ್ರೋಫಿ ಇಂಡಿಯಾ ಕೈಯಿಂದ ಆಸೀಸ್‌ಗಳ ಕೈಗೆ ಹೋಗಿಯಾಗಿದೆ! ಬರೋಬ್ಬರಿ ಹತ್ತು ವರ್ಷಗಳ ನಂತರ ಆಸ್ಟ್ರೇಲಿಯಾ ಈ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿಬಿಟ್ಟಿದೆ. ಅಸಲಿಗೆ ಈ ಟ್ರೋಫಿ ಇನ್ನೂ ಇಂಡಿಯಾದಲ್ಲೇ ಇರುವ ವಿಫುಲ ಅವಕಾಶಗಳು ಇದ್ದಾಗ್ಯೂ ಆಟಗಾರರ ಮೈಮರೆತು, ಅನಾಮತ್ತಾಗಿ ಟ್ರೋಫಿಯನ್ನು ಎತ್ತಿ ಗಿಫ್ಟ್ ರೂಪದಲ್ಲಿ ಕೊಟ್ಟುಬಿಟ್ಟರು!
ಹೌದು, ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಡಿಯಾ ಭರ್ಜರಿಯಾಗಿ ಅಂದರೆ ತುಂಬಾ ಸುಲಭವಾಗಿ ಗೆದ್ದು ಸಂಭ್ರಮಿಸಿತು! ಆ ಗೆಲುವೇ ಟೀಮ್ ಇಂಡಿಯಾದ ಸೋಲಿಗೆ ಮುನ್ನುಡಿ ಬರೆಯಿತೆಂದರೆ ತಪ್ಪಾಗಲಾರದು. 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 318 ರನ್‌ಗಳ ಗೆಲುವು ಬಿಟ್ಟರೆ, ಈ ಬಾರ್ಡರ್ ಗವಾಸ್ಕರ್ ಟ್ರೋಫಿಯ ಪರ್ತ್ ಟೆಸ್ಟ್‌ನ ಮೊದಲ ಪಂದ್ಯದಲ್ಲಿ ಗೆದ್ದ 295 ರನ್‌ಗಳ ಭರ್ಜರಿ ಗೆಲುವೇ ಏಷಿಯಾ ಪಿಚ್‌ನಿಂದಾಚೆಗೆ ಇಂಡಿಯಾ ದಾಖಲಿಸಿದ ಅತಿ ದೊಡ್ಡ ಗೆಲುವು. ಆ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಆಡದಿದ್ದರೂ, ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರಾ ಕಮಾಲ್ ತಮ್ಮ ಬೌಲಿಂಗ್ ಮೂಲಕ ಕಮಾಲ್ ಮಾಡಿ ಆ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಆಸ್ಟ್ರೇಲಿಯಾದ ಮೇನ್ ಸ್ಟ್ರೀಮ್ ಮಾಧ್ಯಮಗಳು ಟೀಮ್ ಇಂಡಿಯಾದ ಈ ಸಾಧನೆಯನ್ನು ಕೊಂಡಾಡಿದವು. ಬೂಮ್ರಾ ಆಟವಷ್ಟೇ ಅಲ್ಲದೇ, ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿಯ ಸೆಂಚುರಿ ಗೇಮ್ ಅನ್ನು ಹಾಡಿ ಕೊಂಡಾಡಿದವು.
ಆ ಮೊದಲ ಗೆಲುವಿನ ನಂತರ ಟೀಮ್ ಇಂಡಿಯಾಗೆ ಬರೋಬ್ಬರಿ 10 ದಿನಗಳ ರೆಸ್ಟ್ ಸಿಕ್ಕಿಬಿಟ್ಟಿತು. ಮೊದಲೇ ಗೆಲುವಿನ ಜೋಶ್‌ನಲ್ಲಿದ್ದ ಆಟಗಾರರು ಜಾಲಿ ಜಾಲಿ ಅಂತ ಪಾರ್ಟಿ ಮೋಡ್‌ಗೆ ಜಾರಿಬಿಟ್ಟರು. ಆಮೇಲೆ ಬಂದದ್ದೇ ಪಿಂಕ್ ಟೆಸ್ಟ್ ಭೂತ! ಇದುವರೆಗೂ ಒಂದುಬಾರಿಯೂ ಪಿಂಕ್ ಬಾಲ್ ಟೆಸ್ಟ್ ಆಡದ ಟೀಮ್ ಇಂಡಿಯಾ ಪಿಂಕ್ ಟೆಸ್ಟ್ ಅನ್ನು ಅಕ್ಷರಶಃ ಕೇರ್‌ಲೆಸ್ ಮಾಡಿಬಿಟ್ಟಿತು! ಈ ಪಿಂಕ್ ಬಾಲ್ ಟೆಸ್ಟ್ ಶುರುವಾಗಲು ಕಾರಣವೇನು ಎಂದು ತಿಳಿದು ಅಸಲಿ ಟಾಪಿಕ್ ಮುಂದುವರೆಸೋಣ.
ಪಿಂಕ್ ಟೆಸ್ಟ್ ಅನ್ನು ಶುರು ಮಾಡಿದ್ದು ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಗ್ಲೆನ್ ಮೆಗ್ರಾತ್. ಅವರ ಪತ್ನಿ ಬ್ರೆಸ್ಟ್ ಕ್ಯಾನ್ಸರ್‌ನಿಂದ ತೀರಿಕೊಳ್ಳುತ್ತಾರೆ. ಅವರ ಸ್ಮರಣಾರ್ಥವಾಗಿ ಮೆಗ್ರಾಥ್ ʻಮೆಗ್ರಾಥ್ ಫೌಂಡೇಶನ್ʼ ಸ್ಥಾಪಿಸಿ, ಪ್ರತಿ ವರ್ಷ ಒಂದೆರಡು ಪಿಂಕ್ ಟೆಸ್ ಮ್ಯಾಚ್ ಆಡಿಸಿ, ಅದರ ಮೂಲಕ ಬರುವ ಹಣವನ್ನು ಜಗತ್ತಿನಾದ್ಯಂತ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹೆಣ್ಣುಮಕ್ಕಳ ಚಿಕಿತ್ಸೆಗೆ ನೆರವಾಗುವ ಉದ್ದೇಶವನ್ನು ಈ ಪಿಂಕ್ ಟೆಸ್ಟ್ ಹೊಂದಿದೆ. ಮ್ಯಾಚ್ ನೋಡಲು ಬರುವ ಪ್ರೇಕ್ಷಕರು ಸ್ವ ಇಚ್ಛೆಯಿಂದ ಟಿಕೆಟ್ ರೇಟ್ ಮೇಲೆ ಹೆಚ್ಚುವರಿಯಾಗಿ 20 ಡಾಲರ್ ನೀಡುತ್ತಾರೆ. ಆ ಹಣ ನೇರವಾಗಿ ಮೆಗ್ರಾಥ್ ಪೌಂಡೇಶನ್‌ಗೆ ಹೋಗುತ್ತದೆ. ಇದು ಆಟವನ್ನು ಮತ್ತಷ್ಟು ಮಾನವೀಯವಾಗಿಸುವ ಪ್ರಕ್ರಿಯೆ ಅಲ್ಲವ?
ಈಗ ಇವತ್ತಿನ ಟಾಪಿಕ್‌ಗೆ ಬರೋದಾದರೆ, ಡೇ ಅಂಡ್ ನೈಟ್ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿ ಬಿತ್ತು! ಆಟದ ಲಯದಲ್ಲಿ ಮೈಮರೆತ ಯಶಸ್ವಿ ಜೈಸ್ವಾಲ್ ಮೊದಲ ಟೆಸ್ಟ್‌ನಲ್ಲಿ ಡೇಂಜರ್ ಬೌಲರ್ ಮಿಚಲ್ ಸ್ಟಾರ್ಕ್ ಅವರ ಬೌಲಿಂಗ್ ಅನ್ನು ʻಇಟ್ಸ್ ಕಮ್ ಟೂ ಸ್ಲೋʼ ಎಂದು ಆಡಿಕೊಂಡಿದ್ದರು. ಅವರ ಹೇಳಿಕಗೆ ಕಿರುನಗೆ ಚೆಲ್ಲಿದ್ದ ಸ್ಟಾರ್ಕ್ ಎರಡನೇ ಪಂದ್ಯ ಮೊದಲ ಎಸೆತದ ಪಿಂಕ್ ಬಾಲ್ ಅನ್ನು ನೇರ ಜೈಸ್ವಾಲ್ ಕಾಲಿಗೆ ಎಸೆದು ಪೆವಿಲಿಯನ್ ಹಾದಿ ತೋರಿಸಿ, ತಾನು ಎಂಥ ಆಟಗಾರ ಎಂಬುದನ್ನು ತೋರಿಸಿದರು. ಆ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಸ್ಟಾರ್ಕ್ ಒಟ್ಟು 8 ವಿಕೆಟ್ ಪಡೆದು ಸಂಭ್ರಮಿಸಿದರು. ನಾಲ್ಕನೇ ಇನ್ನಿಂಗ್ಸ್ ಬ್ಯಾಟಿಂಗ್ ಶುರು ಮಾಡಿದ ಆಸ್ಟ್ರೇಲಿಯಾಗೆ ಗೆಲ್ಲಲು ಬೇಕಾಗಿದ್ದ ರನ್ ಕೇವಲ 19…! ಹತ್ತು ವಿಕೆಟ್ ಗಳ ಭರ್ಜರಿ ಗೆಲುವಿನ ಮೂಲಕ ಆಸ್ಟ್ರೇಲಿಯಾ ಪರ್ತ್ ಟೆಸ್ಟ್‌ನ ಹೀನಾಯ ಸೋಲಿನ ಅವಮಾನದಿಂದ ಹೊರಗೆ ಬಂತು. ಅಲ್ಲಿಂದ ಶುರುವಾಯಿತು ಟೀಮ್ ಇಂಡಿಯಾದ ಸೋಲಿನ ನಾಗಾಲೋಟ.
ಪಿಂಕ್ ಬಾಲ್ ಟೆಸ್ಟ್ ಗೆಲುವಿನ ಲಯದಲ್ಲಿದ್ದ ಆಸ್ಟ್ರೇಲಿಯಾ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ 445 ರನ್ ಕಲೆಹಾಕಿತು. ನೆನಪಿರಲಿ ಇಂಡಿಯಾದ ಸ್ಟಾರ್ ಬೌಲರ್ ಬೂಮ್ರಾ ಈ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದರೂ ಇಷ್ಟೊಂದು ರನ್ ಕಲೆಹಾಕಿ, ಟೀಮ್ ಇಂಡಿಯಾಗೆ ಸವಾಲು ಹಾಕಿತ್ತು. ಮೊದಲ ಇನ್ನಿಂಗ್ಸ್ ಆಟ ಶುರು ಮಾಡಿದ ಟೀಮ್ ಇಂಡಿಯಾದ ಓಪನರ್ ಜೈಸ್ವಾಲ್‌ಗೆ ಮತ್ತೊಮ್ಮೆ ಸಿಂಹ ಸ್ವಪ್ನವಾಗಿ ಕಾಡಿದ್ದು ಮಿಷಲ್ ಸ್ಟಾರ್ಕ್! ಮೊದಲ ಬಾಲಿಗೆ ಬೌಂಡರಿ ಸಿಡಿಸಿದ ಸಂಭ್ರಮದಲ್ಲಿದ್ದ ಜೈಸ್ವಾಲ್ ಅನ್ನು ಎರಡನೇ ಎಸೆತದಲ್ಲಿ ಪೆವಿಲಿಯನ್ ಹಾದಿ ತೋರಿಸಿದರು! ಮಳೆ ಬಾರದಿದ್ದರೆ ಬ್ರಿಸ್ಬೇನ್ ಟೆಸ್ಟ್ ರೋಚಕವಾಗುತ್ತಿತ್ತು. ಆ ಮಟ್ಟಿಗೆ ಇಂಡಿಯಾ ಮೂರನೇ ಟೆಸ್ಟ್‌ನಲ್ಲಿ ಫೈಟ್‌ಬ್ಯಾಕ್ ನೀಡಿದ್ದು ಸುಳ್ಳಲ್ಲ.
ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾದ ನಾಲ್ಕನೇ ಟೆಸ್ಟ್ ಅನ್ನು ಕ್ರಿಕೆಟ್ ಫ್ಯಾನ್ಸ್ ಮರೆಯಲು ಸಾಧ್ಯವೇ ಇಲ್ಲ. ಅಷ್ಟೊಂದು ಡ್ರಾಮಾಗಳು ಈ ಟೆಸ್ಟ್‌ನಲ್ಲಿ ಜರುಗಿದವು! ತನ್ನ ಡೆಬ್ಯೂ ಮ್ಯಾಚ್ ಆಡಲು ಬಂದ ಸ್ಯಾಮ್ ಕೋಂಟಸ್ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಬೂಮ್ರಾ ಅವರ ಬೌಲಿಂಗ್ ಅನ್ನು ಸ್ಕೂಪ್ ಮಾಡಿ ಭರ್ಜರಿ ಎರಡು ಸಿಕ್ಸರ್ ಸಿಡಿಸಿಬಿಟ್ಟರು! ಇಡೀ ಮೈದಾನ ಅಕ್ಷರಶಃ ಹೀಟ್ ಆಯಿತು. ಕೋಂಟಸ್‌ನ ಆಕ್ರಮಣಕಾರಿ, ಅನ್ ಯೂಸುಅಲ್ ಆಟದಿಂದ ಬೆಚ್ಚಿ ಬಿದ್ದಂತೆ ಕಂಡ ಟೀಮ್ ಇಂಡಿಯಾದ ಮತ್ತೊಬ್ಬ ದಿಗ್ಗಜ ವಿರಾಟ್ ಕೊಹ್ಲಿ ಆ ಸಣ್ಣ ಹುಡುಗನ ಭುಜಕ್ಕೆ ಭುಜ ತಾಗಿಸಿ ಟೀಕೆಗೆ ಒಳಗಾಗಿ, ರೆಫರಿಯ ಹತ್ರ ಸ್ಸಾರಿ ಕೇಳಿ, ದಂಡವನ್ನೂ ತೆತ್ತರು. ತನ್ನ ಪಾಡಿಗೆ ತಾನು ತನ್ನಾಟವನ್ನು ಆಡುತ್ತಿದ್ದ ಕೋಂಟಾಸ್ ಪಂದ್ಯದ ಕೇಂದ್ರ ಬಿಂದುವನ್ನಾಗಿಸಿದ್ದು ಕಿಂಗ್ ಎಂಬ ಕೋಹ್ಲಿ ಎಂದರೆ ತಪ್ಪಾಗಲಾರದು. ಹಿರಿಯ ಆಟಗಾರರನ್ನು ಕೆಣಕುವ ರೀತಿ ಮಾತನಾಡಿದ ಜೈಸ್ವಾಲ್‌ನದ್ದು ಎಷ್ಟು ಪ್ರಮಾದವೋ, ಎಳೆಯ ಆಟಗಾರರನ್ನು ಕೆಣಕಿದ ಕೊಹ್ಲಿಯದ್ದು ಅಷ್ಟೇ ಪ್ರಮಾದ. ಒಂದರ್ಥದಲ್ಲಿ ಹೇಳುವುದಾದರೆ, ಕೋಂಟಸ್‌ನಂಥ ಎಳಸಿಗೆ ಕೋಹ್ಲಿ ಮಾಡಿದ್ದು ಕಾಸ್ಟ್ಲೀ ಕ್ಯಾಂಪೇನ್! ಯಾಕೆಂದರೆ, ಅಲ್ಲಿಂದ ಕೊಂಟಾಸ್ ನ ಬಾಡಿ ಲಾಂಗ್ವೇಜ್ ಬದಲಾಯಿತು. ಶಾರ್ಟ್ ಲೆಗ್‌ನಲ್ಲಿ ಫೀಲ್ಡ್ ಮಾಡುವಾಗ ಚಾಟರ್ ಬಾಕ್ಸ್‌ನಂತೆ ಒಂದೇ ಸಮ ಮಾತನಾಡುತ್ತಾ, ಇಂಡಿಯನ್ ಬ್ಯಾಟರ್‌ಗಳ ಏಕಾಗ್ರತೆಗೆ ಭಂಗ ತಂದು ತನ್ನ ತಂಡವನ್ನು ಗೆಲ್ಲಿಸಿಕೊಂಡ! ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಿದ ಈ ಟೆಸ್ಟ್ ಪಂದ್ಯದಲ್ಲಿ ಇಂಡಿಯಾ ಪರ ಸಿಕ್ಕ ಒಂದೇ ಒಂದು ಸಮಾಧಾನಕ ಸಂಗತಿ ಎಂದರೆ ನಿತೀಶ್ ಕುಮಾರ್ ರೆಡ್ಡಿಯ ಆ ಅತ್ಯ ಅಮೂಲ್ಯ ಸೆಂಚುರಿ. ಫಾಲೋ ಆನ್ ಭೀತಿಯಲ್ಲಿದ್ದ ಟೀಮ್ ಇಂಡಿಯಾವನ್ನು ಆ ಭೀತಿಯಿಂದ ಪಾರು ಮಾಡಿ, ತನ್ನ ತಂದೆಯ ಉಪಸ್ಥಿತಿಯಲ್ಲಿ ಸೆಂಚುರಿ ಮಾಡಿ ಘಳಿಗೆಯನ್ನು, ಅವರ ತಂದೆಯ ಆನಂದದ ಕಣ್ಣೀರನ್ನು ಯಾರೂ ಕೂಡಾ ಮರೆಯಲು ಸಾಧ್ಯವಿಲ್ಲ.
ಇನ್ನು ಕಡೆಯ ಟೆಸ್ಟ್ ಅಂತೂ ಒಂಥರಾ ಸ್ಕ್ರಿಪ್ಟೆಡ್ ಡ್ರಾಮಾ ಇದ್ದಂಗೆ ಇತ್ತು. ಕಳಪೆ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ತಾನೇ ಹೊರಗೆ ಕುಳಿತು, ಶುಭಮನ್ ಗಿಲ್‌ಗೆ ಅವಕಾಶ ಕೊಟ್ಟದ್ದು ಮೇಲ್ನೋಟಕ್ಕೆ ಸರಿ ಎನಿಸಿದರೂ, ಆಳಕ್ಕಿಳಿದು ನೋಡಿದಾಗ ರಾಂಗ್ ಡಿಸಿಶನ್ ಎನಿಸಿಬಿಡುತ್ತದೆ. ಫಾರ್ಮ್‌ನಲ್ಲಿ ಇಲ್ಲದ ಆಟಗಾರ ಬೆಂಚ್‌ನಲ್ಲಿ ಕೂರಬೇಕೆಂದರೆ ಆ ಜಾಗವನ್ನು ಫಾರ್ಮ್‌ನಲ್ಲಿ ಇರುವ ಆಟಗಾರ ತುಂಬಬೇಕಾಗುತ್ತದೆ. ಶುಭಮನ್ ಗಿಲ್ ಯಾವಾಗ ಫಾರ್ಮ್‌ನಲ್ಲಿ ಇದ್ದರು? ಅದ್ಯಾವ ಕಾರಣಕ್ಕೆ ಅವರನ್ನು ಆಸ್ಟ್ರೇಲಿಯಾದಂಥ ಬೌಲರ್ ಸ್ನೇಹಿ ಪಿಚ್‌ಗೆ ಆಯ್ಕೆ ಮಾಡಿದರೋ ಎಂಬುದನ್ನು ಸ್ವತಃ ಅಜಿತ್ ಅಗರ್ಕರ್ ಮತ್ತೊ ಕೋಚ್ ಗೌತಮ್ ಗಂಭೀರ್ ತಿಳಿಸಬೇಕು. ಹೊಸ ಆಟಗಾರನಿಗೆ ಅವಕಾಶ ಕೊಟ್ಟಿದ್ದರೆ ಮಾನವಾದರೂ ಉಳಿಯುತ್ತಿತ್ತು. ಉಳಿದಂತೆ ರೋಹಿತ್ ಅನುಪಸ್ಥಿತಿಯಲ್ಲಿ ಬೂಮ್ರಾ ಕ್ಯಾಪ್ಟನ್ ಕ್ಯಾಪ್ ಧರಿಸಿ ಬೌಲಿಂಗ್ ಅಟ್ಯಾಕಿಗೆ ಬಂದು ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನೇನೋ ಕಾಡಿದರು! ಆದರೆ ಗಾಯದ ನೆಪವೊಡ್ಡಿ ಪೆವಿಲಿಯನ್ ಸೇರಿಕೊಂಡವರು ವಾಪಸ್ ಫೀಲ್ಡಿಗೆ ಬರಲೇ ಇಲ್ಲ! ಅದೂ ಅಲ್ಲದೆ, ಸ್ಪಿನ್ನರ್ ಸ್ನೇಹಿ ಅಲ್ಲದ ಈ ಸಿಡ್ನಿ ಪಿಚ್‌ನಲ್ಲಿ ವಾಶಿಂಗ್ ಟನ್ ಸುಂದರ್ ಮತ್ತು ಜಡೇಜಾ ಬದಲಿಗೆ ಇನ್ನಿಬ್ಬರು ಬ್ಯಾಟರ್‌ಗಳಿಗೆ ಅವಕಾಶ ಕೊಟ್ಟಿದ್ದರೆ ಉತ್ತಮ ಸ್ಕೋರ್ ಮಾಡಿ, ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾಗೆ ಇತ್ತು. ಆದರೆ, ಡ್ರಾಮಾದಲ್ಲಿ ಮುಳುಗಿಹೋಗಿ, ಸರಣಿಯನ್ನೇ ಕೈ ಚೆಲ್ಲಿದ ಟೀಮ್ ಇಂಡಿಯಾ, ಅದರ ಮ್ಯಾನೇಜ್‌ಮೆಂಟ್ ಹೀಗೆಲ್ಲಾ ಯೋಚಿಸಲಿಲ್ಲವಲ್ಲ ಎಂಬುದೇ ಅಚ್ಚರಿ!
ಈಗ ಸರಣಿಯನ್ನು ಹೀನಾಯವಾಗಿ ಸೋತಾಗಿದೆ. ಟೀಮ್ ಇಂಡಿಯಾ ಮುಂದಿನ ಟೆಸ್ಟ್ ಮ್ಯಾಚ್ ಆಡಲು ಬರೋಬ್ಬರಿ ಏಳೆಂಟು ತಿಂಗಳು ಕಾಯಬೇಕು. ಈ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ಜಡೇಜಾ ರಿಟೈರ್‌ಮೆಂಟ್ ಘೋಷಿಸಿ, ಹೊಸ ಆಟಗಾರರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು. ಕೆ ಎಲ್ ರಾಹುಲ್ ಅವರನ್ನು ಮೇಲೆ ಕೆಳಗೆ ಆಡಿಸಿ, ಅವರ ಆಟವನ್ನು ಕೆಡಿಸದೆ ಓಪನರ್ ಸ್ಥಾನದಲ್ಲೇ ಗಟ್ಟಿಯಾಗಿ ಉಳಿಸಿಕೊಳ್ಳಬೇಕು. ಬೂಮ್ರಾ ಒಬ್ಬರನ್ನೇ ನೆಚ್ಚಿಕೊಳ್ಳದೇ ಇನ್ನಿಬ್ಬರು ವೇಗಿಗಳನ್ನು ರೆಡಿ ಮಾಡಬೇಕು. ಕಡೆಯದಾಗಿ ಕೋಂಟಸ್ ಥರದ ಎಳಸು ಆಟಗಾರರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡದೆ ತನ್ನ ಆಟ ತಾನು ಆಡಿಬಿಟ್ಟರೆ, ಟೆಸ್ಟ್ ಆಟದಲ್ಲಿ ಇಂಡಿಯಾದ ಹಿಡಿತವನ್ನು ತಪ್ಪಿಸಲು ಯಾವ ತಂಡಕ್ಕೂ ಸಾಧ್ಯವಾಗಲಾರದು. ನಮಸ್ಕಾರ