ಮಥುರಾ: ಭಕ್ತರು ನೀಡಿದ ಕಾಣಿಕೆ ಹಣವನ್ನು ವಸೂಲಿ ಮಾಡುತ್ತಿದ್ದ ಇಸ್ಕಾನ್ ದೇವಸ್ಥಾನದ ಉದ್ಯೋಗಿಯೊಬ್ಬರು ರಸೀದಿ ಪುಸ್ತಕ ಸಮೇತ ಲಕ್ಷಾಂತರ ರೂಪಾಯಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ದೇವಸ್ಥಾನದ ಮುಖ್ಯ ಹಣಕಾಸು ಅಧಿಕಾರಿ ವಿಶ್ವ ನಾಮ ದಾಸ್ ಅವರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅರವಿಂದ್ ಕುಮಾರ್ ತಿಳಿಸಿದ್ದಾರೆ.
ದಾಸ್ ಅವರು ಡಿಸೆಂಬರ್ 27ರಂದು ಎಸ್‌ಎಸ್‌ಪಿ ಶೈಲೇಶ್ ಕುಮಾರ್ ಪಾಂಡೆ ಅವರಿಗೆ ಕಳ್ಳತನದ ಬಗ್ಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. ಪ್ರಾಥಮಿಕ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಲಾಗಿದೆ.
ದೇವಸ್ಥಾನದ ಪಿಆರ್‌ಒ ರವಿ ಲೋಚನ್ ದಾಸ್ ಮಾತನಾಡಿ, ಜನರು ನೀಡಿದ ದೇಣಿಗೆ ಹಣವನ್ನು ಸಂಗ್ರಹಿಸಿ ದೇವಾಲಯದ ಅಧಿಕಾರಿಗಳಿಗೆ ಕಾಲಕಾಲಕ್ಕೆ ಜಮಾ ಮಾಡುವುದು ಮುರಳೀಧರ್ ದಾಸ್ ಕೆಲಸವಾಗಿತ್ತು ಎಂದರು.
ಪರಿಶೀಲನೆಯ ನಂತರ ಅವರು ದೇವಸ್ಥಾನಕ್ಕೆ ಎಷ್ಟು ಹಣ ಮರಳಿಸಿದ್ದಾರೆ ಎಂಬುದು ನಿಖರವಾಗಿ ತಿಳಿಯಲಿದೆ ಎಂದರು.
ಎಫ್‌ಐಆರ್ ಪ್ರಕಾರ, ನಿಮಾಯ್ ಚಂದ್ ಯಾದವ್ ಅವರ ಪುತ್ರ ಮುರಳೀಧರ್ ದಾಸ್ ಅವರು ಮಧ್ಯ ಪ್ರದೇಶದ ಇಂದೋರ್‌ನ ರೌಗಂಜ್ ವಾಸಾ ಶ್ರೀರಾಮ್ ಕಾಲೋನಿ ನಿವಾಸಿಯಾಗಿದ್ದಾರೆ.
ಹಣದ ಜತೆಗೆ 32 ಹಾಳೆಗಳಿದ್ದ ರಸೀದಿ ಪುಸ್ತಕದೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಸೌರವ್ ಎಂಬ ವ್ಯಕ್ತಿ ದೇಣಿಗೆ ಹಣ ಹಾಗೂ ರಸೀದಿ ಪುಸ್ತಕದೊಂದಿಗೆ ಪರಾರಿಯಾಗಿದ್ದ ಎಂದು ಪಿಆರ್‌ಒ ತಿಳಿಸಿದ್ದಾರೆ. ಅವನಿಂದ ವಸೂಲಿ ಮಾಡುವ ಮೊದಲೇ ಅವನು ತೀರಿಕೊಂಡಿದ್ದ.