ದೆಹಲಿ: ಕೆಲವರು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಮೂಡಿಸಲು ಯತ್ನಿಸುತ್ತಿದ್ದು, ಆ ಷಡ್ಯಂತ್ರಗಳನ್ನು ಜನರು ತಿರಸ್ಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ ‘ಗ್ರಾಮೀಣ ಭಾರತ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಕೆಲವರು ಭಾರತೀಯ ಸಮಾಜವನ್ನು ಜಾತಿಯ ಹೆಸರಿನಲ್ಲಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಿಸಿದರು. ದೇಶಾದ್ಯಂತ ಜಾತಿ ಗಣತಿ ನಡೆಸುವಂತೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತಿತರರು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಈ ಹೇಳಿಕೆ ನೀಡಿರುವುದು ಗಮನಾರ್ಹ. ಹಳ್ಳಿಗಳಲ್ಲಿ ಜನರು ಪ್ರೀತಿಯಿಂದ ಒಟ್ಟಿಗೆ ಇರುತ್ತಾರೆ. ಕೆಲವರು ಜಾತಿಯ ಹೆಸರಿನಲ್ಲಿ ವಿಷ ಹರಡಲು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಪಿತೂರಿಗಳನ್ನು ನಾವು ವಿಫಲಗೊಳಿಸಬೇಖು. ನಾವು ನಮ್ಮ ಗ್ರಾಮೀಣ ಸಾಮಾನ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಬೇಕು ಎಂದು ಮೋದಿ ಹೇಳಿದರು.
ಹಿಂದಿನ ಸರ್ಕಾರಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳು ಬಹುಸಂಖ್ಯಾತರಾಗಿರುವ ಗ್ರಾಮೀಣ ಭಾರತವನ್ನು ನಿರ್ಲಕ್ಷಿಸಿದ್ದಕ್ಕಾಗಿ ಟೀಕಿಸಲಾಗಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಗ್ರಾಮೀಣ ಆರ್ಥಿಕತೆ ಸದೃಢವಾಗಿದೆ ಎಂದರು.