ಹಾಸನ : ಗ್ರಾಮದೊಳಗೆ ಗ್ರಾನೆಟ್ ಪುಡಿ ತುಂಬಿದ ಭಾರಿ ವಾಹನಗಳು ಓಡಾಡುವುದರಿಂದ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಆಲೂರು ತಾಲೂಕಿನ ಕಿತಗಳಲೆ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಚಂದ್ರಯ್ಯ ಅವರು ಮಾತನಾಡಿ, ಆಲೂರು ತಾಲೂಕಿನ ನಮ್ಮ ಕಿತಗಳಲೆ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಪಕ್ಕದಲ್ಲಿ ಸ್ಥಾಪಿತವಾಗಿರುವ ರೆಸಾರ್ಟ್ ಗೆ ತೆರಳ ಬೇಕಿರುವ ಬಾರಿ ವಾಹನಗಳು ಪರ್ಯಾಯ ರಸ್ತೆ ಮಾರ್ಗ ಇದ್ದರೂ ಗ್ರಾಮದೊಳಗೆ ಓಡಾಡಿ ಜನರಿಗೆ ತೊಂದರೆ ಮಾಡುತ್ತಿವೆ ಎಂದರು. ಗ್ರಾನೈಟ್ ಪುಡಿಗಳನ್ನು ತುಂಬಿಕೊಂಡು ಓಡಾಡುವ ಬಾರಿ ವಾಹನಗಳಿಂದ ರಸ್ತೆಗಳು ಹಾಳಾಗಿವೆ, ಜೊತೆಗೆ ದೂಳುಮಯ ವಾತಾವರಣದಿಂದ ಅನೇಕರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಭಾರಿವಾಹನಗಳು ಗ್ರಾಮದಲ್ಲಿ ಓಡಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಈ ಮೂಲಕ ಗ್ರಾಮಸ್ಥರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಗ್ರಾಮಸ್ಥರಾದ ಯೋಗೀಶ್, ಸಂಜಯ್, ಮೇದಪ್ಪ, ಕೆಂಚಪ್ಪ, ಹರೀಶ್, ನಿಂಗರಾಜು, ನಾಗರಾಜ್, ಶಿವಯ್ಯ, ಕುಮಾರ್, ಪ್ರವೀಣ್, ಈಶ್ವರ್, ಸಂಪತ್, ಪವನ್, ರವಿ ಕುಮಾರ್ ಇತರರು ಉಪಸ್ಥಿತರಿದ್ದರು.