ದುಡಿಯುವ ಜನರ ಹಿತ ಕಾಪಾಡುವುದಕ್ಕೆ ಈ ಸಮ್ಮೇಳನ ದೇಶಾದ್ಯಂತ ನಡೆಯುತ್ತಿದೆ. ಕೇಂದ್ರ ಕಾರ್ಯಸೂಚಿ ಇದ್ದರೂ ಕೂಡ ನಮ್ಮೆಲ್ಲರ ಹೆಜ್ಜೆಗಳು ಒಂದೇ ದಿಕ್ಕಿನಲ್ಲಿ ಸಾಗುತ್ತಿವೆ. ಆಳಕ್ಕೆ ಹೋಗಿ ಒಂದು ಐಕ್ಯ ಚಳವಳಿಯನ್ನು ಕಾಪಾಡಬೇಕು ಎಂದು ಎಐಟಿಯುಸಿ ಅಮ್ಜದ್ ಅಭಿಪ್ರಾಯಪಟ್ಟರು.
ಹಾಸನದಲ್ಲಿ 13, 14, 15 ಒಟ್ಟು ಮೂರು ದಿನಗಳ ಕಾಲ ಸಿಐಟಿಯು ವತಿಯಿಂದ 16ನೇ ರಾಜ್ಯ ಸಮ್ಮೇಳನ ನಡೆಯುತ್ತಿದ್ದು, ಇಂದು ಮೊದಲ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತಿಹಾಸದಲ್ಲಿ ನಡೆದುಹೋದ ಕೆಲವು ಪ್ರಮಾದಗಳು ಪ್ರಗತಿಪರ ಚಳವಳಿಗಳಿಯ ವಿಘಟನೆಗೆ ಕಾರಣವಾಗಿದೆ. ಇಂತಹ ಪ್ರಮಾದಗಳನ್ನು ಮೆಟ್ಟಿ ಆ ಐಕ್ಯತೆಗಳನ್ನು ಕಾಪಾಡದೇ ಹೋದರೆ, ಬಹುಷಃ ಪ್ರಗತಿಪರ ಚಳುವಳಿಗಳಿಗೆ ಖಂಡಿತವಾಗಿಯೂ ಹಿನ್ನಡೆಯಾಗುತ್ತದೆ ಎಂಬ ವಿಷಮತೆಯನ್ನು ಅರಿತುಕೊಂಡೇ ಈ ಚಳವಳಿಯನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.
“ಜಗತ್ತು ವಿಜ್ಞಾನದ ನಾಗಾಲೋಟದಲ್ಲಿ ಬಿರುಸಿನಿಂದ ಮುನ್ನುಗ್ಗುತ್ತಿದೆ. ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುನ್ನಡೆಯದೆ ದ್ವಾಪರಯುಗದತ್ತ ಹಿಂದಿರುಗುತ್ತಿದೆ” ಎಂದು ಹೇಳಿದರು.
ಪ್ಲಾಂಟೇಶನ್ ಕಾರ್ಮಿಕರು, ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಫ್ಯಾಕ್ಟರಿ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ನೇತೃತ್ವ ವಹಿಸಿರುವ ಮುಖ್ಯ ಅತಿಥಿಗಳಾದ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಹೇಮಲತಾ, ರಾಷ್ಟ್ರೀಯ ಕಾರ್ಯದರ್ಶಿ ಕೆ ಎನ್ ಉಮೇಶ್, ರಾಜ್ಯ ಉಪಾಧ್ಯಕ್ಷ ವಿಜೆಕೆ ನಾಯರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಅಧ್ಯಕ್ಷತೆ ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮಿ, ಸ್ವಾಗತ ಎಚ್ ಎನ್ ಪರಮಶಿವಯ್ಯ ಸೇರಿದಂತೆ ಇತರ ಮುಖಂಡರು ಇದ್ದರು.
