Saturday, April 27, 2024

ಸತ್ಯ | ನ್ಯಾಯ |ಧರ್ಮ

ಕೋಲಾರ ಜಿಲ್ಲೆ ವಿಧಾನಸಭಾ ಕ್ಷೇತ್ರಗಳು : ಇಬ್ಬರ ಜಗಳ ಮೂರನೆಯವರಿಗೆ ಲಾಭ!

ಎಡವಿ ಬಿದ್ದರೆ ಪಕ್ಕದಲ್ಲೇ ಬೆಂಗಳೂರು. ಆ ಕಡೆಗೆ ಆಂಧ್ರ. ಅತ್ತ ಹಣ್ಣೂ ಅಲ್ಲದ, ಇತ್ತ ತರಕಾರಿಯೂ ಅಲ್ಲದ ಟೊಮ್ಯಾಟೊ ಬೆಳೆಗೆ ಪ್ರಸಿದ್ಧವಾಗಿರುವ ಈ ಕೋಲಾರದ ಸ್ಥಿತಿಯೂ ಅತ್ತ ಬರಗಾಲ ಪೀಡಿತವೂ ಅಲ್ಲ, ಇತ್ತ ಸಮೃದ್ಧಿಯೂ ಇಲ್ಲ ಎಂಬಂತಿದೆ. ಈ ಜಿಲ್ಲೆಯ ನಾಯಕರ ಸಮೃದ್ಧಿಯನ್ನು ಕಂಡಂತಹ ಜಿಲ್ಲೆ. ಕರ್ನಾಟಕಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟ ಜಿಲ್ಲೆ (ಕೆಸಿ ರೆಡ್ಡಿ), ಕೋಲಾರದ ದಲಿತ ರಾಜಕಾರಣ ಮತ್ತು ಕೋಲಾರದ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿದ ಚನ್ನಯ್ಯನವರ ಊರು. ಕೆಎಚ್‌ ಮುನಿಯಪ್ಪ, ಜಾಲಪ್ಪ ಆದಿಯಾಗಿ ಹಲವು ದಿಗ್ಗಜ ನಾಯಕರ ತವರು ಈ ಜಿಲ್ಲೆ.

ದಿನವೂ ಇಲ್ಲಿಂದ ಸಾವಿರಾರು ಜನರು ಬೆಂಗಳೂರಿಗೆ ಕೆಲಸಕ್ಕೆಂದು ಹೋಗಿ ಬರುತ್ತಾರೆ. ಕೋಲಾರದ ಗುಂಟ ಹಾದು ಹೋಗುವ ರೈಲುಗಳು ಬೆಂಗಳೂರಿಗೆ ಹೋಗುವ ಕೆಲಸಗಾರರಿಂದಲೇ ತುಂಬಿರುತ್ತವೆ. ಗುಡ್ಡ ಬೆಟ್ಟಗಳ ಈ ಜಿಲ್ಲೆಗೆ ದೌರ್ಜನ್ಯದ ಇತಿಹಾಸವೂ ಇದೆ. ಹೀಗಾಗಿಯೇ ಇಲ್ಲಿ ದಲಿ ಹೋರಾಟವೂ ಬಲವಾಗಿದೆ. ಪಕ್ಕದ ಆಂಧ್ರದ ಫ್ಯೂಡಲ್‌ ಗುಣವನ್ನು ತನ್ನದಾಗಿಸಿಕೊಂಡಿರುವ ಈ ಜಿಲ್ಲೆಗೆ ಇಲ್ಲಿನ ದಲಿತ ಹೋರಾಟ ಮಾನವೀಯತೆ ಕಲಿಸುತ್ತಿದೆ

ಇತ್ತೀಚೆಗೆ ಕೋಲಾರ ಸುದ್ದಿಯಾಗಿದ್ದು ಸಿದ್ಧರಾಮಯ್ಯ ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಕಾರಣಕ್ಕೆ. ಕೊನೆಗೂ ಅಳೆದು ತೂಗಿ ಸಿದ್ಧರಾಮಯ್ಯ ಇಲ್ಲಿಂದ ಸ್ಫರ್ಧಿಸುವುದಿಲ್ಲ ಎಂದು ತೀರ್ಮಾನಿಸಿದರು. ಈ ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಕೋಟೆ. ಕಳೆದ ಸಲ ಇಲ್ಲಿ ಲೋಕಸಭೆ ಚುನಾವಣೆಯನ್ನು ಬಿಜೆಪಿ ಗೆದ್ದಿದೆಯಾದರೂ ಅದರ ಹಿಂದೆ ಎದ್ದಿದ್ದು ಮೋದಿ ಎನ್ನು ಮೇನಿಯಾ ಹೊರತು ಬಿಜೆಪಿಯ ಸಾಂಪ್ರದಾಯಿಕ ಮತಗಳಲ್ಲ.

ಈಗ ಇಲ್ಲಿ ಮತ್ತೆ ವಿಧಾನಸಭಾ ಚುನಾವಣೆವ ಬಂದಿದೆ. ಬಹುತೇಕ ನಾಮಪತ್ರ ಸಲ್ಲಿಕೆ, ವಾಪಾಸ್‌ ಪಡೆಯುವಿಕೆಯ ಹೈ-ಡ್ರಾಮಾಗಳು ಮುಗಿದು ಕ್ಷೇತ್ರದ ಜನರಿಗೆ ಚುನಾವಣೆಯ ಸ್ಪಷ್ಟ ಚಿತ್ರಣ ದೊರೆಯತೊಡಗಿದೆ. ಇನ್ನೇನಿದ್ದರು ಅಭ್ಯರ್ಥಿಗಳ ಪ್ರಚಾರ ಜನರ ಮನವೊಲಿಸುವಿಕೆಯಷ್ಟೇ ಬಾಕಿಯಿದೆ. ಸಾಮಾನ್ಯವಾಗಿ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷಗಳಿಗಿಂತಲೂ ವ್ಯಕ್ತಿ ಮುಖ್ಯವಾಗುತ್ತಾರೆ. ಜನರು ಈ ವ್ಯಕ್ತಿ ಗೆದ್ದ ನಂತರ ಕೈಗೆ ಸಿಗುತ್ತಾನೆಯೇ, ನಮ್ಮನ್ನು ಗುರುತಿಸುತ್ತಾನೆಯೇ, ಇವನ ಮನೆ ಬಾಗಿಲಿಗೆ ಹೋದರೆ ಮರ್ಯಾದೆ ಸಿಗುತ್ತದೆಯೇ ಎನ್ನುವುದೆಲ್ಲವನ್ನೂ ಲೆಕ್ಕ ಹಾಕುತ್ತಾರೆ. ಅದಕ್ಕಿಂತ ಮುಖ್ಯವಾಗಿ ಬಹಳಷ್ಟು ಜನ ಲೆಕ್ಕ ಹಾಕುವುದು ಇವ ನಮ್ಮ ಜಾತಿಯವನೇ ಎನ್ನುವುದು.

ಜಾತಿ ಮೀರಿ ಬೆಳೆದ, ಜನರ ವಿಶ್ವಾಸ ಗಳಿಸಿದ ನಾಯಕರೂ ಇದ್ದಾರೆ. ಆದರೆ ಬಹಳ ಕಡಿಮೆ

ಚಿನ್ನದ ನಾಡು, ಮಾವಿನ ಬೀಡು ಎಂದೆಲ್ಲ ಕರೆಸಿಕೊಳ್ಳುವ ಕೋಲಾರ ಜಿಲ್ಲೆ ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು ಇಲ್ಲಿ ಜೆಡಿಎಸ್‌ – ಬಿಜೆಪಿ ನಡುವೆ ನೇರ ಹಣಾಹಣಿಯಿದ್ದು ಒಂದಷ್ಟು ಕಡೆ ಬಿಜೆಪಿ ಕೂಡಾ ಸದ್ದು ಮಾಡುತ್ತಿದೆ.

ಬಂಗಾರಪೇಟೆ: ಆಟಕ್ಕಿಲ್ಲದ ಬಿಜೆಪಿ – ಜೆಡಿಎಸ್‌, ಕಾಂಗ್ರೆಸ್‌ ನೇರ ಹೋರಾಟ

ಇಲ್ಲಿ ಈ ಬಾರಿ ಕಾಂಗ್ರೆಸ್ಸಿನ ನಾರಾಯಣ ಸ್ವಾಮಿ ಹ್ಯಾಟ್ರಿಕ್‌ ಹೊಡೆಯುವ ಕನಸ್ಸು ಕಾಣುತ್ತಿದ್ದರೆ ಇತ್ತ ಕಳೆದ ಬಾರಿ ಜೆಡಿಎಸ್‌ ಟಿಕೆಟ್‌ ಮೂಲಕ ಎರಡನೇ ಸ್ಥಾನ ಪಡೆದಿದ್ದ ಮಲ್ಲೇಶ್ ಬಾಬು ಅವರ ಎದುರು ತೊಡೆ ತಟ್ಟಿ ನಿಂತಿದ್ದಾರೆ. ಇತ್ತ ಬಿಜೆಪಿಯಿಂದ ಎಂ ನಾರಾಯಣ ಸ್ವಾಮಿ ಕಣಕ್ಕಿಳಿದಿದ್ದು ಅವರೂ ಗೆಲ್ಲುವ ಭರವಸೆಯಿಂದ ಬೀಗುತ್ತಿದ್ದಾರೆ.

ಅದೇನೆ ಇದ್ದರೂ ಇಲ್ಲಿ ಗೆಲ್ಲು ಅಭ್ಯರ್ಥಿ ಕಾಂಗ್ರೆಸ್ಸಿನ ಎಸ್‌ ಎನ್‌ ನಾರಾಯಣ ಸ್ವಾಮಿಯೇ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಇದು ಮೀಸಲು ಕ್ಷೇತ್ರವಾಗಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವೋಟು ಸಾಕಷ್ಟಿದೆ. ಇದುವರೆಗೂ ಹೆಚ್ಚು ಬೋವಿ ಜನಾಂಗದ ಅಭ್ಯರ್ಥಿಗಳೇ ಗೆಲ್ಲುತ್ತಿದ್ದು ಇತರ ಪರಿಶಿಷ್ಟ ಜಾತಿಗಳಿಗೆ ಅಷ್ಟಾಗಿ ಅವಕಾಶ ದೊರೆತಿಲ್ಲ.

ಕೋಲಾರ: ಗೆಲ್ಲುವ ಕುದುರೆ ಯಾರು?

ಪ್ರಸ್ತುತ ಎಡಿಎಸ್‌ ವಶದಲ್ಲಿರು ಈ ಕ್ಷೇತ್ರವನ್ನು ಬಿಜೆಪಿಯ ವರ್ತೂರು ಪ್ರಕಾಶ್‌ ಕಸಿಯುವ ಆತುರದಲ್ಲಿದ್ದಾರೆ. ಅಷ್ಟಾಗಿ ಕೋಮು ಗಲಭೆಯನ್ನು ಕಾಣದ ಕೋಲಾರದಲ್ಲಿ ಬಿಜೆಪಿ ಕ್ಲಾಕ್‌ ಟವರ್‌ ವಿಷಯದಲ್ಲಿ ಗಲಭೆ ಎಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೋಮು ಗಲಭೆ ಎಬ್ಬಿಸುವುದು ಚುನಾವಣೆ ಗೆಲ್ಲಲು ಅವಶ್ಯಕ ಅಂಶವಾಗಿರುವುದರಿಂದ ಇದು ಕೂಡಾ ಬಿಜೆಪಿಗೆ ವರವಾಗಬಹುದು. ಅಲ್ಲದೆ ವರ್ತೂರು ಪ್ರಕಾಶ್‌ ಕೂಡಾ ಒಂದಷ್ಟು ಸ್ವಯಂ ವರ್ಚಸ್ಸು ಇರುವ ಅಭ್ಯರ್ಥಿಯಾಗಿದ್ದಾರೆ.

ಈ ಮೊದಲು ಇಲ್ಲಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿದ್ಧರಾಮಯಯ್ಯನವರು ನಿಲ್ಲುವ ಸುದ್ದಿಯಿತ್ತಾದರೂ ಕೊನೆಯ ಗಳಿಗೆಯಲ್ಲಿ ಅವರು ವರುಣಾದಿಂದ ಸ್ಪರ್ಧಿಸುತ್ತಿದ್ದು ಇಲ್ಲಿನ ಕಾಂಗ್ರೆಸ್‌ ಟಿಕೆಟ್‌   ಕೊತ್ತೂರು ಜಿ ಮಂಜುನಾಥ ಇವರ ಪಾಲಾಗಿದೆ.

ಇನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಸಿ. ಎಂ. ಆರ್. ಶ್ರೀನಾಥ್ ಕಣದಲ್ಲಿದ್ದರೆ ಆಮ್‌ ಆದ್ಮಿ ಪಕ್ಷದಿಂದ ಸುಹೀಲ್‌ ದಿಲ್‌ ನವಾಜ್‌ ಸ್ಪರ್ಧಿಸುತ್ತಿದ್ದಾರೆ.

ಮಾಲೂರು: ಮುಂದುವರೆದಿರುವ ಕೆ ವೈ ನಂಜೇಗೌಡರ ಓಟ

ಮಾಲೂರು ಹೂವಿನ ಬೆಳೆಗೆ ಖ್ಯಾತಿ ಪಡೆದಿದೆ. ಈ ಕ್ಷೇತ್ರ ಕೂಡಾ ಬೆಂಗಳೂರಿನೊಂದಿಗೆ ಬಹಳಷ್ಟು ನಂಟು ಹೊಂದಿದೆ. ಇಲ್ಲಿ ಶಿವಾರಪಟ್ಟಣ ಕೆತ್ತನೆಯ ಶಿಲ್ಪಗಳಿಗೆ ಖ್ಯಾತಿ ಪಡೆದಿದ್ದರೆ, ಇದೇ ಕ್ಷೇತ್ರದ ಇಟ್ಟಿಗೆ ಮತ್ತು ಹೆಂಚು ತನ್ನ ಗುಣಮಟ್ಟದಿಂದಾಗಿ ನೆರೆಯ ರಾಜ್ಯಗಳಲ್ಲೂ ಖ್ಯಾತಿಯನ್ನು ಗಳಿಸಿದೆ.

ಈ ಕ್ಷೇತ್ರವೂ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು ಈ ಬಾರಿಯೂ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿ ಧಾರ್ಮಿಕ ರಾಜಕಾರಣವನ್ನು ಇನ್ನೊಂದು ಮಜಲಿಗೆ ಕೊಂಡು ಹೋಗಿ ದೇವರ ತೀರ್ಥ ಪ್ರಸಾದ ಹಂಚುವುದು, ದೇವಸ್ಥಾನಗಳಿಗೆ ಕಳುಹಿಸುವುದರ ಮೂಲಕ ಗಿಮಿಕ್‌ ರಾಜಕಾರಣ ಮಾಡಿ ಕೃಷ್ಣಯ್ಯ ಶೆಟ್ಟಿ ಎರಡು ಇಲ್ಲಿ ಬಿಜೆಪಿಯಿಂದ ಗೆದ್ದಿದ್ದರಾದರೂ ಅವರ ಈ ಚಾಕಚಕ್ಯತೆ ಹೆಚ್ಚು ದಿನ ನಡೆಯಲಿಲ್ಲ.

ಇಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ಜೆ.ಇ. ರಾಮೇಗೌಡ ಕಣಕ್ಕಿಳಿದಿದ್ದರೆ ಕೆ.ಎಸ್‌.ಮಂಜುನಾಥ್‌ ಗೌಡ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ರವಿಶಂಕರ್. ಎಂ ಎನ್ನುವವರು ಸ್ಪರ್ಧೆಯಲ್ಲಿದ್ದಾರೆ.

ಬಿಜೆಪಿ ಇಲ್ಲಿ ಒಡೆದ ಮನೆಯಾಗಿದ್ದು ಬಂಡಾಯ ಅಭ್ಯರ್ಥಿಯಾಗಿ ಹೂಡಿ ವಿಜಯಕುಮಾರ್‌ ಕಣಕ್ಕಿಳಿದಿದ್ದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ನಂಜೇಗೌಡ ತಮ್ಮ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಖುಷಿಯಲ್ಲಿದ್ದಾರೆ.

ಒಕ್ಕಲಿಗ ಮತ್ತು ಪರಿಶಿಷ್ಟ ಜಾತಿಗಳ ಮತವೇ ನಿರ್ಣಾಯಕವಾಗಿರುವ ಇಲ್ಲಿ ಎರಡೂ ಸಮುದಾಯಗಳ ಒಲವು ಪಡೆದವರು ಗೆಲ್ಲುತ್ತಾರೆ. ಇಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಮತಗಳು ಹೆಚ್ಚಿದ್ದು 65,000 ರಷ್ಟಿವೆ. ಒಕ್ಕಲಿಗ ಸಮುದಾಯ 60,000 ಮತಗಳನ್ನು ಹೊಂದಿದೆ.

ಕೆಜಿಎಫ್:‌ ಮತ್ತೆ ಗೆಲ್ಲುವರೇ ರೂಪಾ ಶಶಿಧರ್‌?

ಕೆಜಿಎಫ್‌ ಈಗ ಒಂದರ್ಥದಲ್ಲಿ ವಿಶ್ವವಿಖ್ಯಾತ. ಆದರೆ ಈ ಖ್ಯಾತಿಯಿಂದ ಅದಕ್ಕೆ ಸಿಕ್ಕಿದ್ದೇನು ಎಂದು ಕೇಳಿದರೆ ಸಿಗುವ ಉತ್ತರ ಸೊನ್ನೆ. ಕರ್ನಾಟಕದ ಗಡಿಯಲ್ಲಿರುವ ಈ ಕ್ಷೇತ್ರದಲ್ಲಿ ತಮಿಳರ ಪ್ರಾಬಲ್ಯವೂ ಇದೆ. ಗಣಿ ಉದ್ಯಮದ ಪಳೆಯುಳಿಕೆಯಂತೆ ಇಲ್ಲಿ ಅಭಿವೃದ್ಧಿ ಕೂಡಾ ಪಳೆಯುಳಿಕೆಯಾಗಿಯೇ ಉಳಿದಿದೆ. ತನ್ನ ಒಡಲಿನಲ್ಲಿದ್ದ ಚಿನ್ನವನ್ನು ಮೊದಲು ಬ್ರಿಟಿಷರಿಗೂ ನಂತರ ದೇಶಕ್ಕೂ ಬಗೆದು ಕೊಟ್ಟ ಈ ಊರಿನ ಜನರ ಪಾಲಿಗೆ ಉಳಿದಿದ್ದು ದೊಡ್ಡ ದೊಡ್ಡ ಮಣ್ಣಿನ ರಾಶಿ ಮತ್ತು ಸುರಂಗಗಳು ಮಾತ್ರ,

ಈ ಕ್ಷೇತ್ರವನ್ನು ಪ್ರಸ್ತುತ ಪ್ರತಿನಿಧಿಸುತ್ತಿರುವವರು ರೂಪಾ ಶಶಿಧರ್.‌ ಇವರು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಕೆ ಎಚ್‌ ಮುನಿಯಪ್ಪನವರ ಮಗಳು. ಮತ್ತು ಈ ಬಾರಿಯೂ ಇಲ್ಲಿಯ ಕಾಂಗ್ರೆಸ್‌ ಟಿಕೆಟ್‌ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಜನರ ವಿಶ್ವಾಸವನ್ನೂ ಗೆದ್ದಿರುವ ಅವರು ಇನ್ನೊಮ್ಮೆ ಗೆದ್ದು ಬೀಗುವ ಗಡಿಬಿಡಿಯಲ್ಲಿದ್ದಾರೆ.

ಇತ್ತ ಬಿಜೆಯಿಂದ ಇಲ್ಲಿನ ಮಾಜಿ ಶಾಸಕ ಸಂಪಂಗಿಯವರ ಮಗಳು ಮತ್ತು ಶಾಸಕಿ ರಾಮಕ್ಕನವರ ಮೊಮ್ಮಗಳಾದ ಅಶ್ವಿನಿ ಸಂಪಂಗಿಯವರಿಗೆ ಟಿಕೆಟ್‌ ನೀಡಿದೆ.

ಒಂದು ಕಾಲದಲ್ಲಿ ದ್ರಾವಿಡ ಚಳವಳಿ, ಕಾರ್ಮಿಕ ಚಳವಳಿಗಳ ನಾಡಿನಲ್ಲಿ ಇಂದು ಇಬ್ಬರು ಪೋಷಕರು ತಮ್ಮ ಮಕ್ಕಳನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ಕಾದಾಡುತ್ತಿದ್ದಾರೆ.

ಈ ಕ್ಷೇತ್ರದಿಂದ ಆರ್‌ಪಿಐ, ಸಿಪಿಎಮ್‌, ಎಐಡಿಎಮ್‌ಕೆ ಪಕ್ಷಗಳಿಂದ ಹಲವು ದಿಗ್ಗಜರು ಗೆದ್ದಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಸ್ವಂತ ವರ್ಚಸ್ಸಿನಿಂದ ಗೆದ್ದ ನಾಯಕರೂ ಇಲ್ಲಿದ್ದಾರೆ.

ಈ ಬಾರಿ ಇಲ್ಲಿಂದ ಕಾಂಗ್ರೆಸ್‌ ನಿರಾಯಾಸವಾಗಿ ಗೆಲ್ಲಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಶ್ರೀನಿವಾಸಪುರ: ಸೀಜನ್ನಿನ ಮಾವು ಯಾರಿಗೆ ಸಿಹಿ?

ಮಾವಿನ ಬೆಳೆಗೆ ಹೆಸರುವಾಸಿಯಾಗಿರುವ ಶ್ರೀನಿವಾಸಪುರದಲ್ಲಿ ಎಂದಿನಂತೆ ಬಾರಿಯೂ ಸ್ಪರ್ಧೆ ಕೆ ಆರ್ ರಮೇಶ್‌ಕುಮಾರ್ ಮತ್ತು ಜಿ ಕೆ ವೆಂಕಟಶಿವಾರೆಡ್ಡಿ ನಡುವೆ ಇರಲಿದೆ. ಸುಮಾರು ನಲವತೈದು ವರ್ಷಗಳಿಂದಲೂ ಇದು ಹೀಗೇ ಇದೆ. ಈ ಬಾರಿ ರಮೇಶ್‌ ಕುಮಾರ್‌ ಇದು ತನ್ನ ಕೊನೆಯ ಚುನಾವಣೆ ಇದೊಂದು ಬಾರಿ ಗೆಲ್ಲಿಸಿ ಎಂದು ಕ್ಷೇತ್ರದ ತುಂಬಾ ಗೋಳಾಡುತ್ತಾ ಓಡಾಡುತ್ತಿದ್ದಾರೆ.

ಇನ್ನು ಜೆಡಿಎಸ್‌ ಜಿ ಕೆ ವೆಂಕಟಶಿವಾರೆಡ್ಡಿ ಕೂಡಾ ಗೆಲ್ಲುವ ಭರವಸೆಯೊಂದಿಗೆ ಕ್ಷೇತ್ರದ ಉದ್ದಗಲಕ್ಕೂ ಓಡಾಡುತ್ತಿದ್ದಾರೆ. ಇಲ್ಲಿಂದ ನಾಲ್ಕು ಬಾರಿ ಶಾಸಕರಾಗಿರುವ ಅವರಿಗೆ ಅವರ ಸಮುದಾಯದ ಮತಗಳು ಸಾಕಷ್ಟಿದ್ದರೂ ರಮೇಶ್‌ ಕುಮಾರ್‌ ಇಲ್ಲಿ 6 ಬಾರಿ ಗೆದ್ದಿದ್ದಾರೆ. ದಲಿತ ಮತ್ತು ಒಕ್ಕಲಿಗ ಓಟುಗಳು ಹೆಚ್ಚಿರುವ ಇಲ್ಲಿ ಜನರು ಹೆಚ್ಚು ಹೆಚ್ಚು ಕಾಂಗ್ರೆಸ್‌ ಪಕ್ಷವನ್ನು ನೆಚ್ಚಿಕೊಂಡಿರುವುದು ಕಾಣುತ್ತದೆ. ರೆಡ್ಡಿಯವರು ಇಲ್ಲಿಂದ ಗೆಲ್ಲುವ ಆಸೆಯಿಂದ ಒಮ್ಮೆ ಬಿಜೆಪಿಗೂ ಹೋಗಿ ಬಂದಿದ್ದಾರೆ. ಹಿಂದೆ ಕಾಂಗ್ರೆಸ್‌ ಟಿಕೆಟ್‌ ಮೂಲಕವೂ ಗೆದ್ದಿದ್ದಾರೆ.

ಅತ್ತ ರಮೇಶ್‌ ಕುಮಾರ್‌ ಕೂಡಾ ಜೆಡಿಎಸ್‌, ಜನತಾ ಪರಿವಾರಗಳಿಗೆ ಗುಳೇ ಹೋಗಿ ಮತ್ತೆ ಕಾಂಗ್ರೆಸ್ಸಿನ ಮನೆ ಸೇರಿದ್ದಾರೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸ್‌ ರೆಡ್ಡಿ ಕೂಡ ಕಣದಲ್ಲಿದ್ದು ಅವರೂ ಕಳೆದ ಎರಡು ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಹಲವು ʼಸಮಾಜ ಸೇವೆʼ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆಮ್‌ ಆದ್ಮಿ ಪಕ್ಷವು ಇಲ್ಲಿ ಡಾ. ವೈ. ವಿ. ವೆಂಕಟಾಚಲ ಅವರನ್ನು ಕಣಕ್ಕಿಳಿಸಿದೆ.

ಮುಳಬಾಗಿಲು: ಯಾರ ಪಾಲಿಗೆ ತೆರೆಯಲಿದೆ ಮೂಡಲ ಬಾಗಿಲು?

ಮುಳಬಾಗಿಲು ಮೊದಲಿನಿಂದಲೂ ಪಕ್ಷೇತರರ ಕೋಟೆಯಾಗಿದ್ದು ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಎಚ್‌ ನಾಗೇಶ್‌ ಅವರ ಪಾಲಾಗಿತ್ತು. ಈ ಬಾರಿ ಇಲ್ಲಿಂದ ಜೆಡಿಎಸ್‌ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಗೆಲ್ಲುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಇಲ್ಲಿ ಹಲವು ಬಾರಿ ಕಾಂಗ್ರೆಸ್‌ ಕೂಡಾ ಗೆದ್ದಿದೆಯಾದರೂ ಒಟ್ಟಾರೆ ಟ್ರೆಂಡ್‌ ಜೆಡಿಎಸ್‌ ಕಡೆ ಇದೆ.

ಕಾಂಗ್ರೆಸ್ಸಿನಿಂದ ಇಲ್ಲಿ ಡಾ. ಬಿ. ಸಿ ಮುದ್ದು ಗಂಗಾಧರ್ ಟಿಕೆಟ್‌ ಪಡೆದಿದ್ದರೆ ಆಮ್‌ ಆದ್ಮಿ ಪಕ್ಷದಿಂದ ಎನ್‌.ವಿಜಯ್‌ ಕುಮಾರ್‌ ಹಾಗೂ ಬಿಜೆಪಿಯಿಂದ ಶೀಗೆಹಳ್ಳಿ ಸುಂದರ್‌ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಇಲ್ಲಿ ಒಕ್ಕಲಿಗ ಮತ್ತು ದಲಿತ ಮತಗಳು ದೊಡ್ಡ ಸಂಖ್ಯೆಯಲ್ಲಿದ್ದು ಆ ಮತಗಳೊಡನೆ 35,000ಕ್ಕೂ ಹೆಚ್ಚಿರುವ ಮುಸ್ಲಿಮ್‌ ಮತಗಳನ್ನು ಪಡೆದರೆ ಇಲ್ಲಿ ಗೆಲ್ಲುವುದು ಸುಲಭ.

2018ರಲ್ಲಿ ಜಾತಿ ಪ್ರಮಾಣ ಪತ್ರದ ವಿವಾದದಿಂದಾಗಿ ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು ಅಭ್ಯರ್ಥಿ ಕೊತ್ತೂರು ಮಂಜುನಾಥ್‌ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗೆ ಸ್ಥಾನ ಕಳೆದುಕೊಂಡ ಅವರು ಸ್ವತಂತ್ರ ಅಭ್ಯರ್ಥಿ ಎಚ್‌ ನಾಗೇಶ್‌ ಅವರಿಗೆ ಬೆಂಬಲ ಘೋಷಿಸಿದ ಕಾರಣ ಅವರು ಗೆದ್ದರು. ಈ ಚುನಾವಣೆಯಲ್ಲಿ ಸಮೃದ್ಧಿ ಮಂಜುನಾಥ್‌ ಸಾಕಷ್ಟು ಫೈಟ್‌ ಕೊಟ್ಟರಾದರೂ ಕೊನೆಯ ಹಂತದಲ್ಲಿ ಆರು ಸಾವಿರ ಚಿಲ್ಲರೆ ಮತಗಳಿಂದ ಸೋತರು. ಎಚ್‌ ನಾಗೇಶ ನಂತರ ಕಾಂಗ್ರೆಸ್‌ ಜೆಡಿಎಸ್‌ ಸರಕಾರಕ್ಕೆ ಬೆಂಬಲ ನೀಡಿ ಮಂತ್ರಿ ಕೂಡಾ ಆದರು. ಅದರ ನಂತರ ಬಂದ ಬಿಜೆಪಿ ಸರಕಾರದಲ್ಲಿಯೂ ಮಂತ್ರಿಯಾಗಿದ್ದ ಅವರನ್ನು ಪ್ರಸ್ತುತ ಸರಕಾರ ಅಂಬೇಡ್ಕರ್‌ ನಿಗಮದ ಅಧ್ಯಕ್ಷರನ್ನಾಗಿ ಕೂರಿಸಿದೆ.

Related Articles

ಇತ್ತೀಚಿನ ಸುದ್ದಿಗಳು