Home ಅಪರಾಧ ಕೊಪ್ಪಳ ಬಿಜೆಪಿ ಮುಖಂಡನ ಕೊಲೆ ಪ್ರಕರಣ: 6 ದೋಷಿಗಳಿಗೆ ಮರಣದಂಡನೆ ಪ್ರಕಟ

ಕೊಪ್ಪಳ ಬಿಜೆಪಿ ಮುಖಂಡನ ಕೊಲೆ ಪ್ರಕರಣ: 6 ದೋಷಿಗಳಿಗೆ ಮರಣದಂಡನೆ ಪ್ರಕಟ

0

ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಆಲಿಯಾಸ್ ಜೆಎನ್‌ಎನ್ ವೆಂಕಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳಿಗೆ ಕೊಪ್ಪಳದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು, ಅಪರಾಧದ ತೀವ್ರತೆ ಮತ್ತು ಕ್ರೌರ್ಯವನ್ನು ಪರಿಗಣಿಸಿ ಈ ಪ್ರಕರಣವನ್ನು “ಅಪರೂಪದಲ್ಲಿ ಅಪರೂಪದ ಪ್ರಕರಣ” ಎಂದು ವರ್ಗೀಕರಿಸಿ, ರವಿ, ಮೈಲಾರಿ, ಧನರಾಜ್, ಭೀಮಾ, ಸಲೀಂ ಮತ್ತು ಗಂಗಾಧರ ಗೌಳಿ ಈ ಆರು ಮಂದಿ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ.

ಕೊಲೆಗೆ ಕಾರಣವೇನು?
ಗಂಗಾವತಿಯ ರೈಲ್ವೆ ನಿಲ್ದಾಣದ ಬಳಿ ಮಾರುತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ ಕುರುಬರ್ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಚಿಕಿತ್ಸೆ ವೇಳೆ ಕೊನೆಯವರೆಗೂ ಮಾರುತಿಯ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದ ವೆಂಕಟೇಶ ಅವರನ್ನು, ಸೇಡಿನ ಮನೋಭಾವದಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿತ್ತು. ಸಾರ್ವಜನಿಕ ಪ್ರದೇಶದಲ್ಲಿ ನಡೆದ ಈ ಭೀಕರ ಕೃತ್ಯ ಆಗ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ನ್ಯಾಯಾಧೀಶರ ಮಾತು
ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, “ಸಾಕ್ಷಿ ನೀಡಿದ ಕಾರಣಕ್ಕೆ ಒಬ್ಬ ನಾಗರಿಕನನ್ನು ಬಹಿರಂಗವಾಗಿ ಕೊಲೆ ಮಾಡುವ ಇಂತಹ ಕೃತ್ಯಗಳನ್ನು ಸಭ್ಯ ನಾಗರಿಕ ಸಮಾಜ ಒಪ್ಪುವುದಿಲ್ಲ. ಅಪರಾಧದ ಹಿನ್ನೆಲೆ ಮತ್ತು ಕ್ರೌರ್ಯವನ್ನು ಗಮನಿಸಿ ಗಲ್ಲು ಶಿಕ್ಷೆ ವಿಧಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು. ಅಲ್ಲದೆ ದೋಷಿಗಳು ಅಗತ್ಯವಿದ್ದರೆ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದೂ ಸೂಚಿಸಿದರು.

ಅಭಿಯೋಜಕಿ ಮಾಹಿತಿ
ಸರ್ಕಾರಿ ಅಭಿಯೋಜಕಿ ಎಸ್. ನಾಗಲಕ್ಷ್ಮಿ ಅವರು ಮಾತನಾಡಿ, ಈ ಹಿಂದೆ ಆರು ಆರೋಪಿಗಳನ್ನು ದೋಷಿ ಎಂದು ತೀರ್ಮಾನಿಸಲಾಗಿತ್ತು. ಶಿಕ್ಷೆ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ಇಂದು ಆರೂ ಮಂದಿ ದೋಷಿಗಳಿಗೆ ಮರಣದಂಡನೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ ಎಂದು ತಿಳಿಸಿದರು.

You cannot copy content of this page

Exit mobile version