ಯಳಂದೂರು (ಚಾಮರಾಜನಗರ): ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮತ್ತು ವಿವಾದ ಸೃಷ್ಟಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ದೇಶದ್ರೋಹಿ ಚಟುವಟಿಕೆಯ ಮತ್ತೊಂದು ಮುಖವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಟುವಾಗಿ ಟೀಕಿಸಿದ್ದಾರೆ.
ಬಿಳಿಗಿರಿರಂಗನಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ-2026’ರ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿ ಅವರು ಮಾತನಾಡಿದರು. “ಜಿರಳೆ, ನೊಣ, ಸೊಳ್ಳೆ ಅಥವಾ ಹೆಗ್ಗಣಗಳಂತಹ ವ್ಯಂಗ್ಯದ ಆಟಗಳಿಗೆ ಹೆದರುವ ಕಾಲ ಇದಲ್ಲ. ಇಂತಹ ಕ್ಷುಲ್ಲಕ ವಿಚಾರಗಳಿಗೆ ಬಿಜೆಪಿ ಎಂದಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಸಾಧನೆಗಳು ಮತ್ತು ಜನಕಲ್ಯಾಣ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕೆಲಸ ಮಾಡುವುದೇ ಸದ್ಯ ನಮ್ಮ ಮುಂದಿರುವ ಏಕೈಕ ಗುರಿಯಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರದ ಬಿಜೆಪಿ ಸರ್ಕಾರದ ಅಭಿವೃದ್ಧಿ ಮತ್ತು ಸಾಧನೆಗಳನ್ನು ಸಹಿಸದ ಕೆಲವು ಹಿತಶತ್ರುಗಳು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವುದೇ ಈ ಕಾಕ್ರೋಚ್ ಜನತಾ ಪಾರ್ಟಿ ಎಂದು ಅವರು ಲೇವಡಿ ಮಾಡಿದರು.
