ಬೆಂಗಳೂರು ಗ್ರಾಮಾಂತರದಲ್ಲಿ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ, ಎಲ್ಲಾ ಕಡೆಗೂ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗುವಂತೆ ನಡೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಮೂಲಕ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಪರವಾದ ಯಾವುದೇ ಅಲೆ ಇಲ್ಲ ಎಂಬುದನ್ನು ಪರೋಕ್ಷವಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಈ ರೀತಿ ಚುನಾವಣೆ ನಡೆಸುವ ಬದಲು ಹಣ ಹಂಚಿಕೊಂಡು ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಕಡೆಯವರು ಚುನಾವಣಾ ಅಕ್ರಮದಲ್ಲಿ ತೊಡಗಿದ್ದಾರೆ. ಈ ಮೂಲಕ ಅವರ ಪರವಾಗಿ ಚುನಾವಣಾ ಆಯೋಗ ಕೆಲಸ ಮಾಡಿದೆ. ಕೆಲವು ಕಡೆ ಮೈತ್ರಿ ಕಾರ್ಯಕರ್ತರ ಮೇಲೆ ಹಲ್ಲೆಗಳಾಗಿವೆ. ಇದೇ ರೀತಿ ಆದರೆ ಮುಕ್ತ ಮತದಾನ ಅರ್ಥ ಕಳೆದುಕೊಳ್ಳಲಿದೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಶಾಸಕರಾದ ಡಾ.ರಂಗನಾಥ್, ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್, ಡಿಸಿಎಂ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಹಾಗೂ ಕುಸುಮ ಹನುಮಂತರಾಯಪ್ಪ ಅವರ ಹೆಸರಿನಲ್ಲಿ ಕೂಪನ್ ಹಂಚಲಾಗಿದೆ ಎಂದು ಆರೋಪಿಸಿಸಿ ಮೊಬೈಲ್ ಕೂಪನ್ ನೀಡಲಾಗಿದೆ ಎನ್ನಲಾದ ಚಿತ್ರಗಳನ್ನು ತೋರಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಕಾಂಗ್ರೆಸ್ ಕೂಪನ್ ಕಾರ್ಡ್‌ಗಳನ್ನು ಹಂಚಿಕೆ ಮಾಡಿತ್ತು ಎಂದು ಆಪಾದಿಸಿದರು.