Home ದೇಶ ಬಜೆಟ್‌ ಹೊಗಳಿದ ಕುಮಾರಸ್ವಾಮಿ: ʼನೀವೂ ಒಬ್ಬ ಕನ್ನಡಿಗರಾ?’ ಎಂದು ಪ್ರಶ್ನಿಸಿದ ನೆಟ್ಟಿಗರು

ಬಜೆಟ್‌ ಹೊಗಳಿದ ಕುಮಾರಸ್ವಾಮಿ: ʼನೀವೂ ಒಬ್ಬ ಕನ್ನಡಿಗರಾ?’ ಎಂದು ಪ್ರಶ್ನಿಸಿದ ನೆಟ್ಟಿಗರು

0
the news minut

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಸಾಕಷ್ಟು ಹೊಗಳಿ ಸಕಾರಾತ್ಮಕ ಸ್ಪಂದನೆಯನ್ನು ನೀಡಿದ್ದು, ಇದಕ್ಕೆ ಕನ್ನಡದ ಟೆಕ್ಕಿಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಕುಮಾರಸ್ವಾಮಿಯವರು ಎಕ್ಸ್‌ ತಾಣದಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪೋಸ್ಟ್‌ಗೆ ನೆಟ್ಟಿಗರು ಅಲ್ಲೇ ಪ್ರತಿಕ್ರಿಯಿಸಿದ್ದು, ಶೆಟ್ಟಿ ಎಂಬುವರು, “ನೀವೂ ಒಬ್ಬ ಕನ್ನಡಿಗರಾ? ಕರ್ನಾಟಕಕ್ಕೆ ಚಿಪ್ಪು ಕೊಟ್ಟವ್ರೆ. ನಿಮಗೆ ಏನೂ ಅನ್ಸಲ್ವಾ? ಮತ್ತೆ ಪ್ರಾದೇಶಿಕ ಪಕ್ಷ ಅನ್ನೋ ನಾಟಕ ಬೇರೆ ನಿಮ್ಮದು” ಎಂದು ಟೀಕಿಸಿದ್ದಾರೆ.

ಸಾಗರ್‌ ರವಿನಾಥ್‌ ಎಂಬುವರು ಪ್ರತಿಕ್ರಿಯಿಸಿ, “ಕರ್ನಾಟಕದಿಂದ ಆಯ್ಕೆಯಾಗಿ ಹೋದ ಸಂಸದರಿಂದ ಕರ್ನಾಟಕಕ್ಕೆ ನಯಾಪೈಸೆ ಉಪಯೋಗವಿಲ್ಲ ಯಾರೇ ಆಯ್ಕೆಯಾಗಿ ಹೋದರೂ ದೆಹಲಿಯವರ ಕೈಗೊಂಬೆಗಳಾಗೋದನ್ನೇ ಕಂಡಿದ್ದೇವೆ ಹೊರತು ಎಂದೂ ಏನನ್ನೋ ಸಾಧಿಸಿಕೊಂಡು ಬರುವ ಚಾಣಾಕ್ಷತೆ ಕಾಣಲಿಲ್ಲ! ಈ ಪುರುಷಾರ್ಥಕ್ಕೆ ಮತದಾರರು ಇವರಿಗೆ ಮತ ಹಾಕಬೇಕು. ಇದು ನಮ್ಮ ಕರ್ಮ!” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಕುಮಾರಸ್ವಾಮಿಯವರೇ, ಕರ್ನಾಟಕಕ್ಕೆ ಬಜೆಟ್ ಇಂದ ಸಿಕ್ಕ ಅನುದಾನ ಹಾಗೂ ಅನುಕೂಲಗಳ ಒಂದು ಪಟ್ಟಿ ಮಾಡಿ ಟ್ವೀಟ್ ಮಾಡಿ ಎಚ್‌ ಡಿ ಕುಮಾರಸ್ವಾಮಿ ಅವರೇ” ಎಂದು ಲಕ್ಷ್ಮಣ್‌ ಶೆಟ್ಟಿ ಎಂಬುವವರು ಕುಟುಕಿದ್ದಾರೆ.

“ಏನು ಅಣ್ಣಾ, ಇಷ್ಟುದ್ದ ಬರೆದುಕೊಂಡು ಇದ್ದೀರಾ, ತಾವು ಮುಖ್ಯಮಂತ್ರಿಗಳು ಆಗಿದ್ದಾಗ ಬಜೆಟ್ ಬಗ್ಗೆ ಏನೂ ವ್ಯಾಖ್ಯಾನ ಮಾಡಿದ್ರಿ ನೆನಪಿಸಿಕೊಳ್ಳಿ. ನಿಮ್ಮ ಸೀಟ್ ಗಟ್ಟಿ ಮಾಡಿಕೊಳ್ಳಲು ಇಷ್ಟೊಂದು ಓಲೈಕೆ ಬೇಡವಾಗಿತ್ತು. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಅಂತ ಹೇಳಿ ಅಣ್ಣಾವ್ರೇ” ಎಂದು ಮುರುಳಿ ಎಂಬುವರು ವ್ಯಂಗ್ಯವಾಡಿದ್ದಾರೆ.

“ಕರ್ನಾಟಕಕ್ಕೆ ಒಂದೇ ಒಂದು ಯೋಜನೆ ಮಾಡಿಸಿಕೊಳ್ಳಲು ನಿಮಗೆ ಸಾಧ್ಯವಾಗಲಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡಿದರೂ ಮೋದಿಯವರ ಹೊಗಳಿ ನಿಮ್ಮ ಋಣ ತಿರಿಸಿಕೊಳ್ಳುತ್ತಿದ್ದೀರಿ ಸಾರ್” ಎಂದು ವಿಜಯ್‌ ಕೃಷ್ಣ ಟೀಕಿಸಿದ್ದಾರೆ.ಲಿಂಕ್‌ ಇಲ್ಲಿದೆ.

You cannot copy content of this page

Exit mobile version