ಬೆಂಗಳೂರು: ಮೈಸೂರು ಚಲೋ ಹೋರಾಟಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷ ಮಹತ್ವದ ಗೆಲುವೊಂದನ್ನು ಪಡೆದಿದೆ. ಬಿಜೆಪಿ ತನ್ನ ಹಾಸನದ ನಾಯಕ ಪ್ರೀತಮ್ ಗೌಡ ಅವರನ್ನು ಮೈಸೂರು ಚಲೋ ಯಾತ್ರೆಯಿಂದ ಹೊರಗಿಡಲು ಒಪ್ಪಿದೆ ಎಂದು ಮೂಲಗಳು ತಿಳಿಸಿವೆ.
ಮಾಧ್ಯಮ ಸಂಸ್ಥೆಯೊಂದರ ವರದಿಯ ಪ್ರಕಾರ ಮೈಸೂರು ಚಲೋ ಕುರಿತಂತೆ ಬಿಜೆಪಿ ಹಾಗೂ ಅದರ ಮೈತ್ರಿಪಕ್ಷ ಬಿಜೆಪಿ ನಡುವಿನ ಬಿಕ್ಕಟ್ಟು ಪರಿಹಾರಗೊಂಡಿದ್ದು, ಬಿಜೆಪಿ ಪ್ರೀತಮ್ ಗೌಡ ಅವರನ್ನು ಯಾತ್ರೆಯಿಂದ ಹೊರಗಿಡಲು ಒಪ್ಪಿಕೊಂಡಿದೆ.
ಮೊನ್ನೆಯಷ್ಟೇ ಕುಮಾರಸ್ವಾಮಿ ಮೈಸೂರು ಚಲೋ ಯಾತ್ರೆಯಲ್ಲಿ ಪ್ರೀತಮ್ ಗೌಡ ಭಾಗವಹಿಸುತ್ತಿರುವುದರ ಕುರಿತು ಸಿಡಿಮಿಡಿ ವ್ಯಕ್ತಪಡಿಸಿದ್ದರು. ಅವರು ಭಾಗಿಯಾದರೆ ನಮ್ಮ ಪಕ್ಷ ಭಾಗವಹಿಸುವುದಿರಲು, ಯಾತ್ರೆಗೆ ಕನಿಷ್ಟ ನೈತಿಕ ಬೆಂಬಲವನ್ನು ಸಹ ನೀಡುವುದಿಲ್ಲ ಎಂದು ಸಾರ್ವಜನಿಕವಾಗಿಯೇ ಘೋಷಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಕಣಕ್ಕಿಳಿದು ಕುಮಾರಸ್ವಾಮಿಯವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಈ ಘಟನೆಯನ್ನು ರಾಜಕೀಯವಾಗಿ ನೋಡುವುದಾದರೆ ಬಿಜೆಪಿಯಂತಹ ದೊಡ್ಡ ಪಕ್ಷ ಕೇವಲ ಮೂರು ಸಂಸದ ಸ್ಥಾನ ಹೊಂದಿರುವ ಪಕ್ಷದೆದುರು ಬೆನ್ನು ಬಾಗಿಸಿದೆ. ಈ ನಿಟ್ಟಿನಲ್ಲಿ ನೋಡಿದಾಗ ಇದು ಜೆಡಿಎಸ್ ಪಕ್ಷದ ಯಶಸ್ಸು ಎನ್ನಬಹುದು.
ಸಚಿವ ಪ್ರಹ್ಲಾದ್ ಜೋಷಿ ನಿವಾಸದಲ್ಲಿ ಜೋಷಿ, ವಿಜಯೇಂದ್ರ ನೇತೃತ್ವದಲ್ಲಿ ಕುಮಾರಸ್ವಾಮಿ ಜೊತೆ ಸಂಧಾನ ಸಭೆ ನಡೆದಿದ್ದು ಕುಮಾರಸ್ವಾಮಿ ಹಾಕಿದ ಎಲ್ಲಾ ಷರತ್ತುಗಳಿಗೂ ಬಿಜೆಪಿ ನಾಯಕರು ಬೇಷರತ್ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಜಾರಕಿಹೊಳಿ, ಲಿಂಬಾವಳಿ ಹಾಗೂ ಯತ್ನಾಳ್ ಈ ಯಾತ್ರೆಯಲ್ಲಿ ಭಾಗವಹಿಸುವುದು ಈಗಲೂ ಅನುಮಾನವಾಗಿಯೇ ಉಳಿದಿದೆ.
ಯಾತ್ರೆ ನಾಳೆ ಬೆಳಗ್ಗೆ ಬೆಂಗಳೂರಿನ ಕೆಂಗೇರಿಯಿಂದ ಆರಂಭಗೊಳ್ಳಲಿದ್ದು, ಆಗಸ್ಟ್ 10ರಂದು ಮೈಸೂರಿನಲ್ಲಿ ಸಮಾರೋಪಗೊಳ್ಳಲಿದೆ.