ಶಿವಮೊಗ್ಗ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ 18 ವರ್ಷದ ಬಾಲಕಿಯೊಬ್ಬಳು ಕ್ಯಾಸನೂರು ಅರಣ್ಯ ಕಾಯಿಲೆಯಿಂದ (ಕೆಎಫ್‌ಡಿ) ಸಾವನ್ನಪ್ಪಿದ್ದಾಳೆ. ಕೆಎಫ್‌ಡಿಯಿಂದ ಈ ವರ್ಷ ವರದಿಯಾದ ಮೊದಲ ಸಾವು ಇದು. ಬಾಲಕಿ ವೈರಲ್ ಜ್ವರದಿಂದ ಬಳಲುತ್ತಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಇತ್ತೀಚೆಗೆ ಮಣಿಪಾಲಕ್ಕೆ ಸ್ಥಳಾಂತರಿಸಲಾಗಿತ್ತು.
ಮೃತಳನ್ನು 18 ವರ್ಷದ ಅನನ್ಯಾ ಎಂದು ಗುರುತಿಸಲಾಗಿದೆ. ಆಕೆ ಶಿವಮೊಗ್ಗ ಜಿಲ್ಲೆಯ ಬೊಪ್ಪನಮನೆ ಗ್ರಾಮದ ನಿವಾಸಿ.
ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಅವರ ಪ್ರಕಾರ, ಕೆಎಫ್‌ಡಿಯ ಎರಡು ಪಾಸಿಟಿವ್ ಪ್ರಕರಣಗಳಿದ್ದು, ಒಬ್ಬರು ಮೃತಪಟ್ಟಿದ್ದಾರೆ.
“ಹುಡುಗಿ ತೀವ್ರ ಜ್ವರದಿಂದ ಬಳಲುತ್ತಿದ್ದಳು ಮತ್ತು ಕಡಿಮೆ ಹಿಮೋಗ್ಲೋಬಿನ್ ಹೊಂದಿದ್ದಳು. ಆಕೆಯನ್ನು ಡಿಸೆಂಬರ್ 27ರಂದು ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಯಿತು. ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಆಕೆಯ ಸ್ಥಿತಿ ಹದಗೆಡುತ್ತಿದ್ದಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಆಕೆ ಸೋಂಕಿನಿಂದ ಸಾವನ್ನಪ್ಪಿದಳು” ಎಂದು ಡಿಎಚ್‌ಒ ಹೇಳಿದರು.
ಆರೋಗ್ಯ ಇಲಾಖೆಯು ಇದುವರೆಗೆ 2,911 ಕೆಎಫ್‌ಡಿ ಪರೀಕ್ಷೆಗಳನ್ನು ನಡೆಸಿದ್ದು, ಅದರಲ್ಲಿ ಇಬ್ಬರಿಗೆ ಮಂಗನ ಕಾಯಿಲೆಯ ಸೋಂಕು ಇರುವುದು ಪತ್ತೆಯಾಗಿದೆ.
ಡಿಸೆಂಬರ್ 14ರಂದು ಶಿವಮೊಗ್ಗ ಜಿಲ್ಲೆಯಲ್ಲಿ 53 ವರ್ಷದ ಮಹಿಳೆಗೆ ಕೆಎಫ್‌ಡಿ ಪಾಸಿಟಿವ್ ಬಂದಿದ್ದು, ಆಕೆಗೆ ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
DHO ಪ್ರಕಾರ, ಪ್ರತಿ ವರ್ಷ ನವೆಂಬರ್ ತಿಂಗಳಿನಿಂದ ಮಾರ್ಚ್ ನಡುವೆ ಈ ಪ್ರದೇಶದಿಂದ KFD ಪ್ರಕರಣಗಳು ವರದಿಯಾಗುತ್ತವೆ.