Home ರಾಜ್ಯ ಶಿವಮೊಗ್ಗ ಕಂಪ್ಯೂಟರ್ ಸೆಂಟರ್ ಮೂಲಕ ನಕಲಿ ಲೇಬರ್ ಕಾರ್ಡ್; ಮೋಸ ಹೋಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾ ಕಾರ್ಮಿಕ...

ಕಂಪ್ಯೂಟರ್ ಸೆಂಟರ್ ಮೂಲಕ ನಕಲಿ ಲೇಬರ್ ಕಾರ್ಡ್; ಮೋಸ ಹೋಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾ ಕಾರ್ಮಿಕ ಅಧಿಕಾರಿ

0

ಶಿವಮೊಗ್ಗ, ನವೆಂಬರ್ 30: ಜಿಲ್ಲೆಯಲ್ಲಿ ಕೆಲವು ಕಂಪ್ಯೂಟರ್ ಸೆಂಟರ್‌ಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೀಡುತ್ತಿರುವ ಗುರುತಿನ ಚೀಟಿಗಳನ್ನೇ ಎಡಿಟ್ ಮಾಡಿ ಕಾರ್ಮಿಕರಿಗೆ ಲೇಬರ್ ಕಾರ್ಡ್ಗಳನ್ನು ಮಾಡಿಕೊಡುತ್ತೇವೆಂದು ಹೇಳಿ ಕಾರ್ಮಿಕರನ್ನು ವಂಚಿಸಿ, ನಕಲಿ ಕಾರ್ಮಿಕರ ಗುರುತಿನ ಚೀಟಿ ನೀಡುತ್ತಿದ್ದು ಇದು ಅಪರಾಧವಾಗಿದೆ. ಕಾರ್ಮಿಕರು ಇಂತಹವರಿಂದ ಮೋಸ ಹೋಗಬಾರದೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.


ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳನ್ನಾಗಿ ನೋಂದಾಯಿಸಲು ಕಾರ್ಮಿಕ ನಿರೀಕ್ಷಕರುಗಳನ್ನು ನೋಂದಣಿ ಅಧಿಕಾರಿಯಾಗಿ ನೇಮಕ ಮಾಡಲಾಗಿರುತ್ತದೆ.
ಆ ಪ್ರಕಾರ ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕಿನಲ್ಲಿಯು ಕಾರ್ಮಿಕ ನಿರೀಕ್ಷಕರುಗಳು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ನೋಂದಣಿ ಮಾಡಿ ಗುರುತಿನ ಚೀಟಿ (ಲೇಬರ್ ಕಾರ್ಡ್) ಗಳನ್ನು ನೀಡುತ್ತಿದ್ದಾರೆ.


ಆದರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಕಂಪ್ಯೂಟರ್ ಸೆಂಟರ್‌ಗಳಲ್ಲಿ ಶಿವಮೊಗ್ಗ ಜಿಲ್ಲೆಯ ಕಾರ್ಮಿಕ ನಿರೀಕ್ಷಕರುಗಳ ಕಛೇರಿಗಳಲ್ಲಿ ನೋಂದಣಿ ಮಾಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೀಡುತ್ತಿರುವ ಗುರುತಿನ ಚೀಟಿಗಳನ್ನೇ ಎಡಿಟ್ ಮಾಡಿ ಕಾರ್ಮಿಕರಿಗೆ ಲೇಬರ್ ಕಾರ್ಡ್ಗಳನ್ನು ಮಾಡಿಕೊಡುತ್ತೇವೆಂದು ಹೇಳಿ ಕಾರ್ಮಿಕರನ್ನು ವಂಚಿಸಿ ಅವರಿಂದ ಕಾನೂನುಬಾಹಿರವಾಗಿ ಹೆಚ್ಚಿನ ಹಣವನ್ನು ಸಂಗ್ರಹ ಮಾಡಿ ನಕಲಿ ಕಾರ್ಡ್ ಗಳನ್ನು ಲೇಬರ್ ಕಾರ್ಡ್ಗಳೆಂದು ತಯಾರಿಸಿ ನೀಡುತ್ತಿರುವುದು ಈ ಕಛೇರಿಯ ಗಮನಕ್ಕೆ ಬಂದಿರುತ್ತದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹ ಕಾರ್ಡ್ಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಹಾಗೂ ಇಲಾಖೆಯಿಂದ ಯಾವುದೇ ಸೌಲಭ್ಯಗಳು ಸಹ ದೊರೆಯುವುದಿಲ್ಲ.


ಆದ ಕಾರಣ ಅಂತಹವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿಗೆ ಅಥವಾ ಆಯಾಯ ತಾಲ್ಲೂಕುಗಳ ಕಾರ್ಮಿಕ ನಿರೀಕ್ಷಕರುಗಳ ಕಛೇರಿಗೆ ಮಾಹಿತಿಯನ್ನು ನೀಡುವುದರ ಮೂಲಕ ನಿಜವಾದ ಕಾರ್ಮಿಕರು ವಂಚನೆಗೊಳಗಾಗುವುದನ್ನು ತಪ್ಪಿಸಲು ಸಹಕರಿಸಬೇಕು.


ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ನೋಂದಣಿ ಮಾಡಿ ಗುರುತಿನ ಚೀಟಿ (ಲೇಬರ್ ಕಾರ್ಡ್)ಗಳನ್ನು ನೀಡುವ ನೋಂದಣಿ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಆಯಾಯ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರುಗಳಾಗಿದ್ದು, ಹೊಸದಾಗಿ ಲೇಬರ್ ಕಾರ್ಡ್ ಮಾಡಿಸುವ ಫಲಾನುಭವಿಗಳು ಸಿಎಸ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ‘ಸ್ವೀಕೃತಿ ಪತ್ರ’ ಲಭ್ಯವಾಗುತ್ತದೆ. ತದನಂತರ ಕಾರ್ಮಿಕ ನಿರೀಕ್ಷಕರು ಕಾಲಮಿತಿಯೊಳಗೆ ಸ್ಥಳ ಪರಿಶೀಲನೆ ನಡೆಸಿ ಕಾರ್ಮಿಕ ಕಾರ್ಡ್ ಅನ್ನು ಅನುಮೋದನೆ ಮಾಡುತ್ತಾರೆ. ಅದರ ಆಧಾರದ ಮೇಲೆ ಫಲಾನುಭವಿಗಳು ಸಿಎಸ್‌ಸಿ ಸೆಂಟರ್‌ಗಳಲ್ಲಿ ಕಾರ್ಮಿಕ ಕಾರ್ಡ್ಗಳನ್ನು ಪಡೆಯಬಹುದಾಗಿರುತ್ತದೆ. ಇದರ ಹೊರತು ಬೇರೆ ಯಾವುದೇ ಕಂಪ್ಯೂಟರ್ ಸೆಂಟರ್ ಮತ್ತು ಇನ್ನಿತರ ಕಛೇರಿಗಳಲ್ಲಿ ಕಾರ್ಡ್ಗಳನ್ನು ನೋಂದಣಿ ಮಾಡಿ ನೀಡಲಾಗುವದಿಲ್ಲವೆಂಬುದನ್ನು ಎಲ್ಲರೂ ಮನಗಾಣಬೇಕೆಂದು ಈ ವಿಷಯದಲ್ಲಿ ಯಾರು ಸಹ ಮೋಸಹೋಗಬಾರದೆಂದು ಶಿವಮೊಗ್ಗ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಎಂ.ಪಿ ವೇಣುಗೋಪಾಲ್ ರವರು ತಿಳಿಸಿರುತ್ತಾರೆ.

You cannot copy content of this page

Exit mobile version