Home ದೇಶ ಲೇಹ್‌ನಲ್ಲಿ ಹಿಂಸಾಚಾರ ಭುಗಿಲು: ಲಡಾಖ್ ‘ರಾಜ್ಯ ಸ್ಥಾನಮಾನ’ ಹೋರಾಟ ತೀವ್ರ. ನಾಲ್ಕು ಸಾವು, ಹಲವರಿಗೆ ಗಾಯ

ಲೇಹ್‌ನಲ್ಲಿ ಹಿಂಸಾಚಾರ ಭುಗಿಲು: ಲಡಾಖ್ ‘ರಾಜ್ಯ ಸ್ಥಾನಮಾನ’ ಹೋರಾಟ ತೀವ್ರ. ನಾಲ್ಕು ಸಾವು, ಹಲವರಿಗೆ ಗಾಯ

0

ಲೇಹ್: ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಆಂದೋಲನ ಬುಧವಾರ ಹಿಂಸಾಚಾರಕ್ಕೆ ತಿರುಗಿದೆ. ಆಂದೋಲನಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದು, 40 ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಸೇರಿದಂತೆ ಸುಮಾರು 80 ಮಂದಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಪ್ರತಿಭಟನಾಕಾರರು ಲೆಹ್‌ನಲ್ಲಿರುವ ಬಿಜೆಪಿ ಕಚೇರಿ ಸೇರಿದಂತೆ ಹಲವು ಕಟ್ಟಡಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅವರು ಪೊಲೀಸರ ವಾಹನಗಳನ್ನೂ ಧ್ವಂಸಗೊಳಿಸಿದರು. ಅಲ್ಲದೆ, ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಲಡಾಖ್ ಸರ್ಕಾರ ಹೇಳಿದೆ. ಕೇಂದ್ರ ಸರ್ಕಾರ ಜನರ ಆಶಯಗಳನ್ನು ಪರಿಗಣಿಸಿ ಅಗತ್ಯ ಸಂವಿಧಾನಾತ್ಮಕ ರಕ್ಷಣೆಗಳನ್ನು ಒದಗಿಸುತ್ತದೆ ಎಂದು ತಿಳಿಸಿದೆ.

ಘಟನೆಯ ನಂತರ, ಅಧಿಕಾರಿಗಳು ಲೇಹ್ ಜಿಲ್ಲೆಯಲ್ಲಿ ಬಿಎನ್‌ಎಸ್‌ಎಸ್‌ನ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ. ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಸೇರ್ಪಡೆಗಾಗಿ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ನೇತೃತ್ವದಲ್ಲಿ ಹಲವು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಉಪವಾಸ ಮಾಡುತ್ತಿದ್ದವರಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಪರಿಸ್ಥಿತಿ ಉಂಟಾಗಿದ್ದರಿಂದ, ಲೇಹ್ ಅಪೆಕ್ಸ್ ಕೌನ್ಸಿಲ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಬುಧವಾರ ಬಂದ್‌ಗೆ ಕರೆ ನೀಡಿದ್ದವು.

ಬಂದ್ ಹಿಂಸಾತ್ಮಕವಾಗಿ ಬದಲಾದ ಬಗ್ಗೆ ವಾಂಗ್‌ಚುಕ್ ವಿಷಾದ ವ್ಯಕ್ತಪಡಿಸಿದ್ದಾರೆ. 15 ದಿನಗಳಿಂದ ತಾವು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಹಿಂಸೆಯನ್ನು ನಿಲ್ಲಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ರಾಜ್ಯ ಸ್ಥಾನಮಾನ ಮತ್ತು ಇತರ ಬೇಡಿಕೆಗಳ ಬಗ್ಗೆ ಚರ್ಚಿಸಲು ಮುಂದಿನ ತಿಂಗಳು ಅಕ್ಟೋಬರ್ 6 ರಂದು ಸಭೆಗೆ ಬರುವಂತೆ ಕೇಂದ್ರ ಸರ್ಕಾರವು ಇತ್ತೀಚೆಗೆ ಲಡಾಖ್ ಪ್ರತಿನಿಧಿಗಳನ್ನು ಆಹ್ವಾನಿಸಿದೆ.

You cannot copy content of this page

Exit mobile version