Monday, June 17, 2024

ಸತ್ಯ | ನ್ಯಾಯ |ಧರ್ಮ

ಹ್ಯಾಲೋಜೆನ್ ಬೆಳಕಿನಡಿ ದೊಂದಿಯೊಂದರ ಸ್ವಗತ

ಪ್ರತಿ ಜನಪದರ ಹಬ್ಬಕ್ಕೂ ಆ ಹಬ್ಬಕ್ಕೆ ಸಂಬಂಧಿಸಿದ ಪರಿಸರ ಕೂಡಾ ಬಹಳ ಮುಖ್ಯ. ಒಂದು ಪರಿಸರ ಸ್ಥಿತಿ ನಾಶವಾಗುತ್ತಿದ್ದ ಹಾಗೆ ಅದರ ಸುತ್ತಲಿನ ಆಚರಣೆಗಳು ಕಣ್ಮರೆಯಾಗತೊಡಗುತ್ತವೆ. ಕೆಲವು ತಲೆಮಾರುಗಳು ಅದನ್ನು ಸಾಂಕೇತಿಕವಾಗಿ ಆಚರಿಸುತ್ತವೆಯಾದರೂ ನಂತರದ ದಿನಗಳಲ್ಲಿ ಅದು ಅಳಿಸಿ ಹೋಗುತ್ತದೆ. ಒಕ್ಕಲು ಮಾಡುವ ಜನರ ಆಚರಣೆಗಳು ಇಂದು ಬಹುತೇಕ ನಶಿಸಿವೆ.

ಬೇಸಾಯ ಮಾಡುತ್ತಿದ್ದವರು ಬೇಸಾಯ ಬಿಟ್ಟು ಅಡಿಕೆ ಬೆಳೆಯತೊಡಗಿದಂತೆ ಮನೆಯಲ್ಲಿನ ಎತ್ತುಗಳು, ಹೋರಿಗಳು ಕಣ್ಮರೆಯಾದವು. ಅದರೊಂದಿಗೆ ಎತ್ತು ಮತ್ತು ಹೋರಿಗಳ ಸುತ್ತ ಹುಟ್ಟಿಕೊಂಡಿದ್ದ ಹಬ್ಬಗಳೂ ಕಣ್ಮರೆಯಾದವು. ಇಂದು ಕಂಬಳ ಕೂಡಾ ಧಾರ್ಮಿಕ ಆಚರಣೆಯಾಗಿ, ಜನರ ಪ್ರೈಡ್‌ನ ಭಾಗವಾಗಿ ಆಚರಣೆಯಾಗಿ ಉಳಿದಿದೆಯೇ ಹೊರತು ಕೃಷಿಯ ಭಾಗವಾಗಿ ಉಳಿದಿಲ್ಲ‌ ಬಹುತೇಕ ಕಂಬಳದ ಹೋರಿಗಳು ಸ್ಥಿತಿವಂತ ಜನರ ಮನೆಯ ಹೆಮ್ಮೆಗೆ ಕೋಡು ಮೂಡಿಸುವವೇ ಹೊರತು ಅವುಗಳಿಗೆ ಗದ್ದೆಗಿಳಿದು ಬೇಸಾಯ ಮಾಡಿ ಗೊತ್ತಿಲ್ಲ.

ನಮ್ಮ ಊರಿನಲ್ಲಿ ಮೊದಲು ಕಂಬಳ ನಡೆಯುವಾಗ ಎರಡು ಬಗೆಯ ಕಂಬಳ ನಡೆಯುತ್ತಿದ್ದವು. ಒಂದು ಕೆಸರು ಗದ್ದೆಯ ಕಂಬಳವಾದರೆ, ಇನ್ನೊಂದು ಒಣ ಮಣ್ಣಿನ ಹೆಂಟೆಗಳಿರುವ ಗದ್ದೆಯಲ್ಲಿ ಎತ್ತುಗಳನ್ನು ಓಡಿಸುವ ಕಂಬಳ. ಆದರೆ ಇವತ್ತು ಎಲ್ಲೂ ಎರಡನೇ ಬಗೆಯ ಕಂಬಳ ಉಳಿದಂತೆ ಇಲ್ಲ.

ಮೊದಲು ಒಂದು ಹಾಡಿಯ ಭಾಗವಾಗಿ, ಗದ್ದೆ ಬದುವಿನ ಭಾಗವಾಗಿ ನಾಗನ ಬನ ಇರುತ್ತಿತ್ತು. ಆದರೆ ಇಂದು ನಾಗನ ಬನ ಎನ್ನುವುದು ಕೆಲವೆಡೆ 10×10 ಅಳತೆಗೆ ಸೀಮಿತವಾಗಿದೆ. ಇದಕ್ಕೆ ಕಾರಣ ಕುಟುಂಬಗಳು ವಿಘಟನೆಗೊಂಡಂತೆ ಜಾಗದ ಕೊರತೆ. ಈಗ ಕೆಲವೆಡೆ ಈ ಜಾಗವೂ ಇಲ್ಲದೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿಮ್ಮ ಕುಟುಂಬದ ನಾಗನ ಕಲ್ಲನ್ನು ಪ್ರತಿಷ್ಟೆ ಮಾಡಿ ವರ್ಷಕ್ಕೊಮ್ಮೆ ನೀವು ಪೂಜೆ ಸಲ್ಲಿಸಿ ಬಂದರಾಯಿತು. ಅಲ್ಲಿಗೆ ನೀವು ಸಾಂಕೇತಿಕವಾಗಿ ದೇವರೊಂದಿಗೆ ಇರುತ್ತೀರಿ, ಆದರೆ ಆ ದೇವರನ್ನು ಆಚರಿಸುತ್ತಿರುವುದಿಲ್ಲ ಬದಲಿಗೆ ಪೂಜಿಸುತ್ತಿರುತ್ತೀರಿ. ಹೀಗೆ ಕೇವಲ ಪೂಜೆಗಷ್ಟೇ ಸೀಮಿತವಾಗುವ ದೇವರುಗಳಲ್ಲಿ ನಿಮಗೆ ಪ್ರೀತಿ, ಆದರಗಳ ಬದಲು ಭಯ ಮತ್ತು ಭಕ್ತಿ ಮಾತ್ರವೇ ಇರುತ್ತದೆ.

ಹೀಗೆ ಪ್ರತಿಯೊಂದು ಜನಪದರ ಆಚರಣೆಗಳು ಅಭಿವೃದ್ಧಿ ಮತ್ತು ಕಾಲದ ಬದಲಾವಣೆಯ ಚಕ್ರಕ್ಕೆ ಸಿಲುಕಿ ಮುಂದೇನು ಎನ್ನುವ ಪ್ರಶ್ನೆ ಎದುರಾಗಿ ಈ ರೀತಿ ಆಚರಣೆಗೆ ಸೀಮಿತಗೊಳಿಸುವ ಕೆಲಸವನ್ನು ಯಾರು ಮಾಡುತ್ತಾರೆನ್ನವುದು ಎಲ್ಲರಿಗೂ ತಿಳಿದಿರುವ ಸತ್ಯ.

ಆದರೆ ಈ ವೈದಿಕ, ಕ್ರೈಸ್ತ ಮತ್ತು ಮುಸ್ಲಿಂ ಇತ್ಯಾದಿ ರಿಲಿಜಿಯನ್ ಮಾದರಿಯ ಧಾರ್ಮಿಕತೆಯನ್ನು ಪಾಲಿಸುವವರಿಗೆ ಈ ಅಪಾಯ ಅಷ್ಟು ಇರುವುದಿಲ್ಲ. ಅವರದು ಬಹುತೇಕ ಧಾರ್ಮಿಕ ಪುಸ್ತಕ ಮತ್ತು ಅವರ ದೇವರ ಕತೆಗಳ ಹಿನ್ನೆಲೆಯಲ್ಲಿನ ಹಬ್ಬಗಳೇ ಹೆಚ್ಚು. ಯಾವುದೋ ದೇವರೋ, ದೇವ ಮಾನವನೋ ಹುಟ್ಟಿದ, ಬಲಿಯಾದ ಇತ್ಯಾದಿ ದಂತ ಕತೆಗಳೇ ಇರುತ್ತವೆ. ಇವುಗಳಿಗೆ ಒಂದು ಪರಿಸರದ ಹಂಗಿರುವುದಿಲ್ಲ. ಅದನ್ನು ಹೆಚ್ಚು ಕಡಿಮೆ ಎಲ್ಲೂ ಆಚರಿಸಬಹುದು. ಆದರೆ ಜನಪದರ ಹಬ್ಬಗಳಿಗೂ ಸ್ಥಳೀಯ ಪರಿಸರಕ್ಕೂ ಅವಿನಾಭಾವ ಸಂಬಂಧವಿರುತ್ತದೆ. ಈ ದೀಪಾವಳಿಗೆ ನಡೆಯುವ ಬಲೀಂದ್ರ ಪೂಜೆಗೆ ಈ ಸಮಯದಲ್ಲಿ ಸುತ್ತಲಿನ ಕಾಡುಮೇಡುಗಳಲ್ಲಿ ಸಿಗುವ ಸಾಕಷ್ಟು ಗಿಡಗಂಟಿಗಳ ಹೂವು, ಎಲೆ ಇತ್ಯಾದಿ ಬೇಕು. ಜನಪದ ಆಚರಣೆಗಳು ಯಾಕೆ ಸಾಯುತ್ತವೆ ಎಂದರೆ ಪರಿಸರ ಸಾಯುತ್ತಿರುವುದಕ್ಕೆ ಎನ್ನುವ ಸುಲಭ ಉತ್ತರವನ್ನು ಕಂಡುಕೊಳ್ಳಬಹುದು. ಅದು ಸಾಂಕೇತಿಕವಾಗಿ ಆಚರಣೆಯಾಗುವಾಗ ಇಂದು ಈ ಜನಪದರ ಪೂಜೆಗಳ ಮುಂದಾಳತ್ವ ವಹಿಸಿರುವ ವೈದಿಕ ಪರಿಕಲ್ಪನೆ ಅದರಲ್ಲಿ ಮೌಲ್ಡ್ ಆಗುತ್ತದೆ. ಇದು ಸಹಜವೂ ಹೌದು ಅಸಹಜವೂ ಹೌದು.

ಹಾಗೆಯೇ ಇಂದು ದೈವ-ನಾಗ ಇತ್ಯಾದಿ ಆಚರಣೆಗಳು ಹೊಸ ಹೊಳಪಿನ ಗೋಪುರಗಳು, ಕಳಶಗಳ ಗೋಪುರದಡಿ ಮಿಂಚಲು ಮುಂಬಯಿ -ದುಬಾಯಿ – ಇತ್ತೀಚೆಗೆ ಬೆಂಗಳೂರು ಹಣ ಎಷ್ಟರಮಟ್ಟಿಗೆ ಕಾರಣವೋ, ಅದೇ ದುಡ್ಡು ನಾಗ ಮತ್ತು ಇತ್ಯಾದಿ ದೈವ ದೇವರ ಜಾಗಗಳನ್ನು ಜೆಸಿಬಿ ತನ್ನ ತನ್ನ ದೈತ್ಯ ಹಲ್ಲುಗಳಿಂದ ಒತ್ತರಿಸುತ್ತಾ ಅಭಿವೃದ್ಧಿಯ ಹೆಸರಿನಲ್ಲಿ ಕರಾವಳಿಯ ರೂಪವನ್ನು ವಿರೂಪಗೊಳಿಸಲು ಕಾರಣವಾಗಿದೆ. ದೊಡ್ಡ ದೊಡ್ಡ ಡ್ಯೂಪ್ಲೆಕ್ಸ್ ಮನೆಗಳು ಕಣ್ಣಿಗೆ ಹಬ್ಬ ಉಂಟುಮಾಡುತ್ತವೆಯಾದರೂ ಅದರೊಳಗೆ ಇದ್ದು ಎಲ್ಲಿಗೂ ಹೋಗಲಾಗದ ಅನಿವಾರ್ಯತೆಗೆ ಸಿಲುಕಿ, ಇಂದೋ ನಾಳೆಯೋ ಎಂದು ಕಾಯುತ್ತಿರುವ ಹಿರಿಯ ಜೀವಗಳ ತಳಮಳ ಮನುಷ್ಯ ಮಾತ್ರರಲ್ಲಿ ನಿಟ್ಟುಸಿರು ಹುಟ್ಟಿಸದೆ ಇರುವುದಿಲ್ಲ.

ಸಂಪತ್ತು, ವಿದ್ಯೆ, ಹಣಕಾಸು ಎಲ್ಲದರಲ್ಲೂ  ಬಹುತೇಕ ಸಮೃದ್ಧವಾಗಿಯೇ ಇರುವ ಕರಾವಳಿ ತಾನು ವಿವೇಚನೆಯ ಹಾದಿಯಲ್ಲಿ ಬದುಕುತ್ತಿದ್ದೇನೆಯೇ ಎನ್ನುವುದನ್ನು ಕೇಳಿಕೊಳ್ಳಬೇಕಿದೆ. ಈ ಹಳಿ ತಪ್ಪಿದ ಮಳೆ, ಚಳಿಯೆನ್ನವುದು ಮರೆತೇ ಹೋಗುತ್ತಿರುವ ದಿನಮಾನದಲ್ಲಿ ತಾನು ತನ್ನ ಮುಂದಿನ ಪೀಳಿಗೆಗೆ ತಾನು ಇತರರೆದುರು ಹೆಮ್ಮೆಯಿಂದ ತನ್ನದೆಂದು ಹೇಳಿಕೊಳ್ಳುವ ಕರಾವಳಿಯನ್ನು ಯಾವ ಸ್ವರೂಪದಲ್ಲಿ ಬಿಟ್ಟು ಹೋಗುತ್ತಿದ್ದೇನೆ ಎಂದು ಕೇಳಿಕೊಳ್ಳಬೇಕಿದೆ. ಏಕೆಂದರೆ ಕರಾವಳಿ ಕರಾವಳಿ ಎನ್ನಿಸಿಕೊಳ್ಳುವುದು ಅದರ ಸಂಸ್ಕೃತಿಯ ಜೊತೆ ಬೆರೆತ ಪರಿಸರಿದಿಂದಲೇ ಹೊರತು, ಹಣ ಚೆಲ್ಲಿ ಸೃಷ್ಟಿಸಿದ ಭ್ರಮೆಯಿಂದಲ್ಲ. ಎಲ್ಲೆಂದರಲ್ಲಿ ಸಿಮೆಂಟ್ ಕಾಂಕ್ರೀಟ್ ಸುರಿಯುವ ಮೊದಲು ನಾವು ಏನು ಮಾಡುತ್ತಿದ್ದೇವೆ ಎನ್ನವುದನ್ನು ಕೇಳಿಕೊಳ್ಳಬೇಕಿದೆ.

ನಮ್ಮ ಹಿರಿಯರು ಪ್ರಕೃತಿಗೆ ಹೊಂದಿಕೊಂಡು ಬದುಕಿದರು, ಆ ಪ್ರಕೃತಿಯ ಸಂಭ್ರಮವನ್ನೇ ಸಂಭ್ರಮಿಸಿದರು, ನಾವು ಇಂದು ಅದಕ್ಕೆ ವಿರುದ್ಧವಾದ ದಿಕ್ಕಿನದಲ್ಲಿದ್ದೇವೆ. ಘಟ್ಟದ ಮೇಲಿನ ದುಡ್ಡು ಒಳ್ಳೆಯ ಮನೆಯನ್ನು ಕಟ್ಟಿಸಿಕೊಡಬಲ್ಲದು ಆದರೆ ಆ ದುಡ್ಡು ಮಳೆ ತರಿಸಲಾರದು, ಹೊಳೆ ತುಂಬಿಸಲಾರದು, ಕಡಲಿನ ಒಡಲಿನಲ್ಲಿ ಮೀನುಗಳನ್ನು ಹುಟ್ಟಿಸಲಾರದು ಎನ್ನುವುದನ್ನು ನೆನಪಿಟ್ಟುಕೊಳ್ಳೋಣ. ನಮ್ಮ ಹಣ ಅಂತಸ್ತು ಮತ್ತು ಪದವಿ ಬಳಸಿ ಎಲ್ಲವನ್ನೂ ನಿಯಂತ್ರಿಸಬಹುದು, ಎಲ್ಲರ ಬಾಯಿಯನ್ನು ಮುಚ್ಚಿಸಬಹುದು ಮತ್ತು ನಮಗೆ ಬೇಕಾದಂತೆ ಬಳಸಿಕೊಳ್ಳಬಹುದು ಆದರೆ ಪ್ರಕೃತಿ ಇದಕ್ಕೆ ಅಪವಾದ. ಅದಕ್ಕೆ ಪರ್ಯಾಯವಿಲ್ಲ.

ಎಲ್ಲರಿಗೂ ಹಬ್ಬದ ಶುಭಾಶಯ

– ನೀಲಿ ಚುಕ್ಕಿ

Related Articles

ಇತ್ತೀಚಿನ ಸುದ್ದಿಗಳು