ದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಗಲಭೆ ಸೃಷ್ಟಿಯಾದ ನಂತರ ಬಂಧಿತರಾಗಿ ಜೋಧ್‌ಪುರ ಜೈಲಿನಲ್ಲಿರುವ ಹವಾಮಾನ ಸಂರಕ್ಷಣಾ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು, ಲಡಾಖ್‌ನ ಜನರಿಗೆ ಶಾಂತಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರಲು ಕರೆ ನೀಡುವ ಪತ್ರವನ್ನು ಬರೆದಿದ್ದಾರೆ.
ರಾಜ್ಯ ಸ್ಥಾನಮಾನಕ್ಕಾಗಿ ಗಾಂಧೀಜಿಯವರ ಅಹಿಂಸಾ ಸಿದ್ಧಾಂತದ ಮಾರ್ಗದಲ್ಲೇ ತಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಅವರು ಆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 25 ರಂದು ಪ್ರತಿಭಟನಾಕಾರರು ಆಂದೋಲನ ನಡೆಸಿದಾಗ ಹಿಂಸಾಚಾರ ಭುಗಿಲೆದ್ದು, ಲೇಹ್ ಪಟ್ಟಣದಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ (NSA) ಅಡಿಯಲ್ಲಿ ಎನ್‌ಐಎ (NIA) ಬಂಧಿಸಿ ಜೋಧ್‌ಪುರ ಜೈಲಿಗೆ ಕಳುಹಿಸಿತ್ತು. ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ತನ್ನ ಪತಿಯನ್ನು ಅಕ್ರಮವಾಗಿ ಬಂಧಿಸಿರುವುದನ್ನು ಪ್ರಶ್ನಿಸಿ ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಸೋಮವಾರ ನಡೆಸಲಿದೆ.