ಪಾಟ್ನಾ: ಬಿಹಾರದಲ್ಲಿ (Bihar) ಇನ್ನೂ ಎರಡು ಮೂರು ದಿನಗಳಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ, ಹಾಲಿ ಕ್ಯಾಬಿನೆಟ್ (ಸಂಪುಟ) ಇಂದು ಕೊನೆಯ ಬಾರಿಗೆ ಸಭೆ ಸೇರಲಿದೆ. ಸಿಎಂ ನಿತೀಶ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಿಗ್ಗೆ 11.30ಕ್ಕೆ ಸಭೆ ನಡೆಯಲಿದೆ. ಸಚಿವ ಸಂಪುಟವನ್ನು ವಿಸರ್ಜಿಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿಗೆ ವಹಿಸಿಕೊಡುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗುತ್ತದೆ.
ನಂತರ ಸಿಎಂ ನಿತೀಶ್ ರಾಜ್‌ಭವನಕ್ಕೆ ತೆರಳಲಿದ್ದಾರೆ. ಅಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿಯಾಗಿ ತಮ್ಮ ಸರ್ಕಾರವನ್ನು ವಿಸರ್ಜಿಸುವಂತೆ ಕೋರಲಿದ್ದಾರೆ. ಇತ್ತೀಚೆಗೆ ಚುನಾಯಿತರಾದ ಶಾಸಕರ ಪಟ್ಟಿಯನ್ನು ಚುನಾವಣಾ ಆಯೋಗದ ಮುಖ್ಯ ಅಧಿಕಾರಿ ವಿನೋದ್ ಸಿಂಗ್ ಗುಜಿಯಾಲ್ ರಾಜ್ಯಪಾಲ ಆರಿಫ್ ಅವರಿಗೆ ಭಾನುವಾರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಪುಟ ಸಭೆ ನಡೆಯಲಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟವು ಭರ್ಜರಿ ಜಯ ಸಾಧಿಸಿತ್ತು. ಈ ಕಾರಣದಿಂದ ಮತ್ತೊಮ್ಮೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಎನ್‌ಡಿಎ ಪಾಲುದಾರ ಪಕ್ಷಗಳು ನಿರ್ಧರಿಸಿವೆ. ಈಗಾಗಲೇ ಕ್ಯಾಬಿನೆಟ್ ರಚನೆಯ ಕುರಿತು ಸಹ ಅಂತಿಮ ನಿರ್ಧಾರವಾಗಿದೆ ಎಂದು ರಾಜಕೀಯ ವಲಯಗಳು ತಿಳಿಸಿವೆ.
ಇದರ ಪ್ರಕಾರ, ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದಿದ್ದರೂ, ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರೇ ಮತ್ತೊಮ್ಮೆ ಸಿಎಂ ಪೀಠವನ್ನು ಅಲಂಕರಿಸಲಿದ್ದಾರೆ. ಬಿಜೆಪಿ ಮತ್ತು ಎಲ್‌ಜೆಪಿ ಪಕ್ಷಗಳಿಗೆ ತಲಾ ಒಂದು ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ. ‘ಪ್ರತಿ ಆರು ಶಾಸಕರಿಗೆ ಒಂದು ಸಚಿವ ಸ್ಥಾನ’ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಮತ್ತು ಜೆಡಿ(ಯು) ಪಕ್ಷಗಳು ಟಿಕೆಟ್ ಹಂಚಿಕೊಂಡ ಅನುಪಾತದಲ್ಲಿಯೇ ಸಚಿವ ಸ್ಥಾನಗಳನ್ನು ಪಡೆಯಲು ಒಪ್ಪಿಕೊಂಡಿವೆ.
ಇದರ ಪ್ರಕಾರ, ಮಂತ್ರಿಮಂಡಲದಲ್ಲಿ ಬಿಜೆಪಿಗೆ 15-16 ಸ್ಥಾನಗಳು, ಜೆಡಿ(ಯು)ಗೆ 14 ಸ್ಥಾನಗಳು, ಎಲ್‌ಜೆಪಿ (ರಾಮ್ ವಿಲಾಸ್) ಗೆ ಮೂರು ಸ್ಥಾನಗಳು, ಹಾಗೂ ಎಚ್‌ಎಎಂ ಮತ್ತು ಆರ್‌ಎಲ್‌ಎಸ್‌ಪಿ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನವನ್ನು ಹಂಚಿಕೆ ಮಾಡಲಾಗುತ್ತದೆ.
ಸಿಎಂ ಹುದ್ದೆಯನ್ನು ನಿತೀಶ್ ಅವರಿಗೇ ನೀಡಲು ಬಿಜೆಪಿ ನಿರ್ಧರಿಸಿರುವುದರಿಂದ, ಮಹಾರಾಷ್ಟ್ರದಲ್ಲಿ ಆದಂತೆ ಅಧಿಕಾರದ ವಿಚಾರದಲ್ಲಿ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳು ಇಲ್ಲವೇ ಇಲ್ಲ. ಪ್ರಧಾನಿ ಮೋದಿ ಅವರ ಲಭ್ಯತೆಯನ್ನು ಅವಲಂಬಿಸಿ ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭದ ವೇಳಾಪಟ್ಟಿ ಬುಧವಾರ ಅಥವಾ ಗುರುವಾರ ಇರಬಹುದು.
ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವು ಒಟ್ಟು 202 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಬಿಜೆಪಿ 89, ನಿತೀಶ್ ಕುಮಾರ್ ಅವರ ಜೆಡಿ(ಯು) 85, ಮೈತ್ರಿ ಪಕ್ಷಗಳಾದ ಎಲ್‌ಜೆಪಿ (ರಾಮ್ ವಿಲಾಸ್) 19, ಎಚ್‌ಎಎಂ 5, ಮತ್ತು ಆರ್‌ಎಲ್‌ಎಸ್‌ಪಿ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮತ್ತೊಮ್ಮೆ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರ ನಡೆಸಲು ಸಿದ್ಧವಾಗಿದೆ.
ಮೈತ್ರಿ ಪಕ್ಷಗಳ ಆಂತರಿಕ ಚರ್ಚೆಯ ನಂತರ ಜಂಟಿ ಶಾಸಕಾಂಗ ಪಕ್ಷದ (Joint Legislative Party) ಸಭೆಯನ್ನು ನಡೆಸಿ, ಅದರಲ್ಲಿ ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಆ ವ್ಯಕ್ತಿಯೇ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.
