ಸಚಿವ ಸಂಪುಟಕ್ಕೆ ಕೊನೆ ಕ್ಷಣದ ಟ್ವಿಸ್ಟ್: ಮಂಕಾಳ್ ವೈದ್ಯ ಔಟ್, ಎಸ್‌.ಎಸ್‌. ಮಲ್ಲಿಕಾರ್ಜುನ ಇನ್!

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕೊನೆ ಕ್ಷಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ಬಂದಿದ್ದ ಅಂತಿಮ ಪಟ್ಟಿಯಲ್ಲಿ ಒಂದು ಮಹತ್ವದ ಬದಲಾವಣೆ ಮಾಡಲಾಗಿದ್ದು, ಮಂಕಾಳ್ ವೈದ್ಯ ಅವರ ಹೆಸರನ್ನು ಕೈಬಿಟ್ಟು, ದಾವಣಗೆರೆಯ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ.

ಈ ಬೆಳವಣಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಮಂಕಾಳ್ ವೈದ್ಯ ಅವರಿಗೆ ಭಾರೀ ನಿರಾಸೆ ಉಂಟುಮಾಡಿದ್ದು, ಅವರ ಬೆಂಬಲಿಗರಿಗೂ ದೊಡ್ಡ ಆಘಾತವಾಗಿದೆ. ಇದರೊಂದಿಗೆ ಮತ್ತೋರ್ವ ಲಿಂಗಾಯತ ಸಮುದಾಯದ ನಾಯಕ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಇಂದು ಸಂಜೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇನ್ನೊಂದೆಡೆ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡುವ ಬದಲು ಮಾಜಿ ಸಚಿವೆ ಉಮಾಶ್ರೀ ಅವರನ್ನು ಸಂಪುಟಕ್ಕೆ ಸೇರಿಸಬೇಕೆಂಬ ಒತ್ತಡವೂ ಕಾಂಗ್ರೆಸ್ ವಲಯದಲ್ಲಿ ಹೆಚ್ಚಾಗಿದೆ. ಆದರೆ ಉಮಾಶ್ರೀ ಅವರನ್ನು ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ, ಈ ಬೇಡಿಕೆಗೆ ಪಕ್ಷದ ವರಿಷ್ಠರು ಮನ್ನಣೆ ನೀಡುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಒಟ್ಟಾರೆ, ಕೊನೆ ಕ್ಷಣದ ಈ ಬದಲಾವಣೆ ಸಚಿವ ಸಂಪುಟ ವಿಸ್ತರಣೆಯ ರಾಜಕೀಯ ಲೆಕ್ಕಾಚಾರಕ್ಕೆ ಹೊಸ ತಿರುವು ನೀಡಿದ್ದು, ಮುಂದಿನ ಕೆಲವು ಗಂಟೆಗಳು ಕಾಂಗ್ರೆಸ್ ನಾಯಕರಿಗೆ ನಿರ್ಣಾಯಕವಾಗಿವೆ.

Related Articles

ಇತ್ತೀಚಿನ ಸುದ್ದಿಗಳು