Friday, June 14, 2024

ಸತ್ಯ | ನ್ಯಾಯ |ಧರ್ಮ

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ: ಮೆಟಾ ವಿರುದ್ಧ ಪ್ರಕರಣ ದಾಖಲಿಸಿದ ಅಮೇರಿಕಾದ 33 ರಾಜ್ಯಗಳು

ಅಮೇರಿಕಾದ (US) ಹಲವು ರಾಜ್ಯಗಳು ಸಾಮಾಜಿಕ ಜಾಲತಾಣ ದೈತ್ಯ ಮೆಟಾ ಮತ್ತು ಅದರ ಅಂಗಸಂಸ್ಥೆ Instagram ವಿರುದ್ಧ ಕೋರ್ಟ್‌ ಮೆಟ್ಟಿಲು ಹತ್ತಿವೆ. ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಅದರ ವ್ಯಸನಕಾರಿ ಗುಣದ ವಿರುದ್ಧ ಈ ರಾಜ್ಯಗಳು ತಿರುಗಿಬಿದ್ದಿವೆ.

ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್, ಫೆಡರಲ್ ನ್ಯಾಯಾಲಯದಲ್ಲಿ ಮಂಗಳವಾರ ಸಲ್ಲಿಸಿದ ದೂರಿನಲ್ಲಿ, ಕ್ಯಾಲಿಫೋರ್ನಿಯಾ ಮತ್ತು ಇಲಿನಾಯ್ಸ್ ಸೇರಿದಂತೆ 33 ರಾಜ್ಯಗಳು ಫೇಸ್‌ಬುಕ್ ಸಂಸ್ಥೆಯನ್ನು ನಿರ್ವಹಿಸುವ ಮೆಟಾ, ತನ್ನ ಪ್ಲಾಟ್‌ಫಾರ್ಮ್‌ಗಳ ಗಣನೀಯ ಅಪಾಯಗಳನ್ನು ಮುಚ್ಚಿಟ್ಟು ಸಾರ್ವಜನಿಕರನ್ನು ಪದೇ ಪದೇ ತಪ್ಪುದಾರಿಗೆಳೆಯುತ್ತಿದೆ ಮತ್ತು ಉದ್ದೇಶಪೂರ್ವಕವಾಗಿ ಚಿಕ್ಕ ಮಕ್ಕಳು ಮತ್ತು ಹದಿಹರೆಯದವರನ್ನು ವ್ಯಸನಕ್ಕೆ ಮತ್ತು ಕಡ್ಡಾಯ ಸಾಮಾಜಿಕ ಮಾಧ್ಯಮ ಬಳಕೆಗೆ ಪ್ರೇರೇಪಿಸುತ್ತದೆ ಎಂದು ದೂರಿದ್ದಾರೆ.

ಅತಿಯಾದ ಮೆಟಾ ವೇದಿಕೆಗಳ ಬಳಕೆಯು ಯುವಜನರಲ್ಲಿ ಖಿನ್ನತೆ, ಆತಂಕ, ನಿದ್ರಾಹೀನತೆಗೆ ಕಾರಣವಾಗುವುದರ ಜೊತೆಗೆ, ಅವರ ಶಿಕ್ಷಣ ಮತ್ತು ಮತ್ತು ದೈನಂದಿನ ಬದುಕಿನ ಮೇಲೂ ದುಷ್ಪರಿಣಾಮ ಬೀರುತ್ತಿರುವುದನ್ನು ಇತ್ತೀಚಿನ ಸಂಶೋಧನೆಗಳು ಬಹಿರಂಗಪಡಿಸಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಕ್ಕಳು ಮತ್ತು ಹದಿಹರೆಯದವರ ಪರವಾಗಿ ಸಾಮಾಜಿಕ ಮಾಧ್ಯಮ ಕಂಪನಿಗಳ ವಿರುದ್ಧ ನಡೆಯುತ್ತಿರುವ ಕಾನೂನು ಹೋರಾಟಗಳ ಸರಣಿಯಲ್ಲಿ ಈ ಮೊಕದ್ದಮೆ ಇತ್ತೀಚಿನದು. ByteDance ನ TikTok ಮತ್ತು Google ನ YouTube ವಿರುದ್ಧವೂ ಕೋರ್ಟುಗಳಲ್ಲಿ ಯುವಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದರ ವಿರುದ್ಧ ನೂರಾರು ಪ್ರಕರಣಗಳನ್ನು ದಾಖಲಿಸಲಾಗಿದೆ.

“ಲಾಭ ಗಳಿಸುವ ಏಕೈಕ ಉದ್ದೇಶದಿಂದ ಮೆಟಾ ಯುವಕರು ಮತ್ತು ಹದಿಹರೆಯದವರನ್ನು ತನ್ನ ವೇದಿಕೆಗಳಿಗೆ ಆಕರ್ಷಿಸಲು, ಅವರನ್ನು ಎಂಗೇಜ್‌ ಮಾಡಿಕೊಳ್ಳಲು ಮತ್ತು ಅದನ್ನು ವ್ಯಸನವನ್ನಾಗಿಸಲು ಹಲವು ಕ್ತಿಯುತ ಮತ್ತು ಅಭೂತಪೂರ್ವ ತಂತ್ರಜ್ಞಾನಗಳನ್ನು ಬಳಸಿಕೊಂಡಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೊಕದ್ದಮೆಯು ಗಣನೀಯ ಪ್ರಮಾಣದ ಸಿವಿಲ್ ಪೆನಾಲ್ಟಿಗಳನ್ನು ಒಳಗೊಂಡಂತೆ ವಿವಿಧ ಪರಿಹಾರಗಳನ್ನು ಕೋರಿದೆ.

“ಕಂಪನಿಗಳೊಂದಿಗೆ ಕೈಜೋಡಿಸಿಹದಿಹರೆಯದ ಮಕ್ಕಳು ಬಳಸುವ ಅಪ್ಲಿಕೇಷನ್ನುಗಳಿಗೆ ಸೂಕ್ತವಾದ ಮಾನದಂಡಗಳನ್ನು ರೂಪಿಸುವುದನ್ನು ಬಿಟ್ಟು ಅಟಾರ್ನಿ ಜನರಲ್‌ ಅವರು ಕೋರ್ಟಿನ ಮೆಟ್ಟಿಲು ಹತ್ತಿರುವುದು ನಮಗೆ ನಿರಾಶೆ ಮೂಡಿಸಿದೆ” ಎಂದು ಮೆಟಾ ಪ್ರಕಟಣೆ ತಿಳಿಸಿದೆ.

ಮೊಕದ್ದಮೆ ಹೂಡಿರುವ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಕಂಪನಿಯ ಶೇರಿನ ಬೆಲೆಯಲ್ಲಿ ಸಣ್ಣ ಮಟ್ಟದ ಕುಸಿತ ಕಂಡುಬಂದಿದೆ. ಅದರ ಶೇರುಗಳ ಬೆಲೆ 0.3% ರಷ್ಟು ಕಡಿಮೆಯಾಗಿದೆ.

2021ರಲ್ಲಿ ಬಿಡುಗಡೆಯಾದ ವರದಿಯೊಂದು ಈ ಪ್ರಕರಣ ದಾಖಲಿಸಲು ಕಾರಣವಾಗಿದೆ. ಅದು “Instagram ಹೆಣ್ಣು ಮಕ್ಕಳಲ್ಲಿ ಬಾಡಿ ಇಮೇಜ್‌ (Body image) ಸಮಸ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಹದಿಹರೆಯದವರ ಪಾಲಿಗೆ ವ್ಯಸನಕಾರಿಯಾಗಿ ಪರಿಣಮಿಸಿದೆ ಎಂದಿದೆ. ಈ ಕುರಿತು ತಿಳಿಸುವ ವಿವರಗಳ ಕುರಿತಾದ ದಾಖಲೆ ಮೆಟಾ ಬಳಿಯಿದೆ” ಎಂದಿದೆ.

ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಇತರ ಬಳಕೆದಾರರ ಲೈಕುಗಳಿಗಾಗಿ ಹಾತೊರೆಯುತ್ತಿರುತ್ತಾರೆ. ತಮ್ಮ ದೇಹ ಮತ್ತು ಕಂಟೆಂಟುಗಳಿಗೆ ಇನ್ನೊಬ್ಬರ ಅನುಮೋದನೆಗಾಗಿ ಕಾಯುತ್ತಾ ದಿನದ ಬಹುತೇಕ ಸಮಯವನ್ನು ಇನ್ಸ್ಟಾಗ್ರಾಮ್‌ನಲ್ಲಿ ಕಳೆಯುತ್ತಾರೆ ಎನ್ನುವುದು ಮೆಟಾಗೆ ಗೊತ್ತಿತ್ತು ಎನ್ನುವುದು ದಾವೆದಾರರ ಆರೋಪವಾಗಿದೆ.

ತಮ್ಮ ವೇದಿಕೆ ಸಾರ್ವಜನಿಕರ ಪಾಲಿಗೆ ಹಾನಿಕಾರಕ ಎನ್ನುವುದು ತಿಳಿದಿದ್ದೂ ಅದನ್ನು ಜನರಿಂದ ಅದು ಮುಚ್ಚಿಟ್ಟಿದೆ ಎಂದು ಆರೋಪಿಸಲಾಗಿದೆ.

2020ರಲ್ಲಿ ಮೆಟಾ ತನ್ನ ವೇದಿಕೆಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಕಳೆಯಲು ಬೇಕಾಗುವಂತಹ ತಂತ್ರಗಳನ್ನು ರೂಪಿಸಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ. ಮಕ್ಕಳ ಮೆದುಳಿನಲ್ಲಿ ಡೊಪಮೈನ್‌ ಪ್ರಕ್ರಿಯೆ ಹೆಚ್ಚಿಸುವಂತೆ ಅಲ್ಗಾರಿದಂ ರೂಪಿಸಿದ ಆರೋಪವನ್ನೂ ದೂರುದಾರರು ಮೆಟಾ ಮೇಲೆ ಹೊರಿಸಿದ್ದಾರೆ.

ಡೊಪಮೈನ್‌ ಎನ್ನುವುದು ಮೆದುಳಿನ ನರಗಳ ಪ್ರಕ್ರಿಯೆಯಾಗಿದ್ದು ಇದು ಸಂತೋಷದ ಭಾವನೆಯನ್ನು ಹೆಚ್ಚಿಸುವಲ್ಲಿ ಪಾತ್ರವನ್ನು ಹೊಂದಿದೆ.

ಈಗಾಗಲೇ 33 ರಾಜ್ಯಗಳು ಮೆಟಾ ವಿರುದ್ಧ ಮೊಕದ್ದಮ್ಮೆ ಹೂಡಿದ್ದು ಇನ್ನೂ ಒಂಬತ್ತು ರಾಜ್ಯಗಳು ಮೊಕದ್ದಮೆ ಹೂಡುವುದಾಗಿ ಹೇಳಿವೆ.

Related Articles

ಇತ್ತೀಚಿನ ಸುದ್ದಿಗಳು