ಲಿಂಗಸುಗೂರು ಪುರಸಭೆ ಅಧಿಕಾರಿ ಲಂಚಬಾಕ ಗದ್ದೆಪ್ಪ ವಿರುದ್ಧ ವಕೀಲರಿಂದ ಸಹಾಯಕ ಆಯುಕ್ತರಿಗೆ ದೂರು

ಲಿಂಗಸುಗೂರು : ಲಿಂಗಸುಗೂರು ಪುರಸಭೆ ಕಾರ್ಯಾಲಯದ ಜನನ ಮತ್ತು ಮರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಗದ್ದೆಪ್ಪ ಅವರು ಜನನ-ಮರಣ ಪ್ರಮಾಣ ಪತ್ರಕ್ಕಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಆದಪ್ಪ ಪಾಟೀಲ ತಾಲೂಕು ವಕೀಲರ ಬೆಂಬಲದೊಂದಿಗೆ ಸಹಾಯಕ ಆಯುಕ್ತ ಬಸವಣೆಪ್ಪ ಕಲ್‌ಶೆಟ್ಟಿ ಅವರಿಗೆ ಲಿಖಿತ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ದೂರುದಾರರ ತಂಗಿಯ ಮಗ ಲಿಂಗಸುಗೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಿಸಿದ್ದು, ತಂಗಿ-ಬಾಮೈದ ಅನಕ್ಷರಸ್ಥರಾಗಿದ್ದ ಕಾರಣ ಜನನ ಪ್ರಮಾಣ ಪತ್ರ ಪಡೆದಿರಲಿಲ್ಲ. ಈಗ ಶಾಲೆಯಲ್ಲಿ ಕಡ್ಡಾಯವಾಗಿ ಕೇಳುತ್ತಿರುವುದರಿಂದ ದೂರುದಾರರು ದಿ: 24-08-2026 ರ ಸಂಜೆ 4:50 ಕ್ಕೆ ಪುರಸಭೆಗೆ ತೆರಳಿ ಅರ್ಜಿ ಸಲ್ಲಿಸಿದ್ದಾರೆ.

ಆಗ ಅಧಿಕಾರಿ ಗದ್ದೆಪ್ಪ “ನೀವು ಕೊಟ್ಟ ಜನನ ವರದಿ ನಮ್ಮಲ್ಲಿ ನೋಂದಣಿ ಆಗಿಲ್ಲ. ಹಾಗಾಗಿ ನಿಮಗೆ ಅಲಭ್ಯ ಪ್ರಮಾಣ ಪತ್ರ ಕೊಡುತ್ತೇನೆ‌. ಅದನ್ನು ತೆಗೆದುಕೊಂಡು ಕೋರ್ಟ್ ಆದೇಶ ತಂದರೆ ನೋಂದಣಿ ಮಾಡಿ ಜನನ ಪ್ರಮಾಣ ಪತ್ರ ಕೊಡುತ್ತೇನೆ. ಇಲ್ಲದಿದ್ದರೆ ಇದೇ ಅಲಭ್ಯ ಪ್ರಮಾಣ ಪತ್ರವನ್ನು ತಕ್ಷಣ ಬೇಕಾದರೆ 500 ರೂಪಾಯಿ, ಒಂದು ವಾರ ಬಿಟ್ಟು ಬೇಕಾದರೆ 300 ರೂಪಾಯಿ ಕೊಡಬೇಕು. ನಗದು ಇದ್ದರೆ ನನಗೆ ಕೊಡಿ, ಪೋನ್‌ಪೇ/ಗೂಗಲ್ ಪೇ ಮಾಡುವುದಾದರೆ ನಮ್ಮ ಸಿಬ್ಬಂದಿ/ಏಜೆಂಟರ ನಂಬರ್ ಕೊಡುತ್ತೇನೆ ಅವರಿಗೆ ಹಾಕಿ ಎಂದಿದ್ದಾರೆ ಎಂದು ದೂರುದಾರರು ಗಂಭೀರವಾಗಿ ಬೇರೆ ಬೇರೆಯವರು ಗದ್ದೆಪ್ಪನಿಗೆ ಹಣ ಹಾಕಿದ್ದನ್ನು ಸಾಕ್ಷಿ ಇಟ್ಟುಕೊಂಡು ಆರೋಪ ಮಾಡಿದ್ದಾರೆ.

“ನಾವು ವಕೀಲರು, ನೀವು ಸರ್ಕಾರಿ ಅಧಿಕಾರಿ, ನಿಮಗೆ ಸರ್ಕಾರದಿಂದ ಸಂಬಳ ಬರುತ್ತದೆ, ನೀವು ವಕೀಲರಿಗೆ ಲಂಚ ಕೇಳಿದರೆ ಬಡವರು ಮತ್ತು ಸಾಮಾನ್ಯ ಜನರ ಗತಿ ಏನು?” ಎಂದು ಪ್ರಶ್ನಿಸಿದಾಗ ಅಧಿಕಾರಿ ಏಕವಚನದಲ್ಲಿ ಅವಮಾನ ಮಾಡಿ ಉಢಾಪೆಯಾಗಿ ನಡೆದುಕೊಂಡಿದ್ದಾರೆ. ನೀವು ಯಾರಿದ್ದರೆ ನನಗೇನು? ಕೆಲಸ ಆಗಬೇಕಾದರೆ ಕೊಡಿ, ಇಲ್ಲದಿದ್ದರೆ ಇನ್‌ವಾರ್ಡ್‌ನಲ್ಲಿ ಕೊಟ್ಟು ಹೋಗಿ, ಅರ್ಜಿ ಬಂದಾಗ 30 ದಿನದಲ್ಲಿ ನೋಡುತ್ತೇನೆ” ಎಂದು ಸಿಟ್ಟಿನಿಂದ ರೇಗಾಡಿ, ಗದರಿಸಿ‌ ನಾನು ನೂರಾರು ವಕೀಲರನ್ನು ನೋಡಿದ್ದೇನೆ, ನಾನು ಇದೇ ಊರಿನ ಕರಡಕಲ್ ಗ್ರಾಮದವನು, ನನ್ನನ್ನು ಏನೂ ಕಿತ್ತುಕೊಳ್ಳಲು ಆಗುವುದಿಲ್ಲ, ಮೊದಲು ನನ್ನ ಆಫೀಸ್‌ನಿಂದ ಹೊರನಡಿ” ಎಂದು ಕುಳಿತುಕೊಳ್ಳಲು ಕುರ್ಚಿ ಕೂಡ ನೀಡದೆ ಜವಾಬ್ದಾರಹೀನನಾಗಿ ಅವಮಾನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಕಾನೂನಿನ ಪ್ರಕಾರ ಅರ್ಜಿ ಬಂದಾಗ ಸ್ಥಳ ಪರಿಶೀಲನೆ / ಪಂಚನಾಮೆ ಮಾಡಿ ವರದಿ ಪಡೆದು ಅಲಭ್ಯ ಪ್ರಮಾಣ ಪತ್ರ ನೀಡಬೇಕು, ಆದರೆ ಅಧಿಕಾರಿ ಆ ಎಲ್ಲಾ ಕಾನೂನು ಪ್ರಕ್ರಿಯೆಯನ್ನು ಗಾಳಿಗೆ ತೂರಿದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟ, ಲಂಚಕೋರ ಅಧಿಕಾರಿ ಗದ್ದೆಪ್ಪ ಅವರ ಮೇಲೆ ಇಲಾಖೆ ಶಿಸ್ತು ಕ್ರಮಕೈಗೊಂಡು ಅಮಾನತು/ವರ್ಗಾವಣೆ ಮಾಡುವಂತೆ ಸಹಾಯಕ ಆಯುಕ್ತರಿಗೆ ಮನವಿ ಮಾಡಲಾಗಿದೆ. ಸಹಾಯಕ ಆಯುಕ್ತರು ಸಕ್ಷಮ ಶಿಸ್ತುಪ್ರಾಧಿಕಾರ ಜಿಲ್ಲಾಧಿಕಾರಿಯವರಿಗೆ ರವಾನೆ ಮಾಡಿ ಅವರನ್ನು ಅಮಾನತು ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಲಿಂಗಸುಗೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ ಜಾಧವ್, ಖಜಾಂಚಿ ಶರಣಬಸವ ಹುನಕುಂಟಿ, ಜಂಟಿ ಕಾರ್ಯದರ್ಶಿ ಹನುಮಂತರೆಡ್ಡಿ ಹಾಗೂ ವಿ. ಮರದ, ಶಶಿಧರ ಹೊಸಮನಿ, ಪಂಪಾಪತಿ, ಉಪೇಂದ್ರ ಜಾಧವ್,ನಿತ್ಯಾನಂದ, ಭೀಮೇಶ ಸೇರಿದಂತೆ ಅನೇಕ ವಕೀಲರು ಇದ್ದರು.

Related Articles

ಇತ್ತೀಚಿನ ಸುದ್ದಿಗಳು