ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಕೂಟವನ್ನು ಸಮರ್ಥವಾಗಿ ಎದುರಿಸಲು ರಚನೆಯಾದ ‘ಇಂಡಿಯಾ’ (INDIA) ಒಕ್ಕೂಟವು ಪ್ರಸ್ತುತ ಕುಂಟುತ್ತಾ ಸಾಗುತ್ತಿದೆ. ವಿಶೇಷವಾಗಿ ಒಕ್ಕೂಟದ ವೈಫಲ್ಯಕ್ಕೆ ಇದುವರೆಗೂ ನಾಯಕತ್ವ ವಹಿಸಿದ್ದ ರಾಹುಲ್ ಗಾಂಧಿ ಅವರೇ ಕಾರಣ ಎಂದು ಪ್ರಮುಖ ಮೈತ್ರಿ ಪಕ್ಷಗಳು ಬೆರಳು ಮಾಡಿ ತೋರಿಸುತ್ತಿವೆ. ಒಕ್ಕೂಟ ರಚನೆಯಾದ ನಂತರ ನಡೆದ ಯಾವುದೇ ಚುನಾವಣೆಯಲ್ಲೂ ‘ಇಂಡಿಯಾ’ ಕೂಟಕ್ಕೆ ಗೆಲುವು ಸಿಕ್ಕಿಲ್ಲ ಎಂಬ ವಿಷಯವನ್ನು ಈ ಪಕ್ಷಗಳು ನೆನಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ ನಾಯಕತ್ವ ಬದಲಾವಣೆಯ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆ ಮುನ್ನೆಲೆಗೆ ಬಂದಿದೆ.
ವಿರೋಧ ಪಕ್ಷಗಳ ಈ ಒಕ್ಕೂಟಕ್ಕೆ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಸರಿಯಾದ ನಾಯಕರಾಗಬಲ್ಲರು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಸೋಮವಾರ ಹೇಳಿರುವುದು ಭಾರಿ ಚರ್ಚೆಗೆ ನಾಂದಿ ಹಾಡಿದೆ. ಈ ಪ್ರಸ್ತಾವನೆಗೆ ಒಕ್ಕೂಟದ ಕೆಲವು ಸದಸ್ಯರು ಬೆಂಬಲ ಸೂಚಿಸಿದ್ದರೆ, ಕಾಂಗ್ರೆಸ್‌ನ ಉನ್ನತ ವಲಯಗಳು ಮಾತ್ರ ಅಸಮಾಧಾನ ವ್ಯಕ್ತಪಡಿಸಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಕೆಲವು ಪಕ್ಷಗಳ ನಾಯಕರು ಸೂಚಿಸಿದ ಕೆಲವೇ ವಾರಗಳಲ್ಲಿ ಈಗ ಸ್ಟಾಲಿನ್ ಹೆಸರು ಮುನ್ನೆಲೆಗೆ ಬಂದಿದೆ.
ಸ್ಟಾಲಿನ್ ಅವರು ಒಕ್ಕೂಟದ ನಾಯಕತ್ವ ವಹಿಸುವುದು ಉತ್ತಮ ಎಂದು ಮಣಿಶಂಕರ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ. “ತಮಿಳುನಾಡು ಸಿಎಂ ಮಾತ್ರ 2029ರ ಚುನಾವಣೆಯಲ್ಲಿ ಒಕ್ಕೂಟಕ್ಕೆ ಜಯ ತಂದುಕೊಡಲು ಸಾಧ್ಯ” ಎಂದು ಅವರು ಒತ್ತಿ ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ 2029ರ ಗುರಿಯನ್ನು ತಲುಪಲು ‘ದಳಪತಿ’ ಸ್ಟಾಲಿನ್ ಅವರಿಗಿಂತ ಸೂಕ್ತ ನಾಯಕ ಬೇರೊಬ್ಬರಿಲ್ಲ ಎಂಬುದು ಅವರ ವಾದ. ಅದೇ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರು ಒಕ್ಕೂಟದ ಅಸ್ತಿತ್ವಕ್ಕೆ ಕೇಂದ್ರಬಿಂದು ಎಂದು ಹೇಳಿರುವ ಅವರು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ನಾಯಕತ್ವದ ಹಠ ಹಿಡಿಯದೆ ಎಂ.ಕೆ. ಸ್ಟಾಲಿನ್, ಮಮತಾ ದೀದಿ, ಅಖಿಲೇಶ್ ಯಾದವ್ ಅಥವಾ ತೇಜಸ್ವಿ ಯಾದವ್ ಅವರಂತಹ ಪ್ರಾದೇಶಿಕ ನಾಯಕರಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಬಿಜೆಪಿ ವಿರುದ್ಧದ ಹೋರಾಟಕ್ಕೆ ತಮ್ಮ ಪಕ್ಷದ ನಾಯಕ ಸ್ಟಾಲಿನ್ ಅವರೇ ನೇತೃತ್ವ ವಹಿಸಬೇಕೆಂದು ಡಿಎಂಕೆ ಕೂಡ ಬೇಡಿಕೆ ಇಟ್ಟಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಆಪ್ತ ಮಿತ್ರಪಕ್ಷವಾಗಿರುವ ಡಿಎಂಕೆ, ಈಗ ಒಕ್ಕೂಟದ ನಾಯಕತ್ವ ಬದಲಾಗಲಿ ಎಂದು ಬಯಸುತ್ತಿದೆ. ಹಲವಾರು ರಾಜ್ಯಗಳ ನಾಯಕರು ಕೂಡ ತನ್ನ ತಂದೆ ಎಂ.ಕೆ. ಸ್ಟಾಲಿನ್ ಅವರು ಒಕ್ಕೂಟವನ್ನು ಮುನ್ನಡೆಸಲಿ ಎಂದು ಆಶಿಸುತ್ತಿದ್ದಾರೆ ಎಂದು ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ. ರಾಜಕೀಯ ಮತ್ತು ಆಡಳಿತದಲ್ಲಿ ಸ್ಟಾಲಿನ್ ಅವರು ಒಂದು ಮಾದರಿಯಾಗಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಇಂಡಿಯಾ ಒಕ್ಕೂಟಕ್ಕೆ ನಾಯಕತ್ವ ಬದಲಾವಣೆ ಅನಿವಾರ್ಯ ಎಂದು ಹಲವು ಪಕ್ಷಗಳು ಖಡಾಖಂಡಿತವಾಗಿ ಹೇಳುತ್ತಿವೆ. ನಾಯಕತ್ವದ ಬದಲಾವಣೆಗೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳು ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ಶಿವಸೇನೆ (ಯುಬಿಟಿ) ಪ್ರತಿಪಾದಿಸಿದೆ. “ಒಕ್ಕೂಟವನ್ನು ಆಳುವುದು ಸ್ಟಾಲಿನ್ ಅಥವಾ ಮಮತಾ ಬ್ಯಾನರ್ಜಿ ಎಂಬುದು ನಂತರದ ಮಾತು, ಮೊದಲು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಲಿ” ಎಂದು ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ. ಇತ್ತ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಮಾತ್ರ ನಾಯಕತ್ವ ಬದಲಾವಣೆ ಬಗ್ಗೆ ಇದುವರೆಗೆ ಯಾವುದೇ ಸಭೆ ನಡೆದಿಲ್ಲ, ಅಯ್ಯರ್ ಅವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ ಅಷ್ಟೆ ಎಂದು ತಿಳಿಸಿದ್ದಾರೆ.
