ಭೋಪಾಲ: ತನ್ನ ಕಾಲೇಜಿನ ಅಧಿಕಾರಿಗಳು RSS ಸೇರುವಂತೆ ಬಲವಂತಗೊಳಿಸುತ್ತಿದ್ದಾರೆಂದು ಆರೋಪಿಸಿ ಸರಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರೋರ್ವರು ಕೋರ್ಟಿನ ಮೆಟ್ಟಿಲು ಹತ್ತಿದ್ದಾರೆ.
ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಮಧ್ಯಪ್ರದೇಶ ಸರಕಾರವು ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿತು. ಬಳಿಕ ಈ ಸಂಬಂಧ ಉಪನ್ಯಾಸಕರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಿಲೇವಾರಿ ಮಾಡಿತು.
ಸಿಧಿ ಜಿಲ್ಲೆಯ ಮಜೌಲಿಯ ಸರಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿರುವ ಅರ್ಜಿದಾರರು, ಆರೆಸ್ಸೆಸ್‌ನ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಕಾಲೇಜಿನ ಅಧಿಕಾರಿಗಳು ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದರು.
ಸರಕಾರದ ಭರವಸೆಯ ಬಳಿಕ ಬುಧವಾರ ನ್ಯಾ.ವಿವೇಕ್ ಅಗರ್ವಾಲ್ ಅವರು ಅರ್ಜಿದಾರರ ಹೇಳಿಕೆಯ ಕುರಿತು ಪ್ರತಿಕ್ರಿಯಿಸದೆ ಅರ್ಜಿಯನ್ನು ವಿಲೇವಾರಿ ಮಾಡಿದರು.
ಅರ್ಜಿದಾರರ ದೂರನ್ನು ಪರಿಶೀಲಿಸುವಂತೆ ಸಿಧಿ ಜಿಲ್ಲೆಯ ಎಸ್‌ಪಿಗೆ ನಿರ್ದೇಶನ ನೀಡುತ್ತೇನೆ. ನಿಜಕ್ಕೂ ಬೆದರಿಕೆಯಿದ್ದರೆ ಆದೇಶದ ಪ್ರತಿಯನ್ನು ಸ್ವೀಕರಿಸಿದ ಏಳು ದಿನಗಳಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಅವರಿಗೆ ಸೂಚಿಸುತ್ತೇನೆ ಎಂದು ರಾಜ್ಯ ಸರಕಾರದ ಪರ ವಕೀಲ ವಿ.ಎಸ್.ಚೌಧರಿ ಅವರು ತಿಳಿಸಿದ್ದಾರೆ ಎಂದು ಪೀಠ ಹೇಳಿದೆ.
RSS ಸಿದ್ಧಾಂತಕ್ಕೂ ತನ್ನ ಕಕ್ಷಿದಾರರ ಸಿದ್ಧಾಂತಕ್ಕೂ ಹೊಂದಿಕೆಯಾಗುವುದಿಲ್ಲ ಮತ್ತು ಅದನ್ನು ಪಾಲಿಸಲು ಅವರು ನಿರಾಕರಿಸಿದಾಗ ಅವರನ್ನು ಥಳಿಸಲಾಗಿದೆ ಮತ್ತು ಬೆದರಿಕೆಯೊಡ್ಡಲಾಗಿದೆ ವಕೀಲರು ದೂರಿದ್ದರು.
ತನ್ನ ಕಕ್ಷಿದಾರರು ಈಗಾಗಲೇ ಎಸ್‌ಪಿ ಮತ್ತು ಸಂಬಂಧಿಸಿದ ಇನ್ಸ್‌ಪೆಕ್ಟರ್ ಗೆ ದೂರುಗಳನ್ನು ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.