ಬಿಗ್‌ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ್ದ ಲಾಯರ್ ಜಗದೀಶ್ ಮೇಲೆ ಸಹಕಾರ ನಗರದಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಮತ್ತೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಜೀಪಿನಲ್ಲಿ ಕುಳಿತುಕೊಂಡೇ ಜಗದೀಶ್ ಅವರು ಸಾಮಾಜಿಕ ಜಾಲತಾಣದ ಮೂಲಕ ಲೈವ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಮೂಗು, ತುಟಿಗಳಿಂದ ರಕ್ತ ಹೊರಬರುವಂತೆ ಹಲ್ಲೆ ನಡೆದಿದ್ದು, ಜಗದೀಶ್ ಪೊಲೀಸ್ ಜೀಪಿನಲ್ಲಿ ಹೋಗುತ್ತಿದ್ದಾಗಲೇ ಫೇಸ್‌ಬುಕ್ ಮೂಲಕ ಲೈವ್ ಬಂದು ತಮ್ಮ ಮೇಲೆ ನಡೆದಿರುವ ಹಲ್ಲೆ ಕುರಿತು ಹೇಳಿದ್ದಾರೆ. ಅವರ ಮುಖದಲ್ಲಿ ರಕ್ತದ ಕಲೆಗಳು ಆಗಿರುವುದು ವಿಡಿಯೋದಲ್ಲಿದೆ.
ಮೂಗಿನಿಂದ ರಕ್ತ ಬರುವಂತೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. 500ಕ್ಕೂ ಹೆಚ್ಚು ಜನ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನನ್ನ ಜೀಪ್ ಧ್ವಂಸಗೊಳಿಸಿದ್ದಾರೆ ಎಂದು ಜಗದೀಶ್ ಆರೋಪಿಸಿದ್ದಾರೆ.
ಅಣ್ಣಮ್ಮ ದೇವಿಯ ಮೂರ್ತಿಯನ್ನು ಕೂರಿಸುವ ವಿಚಾರದಲ್ಲಿ ಸ್ಥಳೀಯರು ಹಾಗೂ ಲಾಯರ್ ಜಗದೀಶ್ ನಡುವೆ ಗುರುವಾರ ಸಹ ಜಗಳ ನಡೆದಿತ್ತು.
ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು. ಅದೇ ಗುಂಪು ಮತ್ತೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.