ಭಾರತೀಯ ಕ್ರೀಡಾಲೋಕಕ್ಕೆ ಭಾರಿ ಆಘಾತ: ಒಲಿಂಪಿಕ್ ಕೋಚ್, ದಿಗ್ಗಜ ಶೂಟರ್ ಜಸ್ಪಾಲ್ ರಾಣಾ ವಿಮಾನದಲ್ಲೇ ತೀವ್ರ ಅಸ್ವಸ್ಥಗೊಂಡು ನಿಧನ!

ದೆಹಲಿ: ಭಾರತೀಯ ಕ್ರೀಡಾಲೋಕಕ್ಕೆ ಭಾರಿ ಆಘಾತ ಎದುರಾಗಿದೆ. ದೇಶದ ಸಾರ್ವಕಾಲಿಕ ಶ್ರೇಷ್ಠ ಶೂಟರ್ ಹಾಗೂ ಖ್ಯಾತ ತರಬೇತುದಾರ ಜಸ್ಪಾಲ್ ರಾಣಾ (Jaspal Rana) ಅವರು ಗುರುವಾರ ರಾತ್ರಿ ಕಣ್ಣುಮುಚ್ಚಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರಿಗೆ ತರಬೇತಿ ನೀಡಿದ್ದ ರಾಣಾ ಅವರ ದಿಢೀರ್ ನಿಧನವು ಇಡೀ ಶೂಟಿಂಗ್ ವಲಯವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

ಇತ್ತೀಚೆಗೆ ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಶೂಟಿಂಗ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಸ್ಪಾಲ್ ರಾಣಾ ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ಭಾರತೀಯ ಶೂಟರ್‌ಗಳು ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆದ್ದು ಐತಿಹಾಸಿಕ ಪ್ರದರ್ಶನ ನೀಡಿದ್ದರು. ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ನೀಡಿದ ಮಾಹಿತಿಯ ಪ್ರಕಾರ, ಜರ್ಮನಿಯಿಂದ ಭಾರತಕ್ಕೆ ವಾಪಸಾಗುವಾಗ ವಿಮಾನದಲ್ಲೇ ಜಸ್ಪಾಲ್ ರಾಣಾ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು.

ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಿ, ತುರ್ತು ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಸ್ಟೆಂಟ್ (Stent) ಅಳವಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತರು ಮತ್ತು ಸಂಬಂಧಿಕರು ತಿಳಿಸಿದ್ದಾರೆ.

ಅಪ್ರತಿಮ ಕ್ರೀಡಾ ಜೀವನ ಮತ್ತು ಯಶಸ್ವಿ ಕೋಚ್: ಜಸ್ಪಾಲ್ ರಾಣಾ ಅವರು ಭಾರತದ ಅತ್ಯಂತ ಯಶಸ್ವಿ ಪಿಸ್ತೂಲ್ ಶೂಟರ್‌ಗಳಲ್ಲಿ ಒಬ್ಬರಾಗಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ಅವರು, ಹತ್ತಾರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದ ಧ್ವಜವನ್ನು ಎತ್ತಿಹಿಡಿದಿದ್ದರು. ಶೂಟರ್ ಆಗಿ ನಿವೃತ್ತರಾದ ನಂತರ ಅವರು ಯುವ ಆಟಗಾರರನ್ನು ಪ್ರೋತ್ಸಾಹಿಸಲು ಕೋಚಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದರು.

2012 ರಲ್ಲಿ ಭಾರತದ ರಾಷ್ಟ್ರೀಯ ಜೂನಿಯರ್ ಪಿಸ್ತೂಲ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ರಾಣಾ, ದೇಶದ ಪ್ರಮುಖ ಶೂಟರ್‌ಗಳಾದ ಸೌರಭ್ ಚೌಧರಿ, ಅನೀಶ್ ಭನ್ವಾಲಾ ಮತ್ತು ಚಿಂಕಿ ಯಾದವ್ ಅವರಿಗೆ ಆರಂಭಿಕ ದಿನಗಳಲ್ಲಿ ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸಿದ್ದರು.

ಜೂನಿಯರ್ ಆಟಗಾರರು ಮಾತ್ರವಲ್ಲದೆ, ಭಾರತದ ಹೆಮ್ಮೆಯ ಶೂಟರ್ ಮನು ಭಾಕರ್ (Manu Bhaker) ಅವರ ಕ್ರೀಡಾ ಬದುಕನ್ನು ರೂಪಿಸಿದ ಕೀರ್ತಿ ಜಸ್ಪಾಲ್ ರಾಣಾ ಅವರಿಗೆ ಸಲ್ಲುತ್ತದೆ. 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಎರಡು ಐತಿಹಾಸಿಕ ಕಂಚಿನ ಪದಕಗಳನ್ನು ಗೆಲ್ಲುವಲ್ಲಿ ರಾಣಾ ಅವರ ತರಬೇತಿ ಮತ್ತು ಮಾರ್ಗದರ್ಶನವೇ ಮುಖ್ಯ ಕಾರಣವಾಗಿತ್ತು.

ಅತ್ಯಂತ ಕಠಿಣ ಪರಿಸ್ಥಿತಿ ಮತ್ತು ಮಾನಸಿಕ ಒತ್ತಡದ ನಡುವೆಯೂ ಹೇಗೆ ಸ್ಥಿರ ಪ್ರದರ್ಶನ ನೀಡಬೇಕು ಎಂಬ ಪ್ರಮುಖ ಕೌಶಲ್ಯಗಳನ್ನು ಅವರು ಮನು ಅವರಿಗೆ ಧಾರೆ ಎರೆದಿದ್ದರು. ಕ್ರೀಡಾ ರಂಗದಲ್ಲಿ ಅವರ ಅದ್ಭುತ ಸೇವೆಯನ್ನು ಗುರುತಿಸಿ ಇತ್ತೀಚೆಗೆ 2025 ರ ಫೆಬ್ರವರಿಯಲ್ಲಿ ಎನ್‌ಆರ್‌ಎಐ (NRAI) ಅವರನ್ನು 25 ಮೀಟರ್ ಪಿಸ್ತೂಲ್ ವಿಭಾಗದ ‘ಹೈ ಪರ್ಫಾರ್ಮೆನ್ಸ್ ಕೋಚ್’ ಆಗಿ ನೇಮಕ ಮಾಡಿತ್ತು.

ದ್ರೋಣಾಚಾರ್‍ಯ ಪ್ರಶಸ್ತಿ ಗೌರವ: ಭಾರತೀಯ ಶೂಟಿಂಗ್ ರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಕೇಂದ್ರ ಸರ್ಕಾರವು 2020 ರಲ್ಲಿ ಜಸ್ಪಾಲ್ ರಾಣಾ ಅವರಿಗೆ ದೇಶದ ಅತ್ಯುನ್ನತ ಕ್ರೀಡಾ ತರಬೇತುದಾರ ಪ್ರಶಸ್ತಿಯಾದ ‘ದ್ರೋಣಾಚಾರ್‍ಯ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಮೊದಲು ಚಾಂಪಿಯನ್ ಶೂಟರ್ ಆಗಿ, ಆ ನಂತರ ಶ್ರೇಷ್ಠ ಗುರುವಾಗಿ ಭಾರತೀಯ ಶೂಟಿಂಗ್ ಕ್ರೀಡೆಯ ಚಿತ್ರಣವನ್ನೇ ಬದಲಾಯಿಸಿದ್ದ ಜಸ್ಪಾಲ್ ರಾಣಾ ಅವರ ನಿಧನವು ಕ್ರೀಡಾಲೋಕಕ್ಕೆ ಎಂದಿಗೂ ತುಂಬಲಾರದ ನಷ್ಟವಾಗಿದೆ.

Related Articles

ಇತ್ತೀಚಿನ ಸುದ್ದಿಗಳು