ಚಿಕ್ಕಮಗಳೂರು : ತೋಟದ ಪಕ್ಕದಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ವ್ಯಾಪ್ತಿಯ ಗುಮ್ಮನ್ ಖಾನ್ ಬಳಿ ನಡೆದಿದೆ.ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಕಳಸ ಅರಣ್ಯ ಸಿಬ್ಬಂದಿ ಪರಿಸ್ಥಿತಿ ಪರಿಶೀಲಿಸಿ, ಚಿರತೆ ಮರಿಗಳನ್ನು ತಾಯಿ ಚಿರತೆ ಜೊತೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
ಮರಿಗಳಿರುವ ತೋಟದ ಸುತ್ತಮುತ್ತ ಸಾರ್ವಜನಿಕರು ಓಡಾಡದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ತಾಯಿ ಚಿರತೆ ಮರಿಗಳನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇರುವುದರಿಂದ ಸ್ಥಳೀಯರು ಹಾಗೂ ತೋಟದ ಕಾರ್ಮಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಚಿರತೆ ಮರಿಗಳಿಗೆ ಯಾವುದೇ ತೊಂದರೆ ಉಂಟುಮಾಡದೆ, ಅವುಗಳನ್ನು ತಾಯಿ ಚಿರತೆ ಜೊತೆ ಸೇರಿಸಲು ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಹಕರಿಸುವಂತೆ ಕಳಸ ಅರಣ್ಯ ಸಿಬ್ಬಂದಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
