ಬೆಂಗಳೂರು : ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಭ್ರಷ್ಟಾಚಾರ (Curruption) ನಿಯಂತ್ರಣ ಸಂಸ್ಥೆಯಾದ ಕರ್ನಾಟಕ ಲೋಕಾಯುಕ್ತವು (Lokayukta) ಬೃಹತ್ ಮಟ್ಟದ ಭೂ ಅಕ್ರಮ ಹಗರಣವೊಂದನ್ನು ಬಯಲಿಗೆಳೆದಿದೆ. ಸರ್ಕಾರಿ ತಂತ್ರಾಂಶ ಹಾಗೂ ಡಿಜಿಟಲ್ ಸಹಿಗಳನ್ನು (DSC) ದುರ್ಬಳಕೆ ಮಾಡಿಕೊಂಡು, ಬರೋಬ್ಬರಿ 500 ಕೋಟಿ ರೂಪಾಯಿ ಮೌಲ್ಯದ 62.20 ಎಕರೆ ಖಾಸಗಿ ಜಮೀನನ್ನು ಅಕ್ರಮವಾಗಿ ಖಾತೆ ಬದಲಾವಣೆ (ಮ್ಯುಟೇಷನ್) ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಲೋಕಾಯುಕ್ತರ ಸ್ವಯಂಪ್ರೇರಿತ ದಾಳಿ ಹಾಗೂ ತನಿಖೆ
ಮಾನ್ಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಈ ಗಂಭೀರ ಅಕ್ರಮದ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಶೋಧನಾ ವಾರಂಟ್ ಜಾರಿಗೊಳಿಸಿದ್ದರು. ಈ ಆದೇಶದನ್ವಯ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಉಮಾಮಹೇಶ್ ಮತ್ತು ಹಾಲಪ್ಪ ವೈ. ಬಾಲದಂಡಿ ಅವರ ನೇತೃತ್ವದ ತಂಡವು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ (AC) ಕಚೇರಿ ಹಾಗೂ ದೇವನಹಳ್ಳಿ ತಹಶೀಲ್ದಾರ್ ಕಚೇರಿಯ ಮೇಲೆ ದಿಢೀರ್ ದಾಳಿ ನಡೆಸಿತ್ತು. ಪರಿಶೀಲನೆಯ ವೇಳೆ ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಮತ್ತು ಪ್ರಸನ್ನಹಳ್ಳಿ ಗ್ರಾಮಗಳ ವ್ಯಾಪ್ತಿಯ ಒಟ್ಟು 84 ಸರ್ವೇ ನಂಬರ್‌ಗಳಲ್ಲಿ ಈ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. ಸರ್ಕಾರಿ ಮೌಲ್ಯಮಾಪನದಂತೆ 103.68 ಕೋಟಿ ರೂಪಾಯಿ ಬೆಲೆಬಾಳುವ ಈ ಜಮೀನಿನ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಯಲಾದ ಅಕ್ರಮ ವಿಧಾನಗಳು
ಈ ಬೃಹತ್ ಹಗರಣದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದ ಮಾಜಿ ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಪ್ರಥಮ ದರ್ಜೆ ಸಹಾಯಕ (FDA) ಮನೋಜ್ ಎಸ್. ಮುಖ್ಯ ಆರೋಪಿಗಳಾಗಿದ್ದಾರೆ. ತನಿಖೆಯ ವೇಳೆ ಇವರ ಭ್ರಷ್ಟಾಚಾರದ ಜಾಲ ಬಹಿರಂಗಗೊಂಡಿದ್ದು, ಇ-ಆಫೀಸ್‌ನಲ್ಲಿ ದಾಖಲಾಗದ ನಕಲಿ ಆದೇಶಗಳನ್ನು ಸೃಷ್ಟಿಸಿ ತಹಶೀಲ್ದಾರ್ ಅವರಿಗೆ ‘ಭೂಮಿ’ ತಂತ್ರಾಂಶದಲ್ಲಿ ಸೇರ್ಪಡಿಸಲು ಕಳುಹಿಸಲಾಗಿತ್ತು. ಅಷ್ಟೇ ಅಲ್ಲದೆ, ಹೈಕೋರ್ಟ್ ಹಾಗೂ ಕೆಎಟಿ (KAT) ನೀಡಿರುವ ಆದೇಶಗಳೆಂದು ನಕಲಿ ಪ್ರಕರಣ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಆನ್‌ಲೈನ್‌ನಲ್ಲಿ ಇವುಗಳನ್ನು ಪರಿಶೀಲಿಸಿದಾಗ ಅವುಗಳಿಗೂ ಈ ಜಮೀನಿಗೂ ಯಾವುದೇ ಸಂಬಂಧವಿಲ್ಲದಿರುವುದು ದೃಢಪಟ್ಟಿದೆ.
ವಿಷಯ ನಿರ್ವಾಹಕ ಮನೋಜ್ ಎಸ್. ಅವರ ಲಾಗಿನ್ ಬಳಸಿ ನಕಲಿ ದಾಖಲೆಗಳನ್ನು RTC ನಿರ್ವಹಣಾ ವ್ಯವಸ್ಥೆಗೆ ಅಪ್‌ಲೋಡ್ ಮಾಡಲಾಗಿತ್ತು. ತದನಂತರ ಎಸಿ ದುರ್ಗಾಶ್ರೀ ಅವರು ತಮ್ಮ ಬಯೋಮೆಟ್ರಿಕ್ ಹೆಬ್ಬೆರಳ ಗುರುತು ಹಾಗೂ ಡಿಜಿಟಲ್ ಸಿಗ್ನೇಚರ್ (DSC) ಬಳಸಿ ಅಧಿಕೃತ ಅನುಮೋದನೆ ನೀಡಿದ್ದಾರೆ. ಕಚೇರಿಗೆ ಯಾವುದೇ ಸಾರ್ವಜನಿಕ ಅರ್ಜಿ ಬರದಿದ್ದರೂ ನೇರವಾಗಿ ಖಾತೆ ಬದಲಾಯಿಸಲಾಗಿದ್ದು, ಎಸಿ ದುರ್ಗಾಶ್ರೀ ಅವರು ಕಚೇರಿ ಕಂಪ್ಯೂಟರ್ ಬದಲಿಗೆ ಖಾಸಗಿ ಲ್ಯಾಪ್‌ಟಾಪ್ ಬಳಸಿ ಅಕ್ರಮ ಎಸಗಿರುವುದು ಕಂಡುಬಂದಿದೆ.
ಜಮೀನಿನ ವಿಸ್ತೀರ್ಣ ಮತ್ತು ಲೋಕಾಯುಕ್ತ ಸಮನ್ಸ್
ಒಟ್ಟು 84 ಸರ್ವೇ ನಂಬರ್‌ಗಳ 62 ಎಕರೆ 22 ಗುಂಟೆ ಜಮೀನಿನ ಪೈಕಿ ಈಗಾಗಲೇ 72 ಸರ್ವೇ ನಂಬರ್‌ಗಳ 57 ಎಕರೆಗೂ ಹೆಚ್ಚು ಜಮೀನು ಅಕ್ರಮವಾಗಿ ಖಾತೆ ಬದಲಾವಣೆಯಾಗಿದೆ. ಉಳಿದ ಭಾಗ ತಕರಾರಿನಿಂದ ಹಾಗೂ ನೇರ ಆದೇಶವಿಲ್ಲದೆ ಪ್ರಕ್ರಿಯೆಯಲ್ಲಿದೆ. ಸಾರ್ವಜನಿಕ ಆಸ್ತಿಗೆ ಧಕ್ಕೆ ತಂದು, ತಂತ್ರಾಂಶ ದುರ್ಬಳಕೆ ಮಾಡಿರುವ ಈ ಇಬ್ಬರೂ ಅಧಿಕಾರಿಗಳಿಗೆ ಲೋಕಾಯುಕ್ತರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಬರುವ ಸೆಪ್ಟೆಂಬರ್ 22ರಂದು ಲೋಕಾಯುಕ್ತ ಪೀಠದ ಮುಂದೆ ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
