ಬೆಂಗಳೂರು: ಸಚಿವ ಸುನೀಲ್ ಕುಮಾರ್‌ರವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯೇತರ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರುರವರು, ʼಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಾಡಿನ ಅಸ್ಮಿತೆ ಕಾಪಾಡುವ ಸಂಸ್ಥೆ. ಇದು ಬಹುಕಾಲದಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ನಡೆಸುತ್ತಾ ಮತ್ತು ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುತ್ತಾ ಬಂದಿದೆ. ಸಾರ್ವಜನಿಕ ವಲಯದಲ್ಲಿ ಕನ್ನಡ ಭಾಷೆಗೆ ಅಪಮಾನ ಅಥವಾ ಅನ್ಯಾಯವಾದಾಗ ಪ್ರಾಧಿಕಾರ ಪ್ರಶ್ನೆ ಮಾಡಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಸಚಿವರನ್ನೂ ಬಿಟ್ಟಿಲ್ಲ. ಇದು ಮುಂದುವರಿಯಬೇಕಾದರೆ ರಾಜಕೀಯೇತರ ವ್ಯಕ್ತಿಯೇ ಪ್ರಾಧಿಕಾರದ ಅಧ್ಯಕ್ಷರಾಗಿರಬೇಕುʼ ಎಂದು ಹೇಳಿದ್ದಾರೆ.
ʼಕನ್ನಡ ನೆಲ, ಜಲ, ನುಡಿ ವಿಚಾರ ಬಂದಾಗಲೆಲ್ಲ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯ. ರಾಜಕೀಯ ಸಿದ್ಧಾಂತಗಳನ್ನು ಬದಗಿಟ್ಟು ಕೇವಲ ಭಾಷಾಭಿಮಾನದಿಂದ ಕೆಲಸ ಮಾಡುವ ವ್ಯಕ್ತಿ ಅದರ ಅಧ್ಯಕ್ಷರಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೂ ಹಿಂದಿ ಹೇರಿಕೆ, ಕನ್ನಡಿಗರಿಗೆ ಉದ್ಯೋಗದಲ್ಲಾಗುತ್ತಿರುವ ಮೋಸ, ಗಡಿನಾಡ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಮುಂತಾದವುಗಳನ್ನು ವಿರೋಧಿಸದ ಪ್ರಭಾವಿ ಸಚಿವರು ಪ್ರಾಧಿಕಾರದ ಅಧ್ಯಕ್ಷರಾಗಿರುವುದು ಕಳವಳಕಾರಿʼ ಎಂದರು.
ʼರಾಜಕಾರಣವನ್ನೇ ಪೂರ್ಣಾವಧಿ ಕೆಲಸ ಮಾಡಿಕೊಂಡಿರುವ ಸುನೀಲ್ ಕುಮಾರ್‌ರವರು ಎರಡು ದೊಡ್ಡ ಇಲಾಖೆಗಳ ಸಚಿವರು. ಅದರ ಜೊತೆಗೆ ಪ್ರಾಧಿಕಾರದ ಕೆಲಸ ಮಾಡಲು ಅವರಿಗೆ ಸಾಧ್ಯವಾಗುವುದೂ ಇಲ್ಲ. ರಾಜಕಾರಣದ ಹಂಗಿಲ್ಲದೇ ಕಾರ್ಯನಿರ್ವಹಿಸುವ ವ್ಯಕ್ತಿಯನ್ನು ಶೀಘ್ರವೇ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ನೇಮಿಸಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆʼ ಎಂದು ತಿಳಿಸಿದ್ದಾರೆ.
ʼನಾಲ್ಕು ಎಂಜಿನ್‌ಗಳ ಸರ್ಕಾರವಿದ್ದರೂ ನಿರ್ಲಕ್ಷ್ಯʼ
ಬೆಳಗಾವಿ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚಂದ್ರುರವರು, ʼಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಬಂದಾಗಲೆಲ್ಲ ಗಡಿ ಮತ್ತು ನೀರಿನ ಸಮಸ್ಯೆಗಳನ್ನು ರಾಜಕೀಯ ಕುತಂತ್ರಕ್ಕೆ ಬಳಸಿಕೊಳ್ಳಲಾಗಿದೆ. ಕರ್ನಾಟಕದ್ದು ಕೇವಲ ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿದ್ದರೆ, ಇಕ್ಕೆಲಗಳ ರಾಜ್ಯಗಳದ್ದು ಪ್ರಚೋದನಾತ್ಮಕ ಹಾಗೂ ಆಕ್ರಮಣಕಾರಿ ಪ್ರತಿಕ್ರಿಯೆಯಾಗಿದೆ. ಈಗಿನ ಸಿಎಂ ಬಸವರಾಜ ಬೊಮ್ಮಾಯಿಯವರಂತೂ ಸಮಸ್ಯೆಯನ್ನು ಜೀವಂತವಾಗಿಡಲು ಹಪಹಪಿಸುತ್ತಿದ್ದು, ಬಿಜೆಪಿಯ ಹಾಗೂ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ವಿವಾದವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆʼ ಎಂದು ಆರೋಪಿಸಿದ್ದಾರೆ.
ʼಮಹಾಜನ್ ವರದಿ ಜಾರಿಗೆ ಸಂಬಂಧಿಸಿ ತಮ್ಮ ಇದುವರೆಗಿನ ಹೇಳಿಕೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಬದ್ಧರಾಗಿರಬೇಕು. ಗಡಿ ವಿಚಾರ ಬಗೆಹರಿಸಲು ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿದ್ದ ಸಲಹಾ ಸಮಿತಿಗೆ ನ್ಯಾ. ಮಂಜುನಾಥ್‌ರವರ ಮರಣಾ ನಂತರ ಎಂಟು ತಿಂಗಳ ಕಾಲ ಆ ಸ್ಥಾನವನ್ನು ಖಾಲಿ ಇಡಲಾಗಿತ್ತು. ಗಡಿ ವಿಚಾರದಲ್ಲಿ ಬಿಜೆಪಿ ಸರ್ಕಾರಕ್ಕೆ ಎಷ್ಟು ತಾತ್ಸಾರವಿದೆ ಎನ್ನುವುದಕ್ಕೆ ಇದು ಸಾಕ್ಷಿ. ರಾಜಕೀಯ ಒತ್ತಡಕ್ಕೆ ಮಣಿದು ಇತ್ತೀಚೆಗೆ ನ್ಯಾ. ಶಿವರಾಜ್ ಪಾಟೀಲ್‌ರವರನ್ನು ನೇಮಕ ಮಾಡಿದೆʼ ಎಂದು ಹೇಳಿದ್ದಾರೆ.
ʼ2018ರಲ್ಲಿ ಉತ್ತರ ಕರ್ನಾಟಕಕ್ಕೆ ಬಂದಿದ್ದ ಬಿಜೆಪಿಯ ಅಮಿತ್ ಶಾರವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದ ಬಗೆಹರಿಸುವುದಾಗಿ ಹೇಳಿದ್ದರು. ಈ ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿಯ ನಾಲ್ಕು ಎಂಜಿನ್ ಸರ್ಕಾರವಿದ್ದರೂ ವಿವಾದ ಬಗೆಹರಿಸುವ ಬದಲು ರಾಜಕೀಯ ಲಾಭಕ್ಕಾಗಿ ಸಮಸ್ಯೆಯನ್ನು ದೊಡ್ಡದು ಮಾಡಲಾಗುತ್ತಿದೆ. ಬೊಮ್ಮಾಯಿಯವರು ಧಮ್ಮು, ತಾಕತ್ತು ಇದ್ದರೆ ನಾಲ್ಕು ಎಂಜಿನ್‌ಗಳನ್ನು ಬಳಸಿಕೊಂಡು ಗಡಿ, ಜಲ ಸಮಸ್ಯೆಗಳನ್ನು ಬಗೆಹರಿಸಲಿʼ ಎಂದು ಮುಖ್ಯಮಮತ್ರಿ ಚಂದ್ರು ಸವಾಲು ಹಾಕಿದ್ದಾರೆ.