Wednesday, May 1, 2024

ಸತ್ಯ | ನ್ಯಾಯ |ಧರ್ಮ

ಮಕ್ಕಳ ಕಮರಿದ ಕನಸುಗಳು ಮತ್ತೆ ಚಿಗುರಲಿ…

ಮಕ್ಕಳು ಭವಿಷ್ಯದಲ್ಲಿ  ಸಫಲರಾಗಲು ಮೇಲಿಂದ ಮೇಲೆ  ಅವಕಾಶಗಳನ್ನು ಕಲ್ಪಿಸಿ ಗೆಲುವು  ಸಾಧಿಸುವವರೆಗೆ ಶಾಲೆಯಿಂದ ಪ್ರೋತ್ಸಾಹ ದೊರೆಯಬೇಕು. ಮಕ್ಕಳ ಕಮರಿ ಹೋದ ಆ ಕನಸುಗಳಿಗೆ ಅವಕಾಶಗಳನ್ನು ನೀಡುತ್ತಾ ಅವುಗಳನ್ನು ಮತ್ತೆ ಚಿಗುರಿಸಬೇಕು – ಸಾರಾಅಲಿ ಪರ್ಲಡ್ಕ, ಯುವ ಬರಹಗಾರ್ತಿ

ಬದುಕಲ್ಲಿ ಸೋಲು, ಗೆಲುವು ಸಾಮಾನ್ಯ.  ಆದರೆ ಅದನ್ನು ಸಮಚಿತ್ತದಿಂದ ಸ್ವೀಕರಿಸಬೇಕು  ಅಂತ  ಹೇಳುತ್ತಾರೆ. ‌ಆದರೆ  ಕೆಲವು ಸಂದರ್ಭಗಳಲ್ಲಿ ಸೋತವರು  ಸೋತ ಸ್ಥಿತಿಯಲ್ಲೇ ಉಳಿಯುವುದುಂಟು. ಅಂತಹವರಿಗೆ ಸುತ್ತಲಿನವರು ಅವಕಾಶಗಳನ್ನು  ಕಲ್ಪಿಸಿ ಅವರನ್ನು ಮೇಲೆತ್ತಬೇಕು.

ಹತ್ತನೆಯ ತರಗತಿಯಲ್ಲಿ  ನಡೆಯುವ “CBSE ಬೋರ್ಡ್  ಪರೀಕ್ಷೆಗೆ ” ವರ್ಷದ ಆರಂಭದಿಂದ  ಕೊನೆಯ ಪ್ರಮುಖ ಪರೀಕ್ಷೆ ಮುಗಿಯುವವರೆಗೆ  ಶಿಕ್ಷಕರು ಹಾಗೂ ಪೋಷಕರು ಮಕ್ಕಳಲ್ಲಿ ಕಲಿಕೆಗೆ ಸಂಬಂಧಿಸಿದಂತೆ ಮುಖ್ಯ ಪಾತ್ರ ವಹಿಸಿ ಬಹಳವೇ ಜಾಗೃತಿಯನ್ನು ಮೂಡಿಸುತ್ತಾರೆ.   ಪರೀಕ್ಷೆಯ ತಯಾರಿಯ  ನಡುವಲ್ಲಿಯೂ ಮಕ್ಕಳು ತಮ್ಮ ಮುಂದಿನ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ, ಮುಂದೆ ತಾವು ಓದಬೇಕಾದ ಕಾಲೇಜುಗಳನ್ನು ಆರಿಸಿಕೊಳ್ಳುವಷ್ಟರ  ಮಟ್ಟಿಗೆ ತಮ್ಮದೇ ಆದ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡಿರುತ್ತಾರೆ.  ವಿದ್ಯಾರ್ಥಿ ಜೀವನದಲ್ಲಿ ಹತ್ತನೆಯ ತರಗತಿಯ ಪರೀಕ್ಷೆ ಎಂದರೆ ಅತ್ಯಂತ ನಿರ್ಣಾಯಕ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಕಾರಣ   ಶಾಲಾ ಶಿಕ್ಷಕ ವೃಂದವು ಮಕ್ಕಳ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯನ್ನಿಟ್ಟು ಸಾಕಷ್ಟು ಶ್ರಮಿಸುತ್ತಿರುತ್ತಾರೆ. ಹೆತ್ತವರಂತೂ ಅವರ ಓದಿನಲ್ಲಿ  ವಿಶೇಷವಾದ ಕಾಳಜಿ ವಹಿಸುವುದನ್ನು ಕಂಡು ಮಕ್ಕಳು ಕೂಡ ಆದಷ್ಟು ಏಕಾಗ್ರತೆಯಿಂದ ಕಲಿಕೆಯಲ್ಲಿ ತಲ್ಲೀನಗೊಳ್ಳುತ್ತಾರೆ. 

ಕೊನೆಗೂ  ಪಬ್ಲಿಕ್ ಪರೀಕ್ಷೆಯು ನಡೆದು ಫಲಿತಾಂಶವೂ  ಹೊರ ಬರುತ್ತದೆ. ಅದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುತ್ತಾರೆ. ಉತ್ತೀರ್ಣಗೊಂಡ ಮಕ್ಕಳು ತಮಗೆ ಲಭಿಸಿರುವ ಅಂಕಗಳ ಬಗ್ಗೆ ಹೆಮ್ಮೆಪಡುವುದೇನು,  ಸಂಭ್ರಮಿಸುವುದೇನು…. ಎಲ್ಲೆಲ್ಲೂ ವಿದ್ಯಾರ್ಥಿಗಳು ಸಡಗರದಿಂದ  ತಮ್ಮ ಅಂಕ ಪಟ್ಟಿಗಳನ್ನು  ಸ್ಟೇಟಸ್ ಹಾಕಿಕೊಳ್ಳುವುದು, ತಮ್ಮ ಆತ್ಮೀಯರು ನೀಡುವ  ಅಭಿನಂದನೆಗಳ, ಉಡುಗೊರೆಗಳ ಮಳೆಯಲ್ಲಿ ಮಿಂದೇಳುತ್ತಾ ಕುಣಿದು ವಿಜಯೋತ್ಸವ ಆಚರಿಸುತ್ತಿರುತ್ತಾರೆ.

ಮತ್ತೊಂದೆಡೆ ಪರೀಕ್ಷೆಗೆ ಸಾಕಷ್ಟು ಪೂರ್ವ ತಯಾರಿ ನಡೆಸಿದ  ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳುವುದಿದೆ.  ಇಷ್ಟೊಂದು ಪೂರ್ವ ಸಿದ್ಧತೆ ನಡೆಸಿಯೂ ಅನುತ್ತೀರ್ಣ ಗೊಂಡಿದ್ದಾರೆಂದರೆ, ಆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವು ಬಹಳವೇ ಕುಂಠಿತವಾಗಿತ್ತೆಂದರ್ಥ.   ವ್ಯಕ್ತಿಯು ಯಾವುದೇ ವಿಷಯದಲ್ಲಿ ಯಶಸ್ವಿಯಾಗಲು ಸಾಮರ್ಥ್ಯಗಳ ಅಗತ್ಯವಿದೆ. ಶಿಕ್ಷಣ ಶಾಸ್ತ್ರದ ಪ್ರಕ್ರಿಯೆಗಳು ಕೂಡ ಮಗು ಕೇಂದ್ರಿತ ಮತ್ತು ವೈಯಕ್ತಿಕ ಸಾಧನೆಗಳ ಮೂಲಕ ಫಲ ನೀಡುತ್ತದೆ. ಕೆಲವು ಮಕ್ಕಳಿಗೆ ಕಲಿಕೆಯೆಂದರೆ ನೀರಿನಲ್ಲಿ ಕಾಗದದ ದೋಣಿ ಇಳಿಸಿ ಆಡಿದಷ್ಟು ಸರಳವಾಗಿದ್ದರೆ, ಇನ್ನು ಕೆಲವು ಮಕ್ಕಳಿಗೆಕಬ್ಬಿಣದ ಕಡಲೆ.

 ಉತ್ತೀರ್ಣಗೊಂಡ ಅಷ್ಟೊಂದು ಮಕ್ಕಳ ಸಂಭ್ರಮಗಳ ಮಧ್ಯೆ ಅನುತ್ತೀರ್ಣಗೊಂಡ  ವಿದ್ಯಾರ್ಥಿಗಳು ತಮ್ಮ ಕನಸುಗಳೆಲ್ಲವು  ಕಮರಿಹೋದವೆಂದು  ತಿಳಿದು ಮಾನಸಿಕವಾಗಿ ನೊಂದುಕೊಳ್ಳುತ್ತಾರೆ. ನಿರಾಶೆಯಿಂದ ಕೈ ಚೆಲ್ಲಿ ಕೂರದಂತೆ,  ಫಲಿತಾಂಶ  ಬಂದ ಅದೇ ತಿಂಗಳೊಳಗೆ  ಶಿಕ್ಷಣ ಮಂಡಳಿಯು ಪೂರಕ ಪರೀಕ್ಷೆಯನ್ನು ಬರೆಯುವ ಅವಕಾಶವನ್ನು  ನೀಡಿ ಅವರಿಗೆ ಪುನ: ಅವಕಾಶವನ್ನು ಕಲ್ಪಿಸುತ್ತದೆ.  ಹೇಗೋ ಇನ್ನೊಮ್ಮೆ ಓದಿ ಪರೀಕ್ಷೆಗಳನ್ನು  ಬರೆದು ಉತ್ತೀರ್ಣಗೊಂಡು   ತಮ್ಮ   ಸಹಪಾಠಿಗಳ  ಜೊತೆಯಲ್ಲಿ ಮುಂದಿನ ವ್ಯಾಸಂಗ ನಡೆಸಬೇಕು ಎಂದುಕೊಂಡು ಪೂರಕ ಪರೀಕ್ಷೆಗಾಗಿ  ಮತ್ತೆ ಸಜ್ಜಾಗುತ್ತಾರೆ. ಆದರೆ  ಕೆಲವೊಮ್ಮೆ ಆ ಪರೀಕ್ಷೆಗಳು ಮೊದಲಿನ ಪರೀಕ್ಷೆಗಳಿಗಿಂತ ತುಸು ಜಟಿಲವೇ ಇರುತ್ತದೆ.  ದುರಾದೃಷ್ಟವಶಾತ್  ಕೆಲವು ಮಕ್ಕಳು  ಇಲ್ಲಿಯೂ ಅನುತ್ತೀರ್ಣಗೊಳ್ಳುತ್ತಾರೆ. ಮೇಲಿಂದ ಮೇಲೆ ಅನುತ್ತೀರ್ಣಗೊಂಡ ಈ ಮಕ್ಕಳು ತಮ್ಮ ಮೇಲಿನ ಭರವಸೆಯನ್ನು ಸಂಪೂರ್ಣ ಕಳೆದುಕೊಂಡು ದಾರಿತಪ್ಪುವಂತದ್ದು ಪ್ರಾರಂಭವಾಗುವುದೇ ಇಲ್ಲಿಂದ.

ಪರೀಕ್ಷೆಯ ಸೋಲನ್ನು  ಜೀವನದ ಸೋಲೆಂದು ಭ್ರಮಿಸಿ ಅಪಮಾನಕ್ಕೊಳಪಟ್ಟ ಈ  ಮಕ್ಕಳನ್ನು  ಸುತ್ತಲಿನ ಸಮಾಜದ ನಡವಳಿಕೆಯು ಮಾನಸಿಕವಾಗಿ  ಕುಗ್ಗಿಸುತ್ತದೆ.  ಶಾಲೆಯ  ಕೀರ್ತಿಯ ಗುರಿಯನಿಟ್ಟು ಫಲಿತಾಂಶಕ್ಕಾಗಿ ಶ್ರಮಿಸಿದ ಬಹುತೇಕ ಶಾಲಾ ಶಿಕ್ಷಕ ವೃಂದದಿಂದ ಕೂಡ ಆಮೇಲಿನ ದಿನಗಳಲ್ಲಿ ಇವರಿಗಾಗಿ ಯಾವುದೇ  ಯಾವುದೇ ಮಾಹಿತಿ ಮಾರ್ಗದರ್ಶನಗಳಾಗಲಿ ಸಿಗುವುದಿಲ್ಲ. ಇನ್ನು ನಿಮ್ಮ ಪಾಡು ನೀವೇ ನೋಡಿಕೊಳ್ಳಿ ಎಂಬಂತೆ  ಅವರೊಳಗೆ ಭರವಸೆ ತುಂಬದೆ ಸಂಪೂರ್ಣವಾಗಿ ಕೈ ಬಿಟ್ಟು ಬಿಡುವುದೂ ಉಂಟು. ಇನ್ನು ತಮ್ಮ  ಸ್ವಂತ ಮನೆಗಳಲ್ಲಿಯೂ ಮಾತಿನಲ್ಲಿ ನಿಂದಿಸಿ ತಿವಿಯುವ ಪೋಷಕರು, ಅಕ್ಕಪಕ್ಕದವರ ಪರಿಹಾಸ್ಯ ಇತ್ಯಾದಿಗಳನ್ನು ಅನುಭವಿಸುತ್ತಾ ಆ ಮಗು ತನ್ನ ಆತ್ಮಸ್ಥೈರ್ಯವನ್ನೇ ಕಳೆದುಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಮಕ್ಕಳು ಜಿಗುಪ್ಸೆಗೊಂಡು ಹೇಳದೆ ಕೇಳದೆ ಮನೆ ತೊರೆಯುವುದೋ, ಇನ್ನು ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದೋ ನಡೆಯುತ್ತದೆ. ಮತ್ತೆ ಕೆಲವು ಮಕ್ಕಳು ತಾನಿನ್ನು ಓದುವುದೇ ಇಲ್ಲವೆಂದು ಕಲಿಕೆಗೆ ತಿಲಾಂಜಲಿ ಇಟ್ಟು ಕೈಗೆ ಸಿಕ್ಕಿದ ಕೆಲಸಕ್ಕೆ ಸೇರಿಕೊಂಡು ಅಷ್ಟರಲ್ಲೇ ಬದುಕು ಕಟ್ಟಿಕೊಳ್ಳುವುದೂ ಇದೆ.

ಈ ಎಲ್ಲ ಅಂಶಗಳನ್ನು ಗಮನಿಸಿ ನಮ್ಮ ರಾಜ್ಯದ ಶಿಕ್ಷಣ ಇಲಾಖೆಯು ಮಕ್ಕಳ  ವಿದ್ಯಾರ್ಥಿ ಬದುಕು ಮೊಟಕುಗೊಳ್ಳದಂತೆ  ಆ ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸಲೇಬೇಕು. ಪೂರಕ ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದ  ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪುನ:ಮರು ಪರೀಕ್ಷೆ ಬರೆಯುವಂತೆ ಅವಕಾಶಗಳನ್ನು ಹೊಂದಿಸಬೇಕು. ಅವರ ಪಾಲಿನ  ಒಂದು ಶೈಕ್ಷಣಿಕ ವರ್ಷವೇ  ಹಾಳಾಗದಂತೆ ತಡೆಯಬೇಕು.  ಮಕ್ಕಳು ಭವಿಷ್ಯದಲ್ಲಿ  ಸಫಲರಾಗಲು ಮೇಲಿಂದ ಮೇಲೆ  ಅವಕಾಶಗಳನ್ನು ಕಲ್ಪಿಸಿ ಗೆಲುವು  ಸಾಧಿಸುವವರೆಗೆ ಶಾಲೆಯಿಂದ ಪ್ರೋತ್ಸಾಹ ದೊರೆಯಬೇಕು. ಮಕ್ಕಳ ಕಮರಿ ಹೋದ ಆ ಕನಸುಗಳಿಗೆ ಅವಕಾಶಗಳನ್ನು ನೀಡುತ್ತಾ ಅವುಗಳನ್ನು ಮತ್ತೆ ಚಿಗುರಿಸಬೇಕು.

ಸಾರಾಅಲಿ ಪರ್ಲಡ್ಕ

ಯುವ ಬರಹಗಾರ್ತಿ

ಇದನ್ನೂ ಓದಿ : ರೋಲ್ಕಾಲ್ ಪತ್ರಕರ್ತರ ಕಾಟ, ಕಲಾವಿದರಿಗೆ ಪೀಕಲಾಟ

Related Articles

ಇತ್ತೀಚಿನ ಸುದ್ದಿಗಳು