Home ಅಂಕಣ ಮನದ ಮಾತುಗಳಿಗೆ ಸಿಗಲಿ ನೈಜ ಧ್ವನಿ: ಅಕ್ಟೋಬರ್ 10 ‘ವಿಶ್ವ ಮಾನಸಿಕ ಆರೋಗ್ಯ ದಿನ’ದ ವಿಶೇಷ...

ಮನದ ಮಾತುಗಳಿಗೆ ಸಿಗಲಿ ನೈಜ ಧ್ವನಿ: ಅಕ್ಟೋಬರ್ 10 ‘ವಿಶ್ವ ಮಾನಸಿಕ ಆರೋಗ್ಯ ದಿನ’ದ ವಿಶೇಷ ನೋಟ

0

“..ಪ್ರತಿ ವರ್ಷದ ಅಕ್ಟೋಬರ್ 10 ರಂದು ಜಗತ್ತಿನಾದ್ಯಂತ ‘ವಿಶ್ವ ಮಾನಸಿಕ ಆರೋಗ್ಯ ದಿನ’ವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ದಿನವನ್ನು “ಸ್ವ-ಅನುಭವಗಳನ್ನು ಆಲಿಸೋಣ..” ಪದ್ಮರೇಖಾ ಎಸ್ ರಾಮನಗರ ಅವರ ಬರಹದಲ್ಲಿ

ನೈಜ ಧ್ವನಿಗಳು, ನೈಜ ಬದಲಾವಣೆಗಳು” ಎಂಬ ಅರ್ಥಪೂರ್ಣ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ಮಾನಸಿಕ ಆರೋಗ್ಯದ ಕುರಿತು ಸಮಾಜದಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ, ಮುಕ್ತವಾಗಿ ಚರ್ಚಿಸುವಂತೆ ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಒಬ್ಬ ವ್ಯಕ್ತಿಯು ತನ್ನ ಭಾವನೆಗಳನ್ನು ಅರ್ಥಮಾಡಿಕೊಂಡು, ದೈನಂದಿನ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಿ, ಉತ್ತಮ ಸಂಬಂಧಗಳನ್ನು ಬೆಳೆಸಿಕೊಂಡು, ಜೀವನದಲ್ಲಿ ಸಂತೋಷದಿಂದ ಮತ್ತು ಸಮರ್ಥವಾಗಿ ಕಾರ್ಯನಿರ್ವಹಿಸುವ ಸ್ಥಿತಿಯೇ ಮಾನಸಿಕ ಆರೋಗ್ಯ. ಸರಳವಾಗಿ ಹೇಳುವುದಾದರೆ ಮನಸ್ಸಿನ ನೆಮ್ಮದಿ, ಭಾವನೆಗಳ ಸಮತೋಲನ, ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಜೀವನವನ್ನು ಸಂತೋಷದಿಂದ ನಡೆಸುವ ಸ್ಥಿತಿಯೇ ಮಾನಸಿಕ ಆರೋಗ್ಯ. ಮಾನಸಿಕ ಅರೋಗ್ಯವು ಮೆದುಳಿನ ಅರೋಗ್ಯವನ್ನು ಸೂಚಿಸುತ್ತದೆ.

ಮಾನಸಿಕ ಆರೋಗ್ಯದ ಸಮಸ್ಯೆಗಳು ಒಂದೇ ಕಾರಣದಿಂದ ಉಂಟಾಗುವುದಿಲ್ಲ. ಜೈವಿಕ, ಮಾನಸಿಕ, ಸಾಮಾಜಿಕ ಹಾಗೂ ಪರಿಸರದ ಅಂಶಗಳು ಒಟ್ಟಾಗಿ ಪರಿಣಾಮ ಬೀರಬಹುದು.

ಜೈವಿಕ ಕಾರಣಗಳು : ವಂಶವಾಹಿ ಅಂಶಗಳು (ಕುಟುಂಬದಲ್ಲಿ ಮಾನಸಿಕ ಕಾಯಿಲೆಗಳ ಇತಿಹಾಸ),  ಮೆದುಳಿನ ರಾಸಾಯನಿಕ ಕ್ರಿಯೆಗಳಲ್ಲಿನ ಬದಲಾವಣೆಗಳು, ಹಾರ್ಮೋನುಗಳ ಬದಲಾವಣೆ,
ದೀರ್ಘಕಾಲದ ದೈಹಿಕ ಕಾಯಿಲೆಗಳು, ನಿದ್ರೆಯ ಕೊರತೆ ಮತ್ತು ಕೆಲವು ಮಾದಕ ವಸ್ತುಗಳ ಬಳಕೆ

ಮಾನಸಿಕ ಕಾರಣಗಳು : ಅತಿಯಾದ ಒತ್ತಡ ಮತ್ತು ಆತಂಕ,  ಭಯ, ದುಃಖ ಮತ್ತು ನಿರಾಶೆಯ ಭಾವನೆಗಳು, ಆತ್ಮವಿಶ್ವಾಸದ ಕೊರತೆ, ಬಾಲ್ಯದಲ್ಲಿ ಎದುರಿಸಿದ ಆಘಾತಕಾರಿ ಅನುಭವಗಳು, ಸಮಸ್ಯೆಗಳನ್ನು ನಿಭಾಯಿಸಲು ಕಷ್ಟವಾಗುವುದು,
ಸಾಮಾಜಿಕ ಕಾರಣಗಳು : ಕುಟುಂಬದಲ್ಲಿ ಜಗಳ ಮತ್ತು ಕಲಹಗಳು, ದಾಂಪತ್ಯ ಸಮಸ್ಯೆಗಳು, ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು, ಒಂಟಿತನ ಮತ್ತು ಸಾಮಾಜಿಕ ಬೆಂಬಲದ ಕೊರತೆ, ಆರ್ಥಿಕ ಸಮಸ್ಯೆಗಳು ಮತ್ತು ಸಾಲದ ಹೊರೆ, ಉದ್ಯೋಗದ ಒತ್ತಡ ಮತ್ತು ನಿರುದ್ಯೋಗ, ಕೌಟುಂಬಿಕ ಹಿಂಸೆ, ಕಿರುಕುಳ ಮತ್ತು ತಾರತಮ್ಯ

ಪರಿಸರ ಮತ್ತು ಜೀವನಶೈಲಿಯ ಕಾರಣಗಳು : ಕೆಲಸ ಮತ್ತು ಶಿಕ್ಷಣದ ಒತ್ತಡ, ಪರೀಕ್ಷೆಯ ಭಯ ಮತ್ತು ಸ್ಪರ್ಧೆ, ನೈಸರ್ಗಿಕ ವಿಕೋಪಗಳು ಹಾಗೂ ಅಪಘಾತಗಳು, ಅತಿಯಾದ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಉಂಟಾಗುವ ತೊಂದರೆಗಳು, ವ್ಯಾಯಾಮದ ಕೊರತೆ ಮತ್ತು ಅನಿಯಮಿತ ಜೀವನಶೈಲಿ, ಮದ್ಯಪಾನ ಹಾಗೂ ಮಾದಕ ವಸ್ತುಗಳ ದುರ್ಬಳಕೆ ಇಂತಹ ಹಲವು ಕಾರಣಗಳು ವ್ಯಕ್ತಿಯ ಮಾನಸಿಕ ಅಸಮತೋಲನಕ್ಕೆ ಕಾರಣವಾಗುತ್ತದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ವರದಿ :
ಭಾರತದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ (National Mental Health Survey of India, 2015–16) ಯನ್ನು ಭಾರತದ 12 ರಾಜ್ಯಗಳನ್ನು ಒಳಗೊಂಡಂತೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ನಡೆಸಿತು. ಈ ಬೃಹತ್ ಸಮೀಕ್ಷೆಯ ಪ್ರಕಾರ, ದೇಶದಾದ್ಯಂತ ಸುಮಾರು 138 ಕೋಟಿ ಜನರು ವಿವಿಧ ರೀತಿಯ ಮಾನಸಿಕ ತೊಂದರೆಗಳಿಂದ ಬಳಲುತ್ತಿದ್ದಾರೆ. 18 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಸುಮಾರು ಶೇ. 10.6ರಷ್ಟು ಜನರು ಪ್ರಸ್ತುತ ಯಾವುದಾದರೊಂದು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂದರೆ ಪ್ರತೀ 100 ಜನರಲ್ಲಿ 10 ಜನ ಎಂದು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಜೀವನದ ಯಾವುದಾದರೂ ಹಂತದಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸಿರುವವರ ಪ್ರಮಾಣ ಸುಮಾರು ಶೇ. 13.7ರಷ್ಟಿದೆ. ಗ್ರಾಮೀಣ ಪ್ರದೇಶಗಳಿಗೆ (6.9%) ಹೋಲಿಸಿದರೆ, ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ (13.5%) ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರ ಪ್ರಮಾಣ ಸುಮಾರು ಎರಡು ಪಟ್ಟು ಹೆಚ್ಚು ಕಂಡುಬಂದಿದೆ. ದೇಶದಲ್ಲಿ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವಲ್ಲಿ ಭಾರಿ ಅಂತರವಿದೆ. ವಿವಿಧ ಖಾಯಿಲೆಗಳಿಗೆ ಈ ಅಂತರವು ಶೇಕಡಾ 28 ರಿಂದ 83 ರಷ್ಟಿದೆ. ಅಂದರೆ, ಮಾನಸಿಕ ಸಮಸ್ಯೆಯಿರುವ 10 ಜನರಲ್ಲಿ ಕೇವಲ 2 ಅಥವಾ 3 ಜನರಿಗೆ ಮಾತ್ರ ಸೂಕ್ತ ಚಿಕಿತ್ಸೆ ಸಿಗುತ್ತಿದೆ. ಆಲ್ಕೋಹಾಲ್ ಬಳಕೆಯ ಸಮಸ್ಯೆಗಳಲ್ಲಿ ಈ ಅಂತರ ಶೇ. 86 ರಷ್ಟಿದೆ. ಸಮೀಕ್ಷೆಯ ಪ್ರಕಾರ, ಪ್ರತಿ 20 ಭಾರತೀಯರಲ್ಲಿ ಒಬ್ಬರು (ಶೇ. 5) ತಮ್ಮ ಜೀವಿತಾವಧಿಯಲ್ಲಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ಅಂಕಿ-ಅಂಶಗಳು ದೇಶದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು, ಆರಂಭಿಕ ಗುರುತಿಸುವಿಕೆ ಮತ್ತು ಸೂಕ್ತ ಚಿಕಿತ್ಸೆಯ ಅಗತ್ಯವನ್ನು ತಿಳಿಸುತ್ತದೆ.

ಮಾನಸಿಕ ಖಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಸೂಕ್ತ ಚಿಕಿತ್ಸೆಗೆ ಅತ್ಯಂತ ಅಗತ್ಯ. ಮಾನಸಿಕ ಅಸ್ವಸ್ಥತೆಯ ಪ್ರಮುಖ ಲಕ್ಷಣಗಳನ್ನು ಅವುಗಳ ಸ್ವರೂಪಕ್ಕೆ ಅನುಗುಣವಾಗಿ ಈ ಕೆಳಗಿನಂತೆ ವರ್ಗೀಕರಿಸಬಹುದು:
1.ಭಾವನಾತ್ಮಕ ಲಕ್ಷಣಗಳು:
ನಿರಂತರ ಬೇಸರ: ಯಾವುದೇ ಕಾರಣವಿಲ್ಲದೆ ದಿನದ ಬಹುಪಾಲು ಸಮಯ ಅಥವಾ ವಾರಗಟ್ಟಲೆ ತೀವ್ರ ಬೇಸರ, ನಿರಾಸೆ ಮತ್ತು ಶೂನ್ಯತೆಯ ಭಾವನೆ ಹೊಂದುವುದು.
ಅತಿಯಾದ ಆತಂಕ ಮತ್ತು ಭಯ: ಸಣ್ಣಪುಟ್ಟ ವಿಷಯಗಳಿಗೂ ಅತಿಯಾಗಿ ತಲೆಕೆಡಿಸಿಕೊಳ್ಳುವುದು, ಗಾಬರಿಯಾಗುವುದು ಅಥವಾ ಭವಿಷ್ಯದ ಬಗ್ಗೆ ತೀವ್ರ ಆತಂಕ ಪಡುವುದು.
ಕೋಪ ಮತ್ತು ಕಿರಿಕಿರಿ: ಸಣ್ಣ ವಿಷಯಗಳಿಗೂ ಬೇಗನೆ ತಾಳ್ಮೆ ಕಳೆದುಕೊಳ್ಳುವುದು, ಅತಿಯಾದ ಕೋಪ ಅಥವಾ ಮೂಡ್ ಪದೇ ಪದೇ ಬದಲಾಗುವುದು (Mood Swings).
ಆಸಕ್ತಿ ಕಳೆದುಕೊಳ್ಳುವುದು: ಹಿಂದೆ ತಮಗೆ ಇಷ್ಟವಾಗುತ್ತಿದ್ದ ಕೆಲಸಗಳು, ಹವ್ಯಾಸಗಳು ಅಥವಾ ಮನರಂಜನೆಯಲ್ಲಿ ಸಂಪೂರ್ಣವಾಗಿ ಆಸಕ್ತಿ ಕಳೆದುಕೊಳ್ಳುವುದು (Anhedonia).

  1. ವರ್ತನೆಯಲ್ಲಿನ ಬದಲಾವಣೆಗಳು :
    ಸಾಮಾಜಿಕವಾಗಿ ದೂರ ಉಳಿಯುವುದು: ಸ್ನೇಹಿತರು, ಕುಟುಂಬದವರು ಮತ್ತು ಸಮಾಜದಿಂದ ದೂರ ಸರಿದು, ಒಂಟಿಯಾಗಿರಲು ಬಯಸುವುದು.
    ದೈನಂದಿನ ಜವಾಬ್ದಾರಿಗಳ ನಿರ್ಲಕ್ಷ್ಯ: ವೈಯಕ್ತಿಕ ಸ್ವಚ್ಛತೆಯ ನಿರ್ಲಕ್ಷ್ಯ (ಸ್ನಾನ ಮಾಡುವುದು, ಬ್ರಷ್ ಮಾಡುವುದು ಇತ್ಯಾದಿ), ಕಚೇರಿ ಅಥವಾ ಶಾಲೆಯ ಕೆಲಸಗಳನ್ನು ಮಾಡಲು ಸಾಧ್ಯವಾಗದಿರುವುದು.
    ಅಪಾಯಕಾರಿ ನಡವಳಿಕೆ: ತಮಗೆ ತಾವೇ ಗಾಯ ಮಾಡಿಕೊಳ್ಳುವುದು ಅಥವಾ ಆತ್ಮಹತ್ಯೆಯ ಆಲೋಚನೆಗಳು/ಪ್ರಯತ್ನಗಳನ್ನು ಮಾಡುವುದು.
    ವ್ಯಸನಗಳಿಗೆ ಶರಣಾಗುವುದು: ಮಾನಸಿಕ ಒತ್ತಡವನ್ನು ತಡೆಯಲಾರದೆ ಆಲ್ಕೋಹಾಲ್, ಧೂಮಪಾನ ಅಥವಾ ಮಾದಕ ದ್ರವ್ಯಗಳ ಅತಿಯಾದ ಬಳಕೆಗೆ ದಾಸರಾಗುವುದು.
  2. ದೈಹಿಕ ಮತ್ತು ಶಾರೀರಿಕ ಲಕ್ಷಣಗಳು:
    ನಿದ್ರೆಯ ಸಮಸ್ಯೆಗಳು: ಅತಿಯಾದ ನಿದ್ರಾಹೀನತೆ (Insomnia) ಅಥವಾ ದಿನವಿಡೀ ಅತಿಯಾಗಿ ನಿದ್ರಿಸುವುದು.
    ಆಹಾರ ಪದ್ಧತಿಯಲ್ಲಿ ಏರುಪೇರು: ಹಸಿವು ಸಂಪೂರ್ಣವಾಗಿ ಇಲ್ಲವಾಗುವುದು ಅಥವಾ ಅತಿಯಾಗಿ ತಿನ್ನುವುದು. ಇದರಿಂದಾಗಿ ತೂಕದಲ್ಲಿ ಭಾರಿ ಬದಲಾವಣೆಯಾಗುವುದು.
    ನಿರಂತರ ಆಯಾಸ: ಯಾವುದೇ ದೈಹಿಕ ಶ್ರಮ ಪಡದಿದ್ದರೂ ಸದಾ ತೀವ್ರ ಸುಸ್ತು ಮತ್ತು ಶಕ್ತಿ ಇಲ್ಲದಂತೆ ಭಾಸವಾಗುವುದು.
    ವಿವರಿಸಲಾಗದ ದೈಹಿಕ ನೋವು: ವೈದ್ಯಕೀಯ ತಪಾಸಣೆಯಲ್ಲಿ ಯಾವುದೇ ದೋಷ ಕಂಡುಬರದಿದ್ದರೂ ನಿರಂತರ ತಲೆನೋವು, ಬೆನ್ನುನೋವು ಅಥವಾ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದು.
  3. ಜ್ಞಾನಗ್ರಹಣ ಮತ್ತು ಆಲೋಚನಾ ಲಕ್ಷಣಗಳು :
    ಗಮನ ಕೇಂದ್ರೀಕರಿಸಲು ತೊಂದರೆ: ಯಾವುದೇ ಒಂದು ಕೆಲಸದ ಮೇಲೆ ಗಮನ ಇಡಲು ಸಾಧ್ಯವಾಗದಿರುವುದು, ಗೊಂದಲಕ್ಕೊಳಗಾಗುವುದು ಮತ್ತು ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟಪಡುವುದು.
    ಭ್ರಮೆ ಮತ್ತು ತಪ್ಪು ಕಲ್ಪನೆಗಳು: ವಾಸ್ತವದಲ್ಲಿ ಇಲ್ಲದಿರುವ ಧ್ವನಿಗಳು ಕೇಳಿಸುವುದು ಅಥವಾ ವಸ್ತುಗಳು ಕಾಣಿಸುವುದು (Hallucinations), ಹಾಗೂ ಸಮಾಜ ಅಥವಾ ಜನರು ತಮ್ಮ ವಿರುದ್ಧ ಸಂಚು ಮಾಡುತ್ತಿದ್ದಾರೆ ಎಂಬ ತಪ್ಪು ನಂಬಿಕೆ ಹೊಂದುವುದು (Delusions).
    ನಕಾರಾತ್ಮಕ ಆಲೋಚನೆಗಳು: ತಾನು ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಕೀಳರಿಮೆ ಮತ್ತು ಅತಿಯಾದ ಅಪರಾಧ ಪ್ರಜ್ಞೆ ಕಾಡುವುದು.

ಮಾನಸಿಕ ಆರೋಗ್ಯಕ್ಕೆ ಸಂಭಂಧಿಸಿದಂತೆ ಸಾಮಾನ್ಯವಾಗಿ ಗುರುತಿಸಲಾಗುವ ಪ್ರಮುಖ ಮಾನಸಿಕ ಖಾಯಿಲೆಗಳು :
1.ಮೂಡ್ ಅಥವಾ ಭಾವನಾತ್ಮಕ ಅಸ್ವಸ್ಥತೆಗಳು
ಖಿನ್ನತೆ / ತೀವ್ರ ನಿರಾಸೆ (Depression), ಆತ್ಮಹತ್ಯೆಯ ಆಲೋಚನೆಗಳು,
ಬೈಪೋಲಾರ್ ಡಿಸಾರ್ಡರ್ (Bypolar Disorder): ದ್ವಿಧ್ರುವಿ ವ್ಯಾಧಿ, ಇಲ್ಲಿ ವ್ಯಕ್ತಿಯ ಮನಸ್ಥಿತಿ ತೀವ್ರ ಸಂತೋಷ/ಉತ್ಸಾಹ (Mania) ಮತ್ತು ತೀವ್ರ ಬೇಸರ/ಖಿನ್ನತೆಯ (Depression) ನಡುವೆ ಬದಲಾಗುತ್ತಿರುತ್ತದೆ.
ಆತಂಕಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳು (Anxiety Disorders)

  • : ಸಾಮಾನ್ಯೀಕೃತ ಆತಂಕದ ಕಾಯಿಲೆ (Generalized Anxiety Disorder – GAD) ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸದಾ ಅತಿಯಾದ ಆತಂಕ ಪಡುವುದು.
  • ಪ್ಯಾನಿಕ್ ಡಿಸಾರ್ಡರ್ (Panic Disorder): ತೀವ್ರ ಗಾಬರಿ ಅಥವಾ ಭಯದ ರೋಗ (ಧಿಡೀರ್ ಎಂದು ಅತಿಯಾದ ಭಯವಾಗಿ ಉಸಿರಾಟ ಕಷ್ಟವಾಗುವುದು).
    •  ಫೋಬಿಯಾ(Phobia): ನಿರ್ದಿಷ್ಟ ಭಯ ಅಥವಾ ಭೀತಿ (ಉದಾಹರಣೆಗೆ: ಎತ್ತರ, ನೀರು, ಕತ್ತಲೆ ಅಥವಾ ಜನಸಂದಣಿಯನ್ನು ಕಂಡು ಅತಿಯಾಗಿ ಹೆದರುವುದು).
  • ಗೀಳುಬೇನೆ, (Obsessive-Compulsive Disorder – OCD):   ಒಂದೇ ಆಲೋಚನೆ ಪದೇ ಪದೇ ಬರುವುದು ಮತ್ತು ಕೈ ತೊಳೆಯುವುದು, ಬೀಗ ಚೆಕ್ ಮಾಡುವುದರಂತಹ ಕೆಲಸಗಳನ್ನು ಮತ್ತೆ ಮತ್ತೆ ಮಾಡುವುದು.
  1. ತೀವ್ರ ಮಾನಸಿಕ ಅಸ್ವಸ್ಥತೆಗಳು (Psychotic Disorders)
  • ಸ್ಕಿಜೋಫ್ರೇನಿಯಾ (Schizophrenia): ತೀವ್ರ ಚಿತ್ತವಿಕಲತೆ ಅಥವಾ ಮನೋವಿಕಲತೆ, ವಾಸ್ತವ ಪ್ರಜ್ಞೆ ಕಳೆದುಕೊಳ್ಳುವುದು, ಇಲ್ಲದಿರುವ ಶಬ್ದಗಳು ಕೇಳಿಸುವುದು ಅಥವಾ ಜನರು ತಮ್ಮನ್ನು ಕೊಲ್ಲಲು ಬರುತ್ತಿದ್ದಾರೆ ಎಂದು ಶಂಕಿಸುವುದು. ಅನುಮಾನ ಅಥವಾ ಭ್ರಮೆ,  ಯಾರನ್ನೂ ನಂಬದೆ ಸದಾ ಎಲ್ಲರ ಮೇಲೆಯೂ ಅನುಮಾನ ಪಡುವುದು.

4.ಆಘಾತ ಮತ್ತು ಒತ್ತಡಕ್ಕೆ ಸಂಬಂಧಿಸಿದವು (Trauma and Stressor-related Disorders)

  • :ಆಘಾತದ ನಂತರದ ಒತ್ತಡದ ಅಸ್ವಸ್ಥತೆ (Post-Traumatic Stress Disorder – PTSD): ಅಪಘಾತ, ದೌರ್ಜನ್ಯ ಅಥವಾ ಪ್ರಕೃತಿ ವಿಕೋಪದಂತಹ ಭೀಕರ ಘಟನೆಗಳ ನಂತರ ಕಾಡುವ ತೀವ್ರ ಮಾನಸಿಕ ಒತ್ತಡ.
  1. ಬಾಲ್ಯ ಮತ್ತು ಬೆಳವಣಿಗೆಗೆ ಸಂಬಂಧಿಸಿದ ಅಸ್ವಸ್ಥತೆಗಳು – ಮಕ್ಕಳಲ್ಲಿ – (Neurodevelopmental Disorders)
  • ಆಟಿಸಂ (Autism Spectrum Disorder – ASD): ಸ್ವಲೀನತೆ ಮಕ್ಕಳು ಇತರರೊಂದಿಗೆ ಬೆರೆಯಲು ಮತ್ತು ಸಂವಹನ ನಡೆಸಲು ತೊಂದರೆ ಪಡುವುದು.
  • ಗಮನ ಕೊರತೆ ಮತ್ತು ಅತಿಚಟುವಟಿಕೆಯ ಅಸ್ವಸ್ಥತೆ (Attention-Deficit/Hyperactivity Disorder – ADHD):  ಒಂದೆಡೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದೆ ಸದಾ ಅತಿಯಾದ ಚಡಪಡಿಕೆ ಹೊಂದಿರುವುದು.
  1. ಇತರ ಪ್ರಮುಖ ಅಸ್ವಸ್ಥತೆಗಳು
  • ಆಹಾರ ಪದ್ಧತಿಯ ಅಸ್ವಸ್ಥತೆಗಳು (Eating Disorders) ಅತಿಯಾಗಿ ತಿನ್ನುವುದು ಅಥವಾ ದಪ್ಪಗಾಗುವ ಭಯದಿಂದ ಹಸಿವಿದ್ದರೂ ತಿನ್ನದೇ ಇರುವುದು – (Anorexia/Bulimia).
    •  ತೀವ್ರ ನಿದ್ರಾಹೀನತೆ ಅಥವಾ ನಿದ್ರೆಯ ಅಸ್ವಸ್ಥತೆಗಳು, (Insomnia / Sleep Disorders)
  • ಮಾದಕ ದ್ರವ್ಯ ಅಥವಾ ವ್ಯಸನದ ಅಸ್ವಸ್ಥತೆ : ಆಲ್ಕೋಹಾಲ್, ತಂಬಾಕು ಮತ್ತು ಮಾದಕ ದ್ರವ್ಯಗಳಿಗೆ (ಡ್ರಗ್ಸ್‌ಗೆ ) ತೀವ್ರವಾಗಿ ದಾಸರಾಗುವುದು.
  • ಮರೆಗುಳಿತನ (Dementia):  ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮೆದುಳಿನ ಜೀವಕೋಶಗಳು ಕ್ಷೀಣಿಸುವುದರಿಂದ ಬರುವ ನೆನಪಿನ ಶಕ್ತಿಯ ಕೊರತೆ
    ಇಂತಹ ಹಲವು ಮಾನಸಿಕ ಅಸ್ವಸ್ಥತೆಗಳನ್ನು ಗುರುತಿಸಬಹುದು.

ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸಾಕಷ್ಟು ನಿದ್ರೆ ಮಾಡಬೇಕು, ಸಮತೋಲಿತ ಆಹಾರ ಸೇವಿಸಿ ನಿಯಮಿತವಾಗಿ ವ್ಯಾಯಾಮ ಮಾಡಬೇಕು, ಒತ್ತಡವನ್ನು ನಿಭಾಯಿಸುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನಬಿಚ್ಚಿ ಮಾತನಾಡಬೇಕು. ಅಗತ್ಯವಿದ್ದಾಗ ಮನೋವೈದ್ಯರು ಅಥವಾ ಆಪ್ತ ಸಮಾಲೋಚಕರ ಸಹಾಯ ಪಡೆಯಬೇಕು. ಮಾನಸಿಕ ಆರೋಗ್ಯ ಸಮಸ್ಯೆಗಳು ವಯಸ್ಸು, ಲಿಂಗ, ಆರ್ಥಿಕ ಪರಿಸ್ಥಿತಿ, ಶಿಕ್ಷಣ, ಸಾಮಾಜಿಕ ಸ್ಥಿತಿಗಳ ಭೇದವಿಲ್ಲದೆ ಯಾರಾನ್ನಾದರೂ ಭಾದಿಸಬಹುದು, ದೈಹಿಕ ಖಾಯಿಲೆಗಳಾದ ಮಧುಮೇಹ, ರಕ್ತದೊತ್ತಡದಷ್ಟೇ ಇದು ಸಾಮಾನ್ಯ. ಬಹಳಷ್ಟು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲೇ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ಮಾನಸಿಕ ಸಮಸ್ಯೆಗಳಿಂದ ಬಳಲುವ ಜನರು ಭಯ, ಕೀಳರಿಮೆ ಮತ್ತು ತಪ್ಪು ಕಲ್ಪನೆಗಳನ್ನು ಹೊರಹಾಕಿ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು.

ಮಾನಸಿಕ ಆರೋಗ್ಯದ ಸಮಸ್ಯೆಗಳು ಯಾರಿಗಾದರೂ ಉಂಟಾಗಬಹುದು. ಇವು ವ್ಯಕ್ತಿಯ ದೌರ್ಬಲ್ಯವಲ್ಲ. ಸರಿಯಾದ ಸಮಯದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಬೆಂಬಲ ನೀಡಿದರೆ ಚೇತರಿಕೆ ಸಾಧ್ಯ.

ಮಾನಸಿಕ ಆರೋಗ್ಯ ಸೇವೆಗಳಿಗೆ ಉಚಿತ ಸಹಾಯವಾಣಿ ಟೆಲಿಮನಸ್ 14416 ಗೆ ಕರೆ ಮಾಡಿ.

You cannot copy content of this page

Exit mobile version