Home ಅಂಕಣ ಉಚಿತ ಯೋಜನೆ ಸವಲತ್ತುಗಳು ಕಳಪೆ ಗುಣಮಟ್ಟದಿಂದ ಇರದೆ ಉತ್ತಮವಾಗಿರಲಿ

ಉಚಿತ ಯೋಜನೆ ಸವಲತ್ತುಗಳು ಕಳಪೆ ಗುಣಮಟ್ಟದಿಂದ ಇರದೆ ಉತ್ತಮವಾಗಿರಲಿ

0

“..ಸರ್ಕಾರಿ ಯೋಜನೆಗಳಲ್ಲಿ ಬಹಳಷ್ಟು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ ಎಂಬುದು ತಳ್ಳಿ ಹಾಕಲಾಗದಂತಹ ಮಾತು. ಯಾವುದೇ ಸರ್ಕಾರವಾದರೂ ಲಂಚಗುಳಿತನಕ್ಕೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ..” ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ, ಸೈಕಲ್ ವಿತರಣೆ, ಪಠ್ಯ ಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ, ವಿದ್ಯಾರ್ಥಿವೇತನ ಕೊಡುವಿಕೆ, ಹಾಲು ಕೊಡುವ ಯೋಜನೆ, ಊಟದ ಜೊತೆಗೆ ಮೊಟ್ಟೆ ಕೊಡುವ ಯೋಜನೆಗಳು ಜಾರಿಯಾಗಿ ಕಲಿಯುವ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತಿವೆ. ಇವುಗಳಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಹೂಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಿದ ಚಪ್ಪಲಿಗಳು ಗುಣಮಟ್ಟದಲ್ಲ, ಹರಿದ ಚಪ್ಪಲಿಗಳನ್ನು ವಿತರಿಸಿದ್ದಾರೆ ಎಂದು ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳೆಲ್ಲ ಸೇರಿ, ವಿತರಿಸಿದ್ದ ಚಪ್ಪಲಿಗಳನ್ನೆಲ್ಲಾ ತಿರಸ್ಕರಿಸಿದ್ದಾರೆ. ಈ ವಿಷಯವಾಗಿ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರ ಮಧು ಬಂಗಾರಪ್ಪನವರು ಚಪ್ಪಲಿಗಳ ಅಳತೆಯಲ್ಲಿ ಏರುಪೇರು ಆಗಿದೆಯೇ ಹೊರತು ಗುಣಮಟ್ಟದಲ್ಲಿ ಅಲ್ಲ, ಗುಣಮಟ್ಟ ಕಳಪೆ ಇದ್ದರೆ ವಿತರಕರನ್ನು ಶಿಕ್ಷಿಸುವ ಕೆಲಸ ಮಾಡುತ್ತೇವೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಇವರ ಮಾತಿನಲ್ಲಿ ತರ್ಕವಿದೆಯೇ? ಸರ್ಕಾರ ವಿತರಿಸಿದ ಚಪ್ಪಲಿಗಳು ಆ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳ ಕಾಲಿನ ಅಳತೆಗೆ ಸರಿಹೊಂದುವ ಸಾಧ್ಯತೆ ಇರುತ್ತದೆ. ಅಳತೆಯಲ್ಲಿ ಏರುಪೇರಾಗಿದ್ದರೆ ವಿದ್ಯಾರ್ಥಿಗಳು ಚಪ್ಪಲಿಗಳನ್ನು ಅದಲು ಬದಲು ಮಾಡಿಕೊಂಡು, ಅಳತೆಗನುಗುಣವಾಗಿ ಹಾಕಿಕೊಳ್ಳುತ್ತಿದ್ದರು‌.

ಸರ್ಕಾರದಿಂದ ಸಿಗುವ ಯೋಜನೆಗಳು ಮತ್ತು ಸೇವೆಗಳು ಎಷ್ಟು ಗುಣಮಟ್ಟದಿಂದ ಕೂಡಿವೆ ಎಂದು ಹೇಳಲು ಸಾಕಷ್ಟು ಜನ ಕೈಲಾಸವಾಸಿಯಾಗಬೇಕಾಯಿತು. ಕೋವಿಡ್ ಸಮಯದಲ್ಲಿ ಎಷ್ಟೋ ಜನ ತಮ್ಮ ಜೀವನ ಕಳೆದುಕೊಂಡಿದ್ದು ರೋಗದ ತೀವ್ರತೆಗಿಂತ ಹೆಚ್ಚಾಗಿ ಮಾಧ್ಯಮಗಳು ಸೃಷ್ಟಿಸಿದ ಭಯದಿಂದಾಗಿ ಮತ್ತು ಸರ್ಕಾರದ ಬರೀ ಲೆಕ್ಕ ತೋರಿಸಿ ಸೇವೆ ಕೊಡದೆ ಜನರನ್ನು ಸಾಯಿಸಿದ ಸಾಕಷ್ಟು ಪ್ರಕರಣಗಳು ನಮ್ಮ ಕಣ್ಣ ಮುಂದಿವೆ.

ಮೊದಲಿಗೆ, ಈ ನಾಡಿನ ಬಹುಸಂಖ್ಯಾತ ಜನರಿಗೆ ಶಿಕ್ಷಣವನ್ನು ನಿಷೇಧಿಸಲಾಗಿತ್ತು. ತೆಂಕಣ ಏಷ್ಯಾಗೆ ಬ್ರಿಟಿಷರ ಆಗಮನದ ಆದ ನಂತರ ಅವರ ವ್ಯಾಪಾರ ವಿಸ್ತಾರದ ಜೊತೆಗೆ ಅವರ ರೀತಿ ನೀತಿಗಳು ಜಾರಿಯಾಗಲು ಶುರುವಾದವು. 1835ರಲ್ಲಿ ಲಾರ್ಡ್ ಮೆಕಾಲೆ ಅವರು ಶಿಕ್ಷಣವನ್ನು ಸಾರ್ವತ್ರಿಕವಾಗಿ ಜಾರಿಗೊಳಿಸಿದರು. ಈ ಯೋಜನೆಯಿಂದ ಇಂಡಿಯಾದಲ್ಲಿ ನೂತನ ಅಲೆಯೇ ಎದ್ದಿತು. ಆಗ ಲಾರ್ಡ್ ಮೆಕಾಲೆ ಅವರಿಗೂ ತಿಳಿದಿತ್ತು, ಶಿಕ್ಷಣ ಪಡೆದವರು ಬ್ರಿಟಿಷ್ ಅಧಿಪತ್ಯವನ್ನು ಪ್ರಶ್ನಿಸುತ್ತಾರೆಂದು. ಹಾಗಾದರೂ ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣವನ್ನು ಜನಸಾಮಾನ್ಯರಿಗೆ ತಲುಪಿಸಿದರು. ನಂತರದಲ್ಲಿ ಮೈಸೂರು ಸಂಸ್ಥಾನದ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನರಿಗೆ ಶಿಕ್ಷಣದ ಮಹತ್ವ ಗೊತ್ತಿಲ್ಲವೆಂದು ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಕೂಲಿಗೆ ಕಳಿಸುತ್ತಾರೆಂದು, ಶಿಕ್ಷಣವನ್ನು ಪ್ರೋತ್ಸಾಹಿಸಲು ಶಾಲೆಗೆ ಬರುವ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಕೊಡಲು ಶುರು ಮಾಡಿದರು.

ನಂತರ ಸ್ವಾತಂತ್ರ್ಯಗೊಂಡ ಇಂಡಿಯಾ ಒಕ್ಕೂಟದಲ್ಲಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡು, ಸಂವಿಧಾನವು ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆಯಿಂದ ಜಾರಿಯಾಯಿತು. ಆಗ ಸಾರ್ವಜನಿಕ ಶಿಕ್ಷಣವನ್ನು ಪ್ರೋತ್ಸಾಹಿಸಲು ಸರ್ಕಾರದ ಕಡೆಯಿಂದ ಸಾಕಷ್ಟು ಯೋಜನೆಗಳು ಜಾರಿಯಾದವು. ಕಡ್ಡಾಯ ಶಿಕ್ಷಣ ಎಂಬ ಕಾಯ್ದೆಯು ಜಾರಿಯಾಯಿತು.

1991ರಲ್ಲಿ ಎಲ್‍ಪಿಜಿ ವ್ಯವಸ್ಥೆ ಜಾರಿಯಾದಾಗ, ಖಾಸಗಿಕರಣದ ಅಡಿಯಲ್ಲಿ ಶಿಕ್ಷಣ ಮತ್ತು ಆರೋಗ್ಯವು ಸೇರಿದ ಪರಿಣಾಮವ್ಸಮಾಜವನ್ನು ಲೂಟಿ ಮಾಡಲು ಬಂಡವಾಳಶಾಹಿಗಳು ಮುಂದಾದರು. ಶಿಕ್ಷಣವನ್ನು ಕಡ್ಡಾಯಗೊಳಿಸಿದ ನೀತಿ ಇದ್ದರು,ಇಂದಿಗೂ ಶಿಕ್ಷಣ ಪಡೆಯಲು ಹಲವಾರು ಅಡೆತಡೆ, ಕುಂದುಕೊರತೆಗಳಿವೆ. ಸರ್ಕಾರಿ ಶಾಲೆಗಳಲ್ಲಿನ ಕೊರತೆಗಳು- ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ, ವಿಷಯ ತಜ್ಞ ಶಿಕ್ಷಕರ ಕೊರತೆ, ಶೌಚಾಲಯ ಸಮಸ್ಯೆ ಮತ್ತು ನಿರ್ವಾಹಣೆ ಸಮಸ್ಯೆ, ಗ್ರಂಥಾಲಯಗಳ ಕೊರತೆ, ಕ್ರೀಡಾ ಸೌಲಭ್ಯದ ಕೊರತೆ, ನಗರ ಗ್ರಾಮೀಣ ಅಂತರ, ಸಾರಿಗೆ ಸಮಸ್ಯೆ ಶಾಲಾ ಕಾಲೇಜಿನ ಮಟ್ಟದಲ್ಲಿ ಶಿಕ್ಷಣವನ್ನು ಮೊಟಕುಗೊಳಿಸುವುದು ಇನ್ನು ಮುಂತಾದವುಗಳು. ಇದೆಲ್ಲದರ ಪರಿಣಾಮಗಳ ಜೊತೆಗೆ ಖಾಸಗಿ ಶಾಲೆಗಳು ಮಾಡುವ ಆಕರ್ಷಕ ಜಾಹೀರಾತುಗಳು, ಅವುಗಳ ಹುಸಿ ಭರವಸೆಗಳು, ಇವೆಲ್ಲದರ ಕಾರಣಗಳಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯ ಪ್ರಮಾಣಗಳು ದಿನೇ ದಿನೇ ಕಡಿಮೆಯಾಗುತ್ತಿವೆ.

ಹಾಗಾದರೂ ಅಲ್ಪಸ್ವಲ್ಪ ಸುಧಾರಣಾ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಮೆಚ್ಚಿ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಪೋಷಕರು ಸಹ ಇದ್ದಾರೆ. ಅಂತವರ ಮುಂದೆ ಸರ್ಕಾರಗಳು ನೀಡುವ ಯೋಜನೆಗಳು ಇಂತಹ ಕಳಪೆ ಗುಣಮಟ್ಟದಿಂದ ಕೂಡಿದ್ದರೆ, ಮಕ್ಕಳ ಮತ್ತು ಪೋಷಕರ ಆತ್ಮಸ್ಥೈರ್ಯ ಕುಸಿಯುವುದಿಲ್ಲವೇ?

ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಬಾರಿ ಚರ್ಚೆಯಾಗುತ್ತಿದ್ದು, ಕೆಲವರು ವಿದ್ಯಾರ್ಥಿಗಳಿಗಾದ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಹಲವಾರು ಜನ ಓದಲು ಬರೆಯಲು ಕಲಿತರು ಆದರೆ ವಿವೇಕತೆ ಕಲಿಯದೆ ಅವಿವೇಕಿಗಳಾಗಿ, ಅವರುಗಳು ಹೇಳುವುದು ನಾವು ಓದುವ ಹೊತ್ತಿನಲ್ಲಿ ಶಾಲೆಗಳು ದೂರದಲ್ಲಿದ್ದವು, ನಡೆದಾಡಲು ಚಪ್ಪಲಿಗಳೇ ಇರಲಿಲ್ಲ, ತಿನ್ನಲು ಊಟ ಇರಲಿಲ್ಲ, ಶಾಲೆಗಳು ಇದ್ದರೂ ನಿರ್ವಹಣೆ ಚೆನ್ನಾಗಿರಲಿಲ್ಲ, ನಾವುಗಳು ಕಷ್ಟಪಟ್ಟು ಕಷ್ಟಪಟ್ಟು ಓದಿದೆವು, ಹಾಗೆಯೇ ನೀವು ಕಷ್ಟಪಟ್ಟು ಓದಿ ಸಂಪಾದಿಸಿ ನಿಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಿ ಅದನ್ನು ಬಿಟ್ಟು ಸರ್ಕಾರ ಕೊಟ್ಟ ಚಪ್ಪಲಿಯನ್ನು ವಿರೋಧಿಸುವುದು ಸರಿಯಲ್ಲ ಎಂದು ಮಕ್ಕಳನ್ನು ನಡೆಯನ್ನು ವಿರೋಧಿಸಿ ತಮ್ಮ ಅವಿವೇಕತೆಯನ್ನು ಸಮಾಜದ ಮುಂದೆ ತೋರಿಸುತ್ತಿದ್ದಾರೆ.

ಶಿಕ್ಷಣ ಲಾಭದಾಯಕ ವ್ಯಾಪಾರವಲ್ಲ, ಶಿಕ್ಷಣ ಒಂದು ವಿಧವಾದ ಸೇವೆ ಮತ್ತು ಉಡುಗೊರೆ. ಸರ್ಕಾರ ಉಚಿತವಾಗಿ ಮಕ್ಕಳಿಗೆ ಚಪ್ಪಲಿಗಳನ್ನು ವಿತರಿಸಿದ್ದು, ಆ ಯೋಜನೆಯು ಜನರ ತೆರಿಗೆ ಹಣದಿಂದ ನಡೆಯುವಂತದ್ದು. ಆ ಚಪ್ಪಲಿಗಳಲ್ಲಿ ಗುಣಮಟ್ಟದ ಕೊರತೆ ಇದೆ ಎಂದಾದರೆ ಅದನ್ನು ಪ್ರಶ್ನಿಸುವುದು ಸಮಾಜದ ಹೊಣೆ, ಆ ಸಮಾಜದ ನಾಗರಿಕರ ಹೊಣೆ. ನಾವು ಕಟ್ಟಿದ ತೆರಿಗೆಯಲ್ಲಿ ಯೋಜನೆ ತರಲು ಸಾಧ್ಯವಾಯಿತು ಎಂಬ ಅರಿವು ಜನರಲ್ಲಿ ಇರುವುದು ಮುಖ್ಯ.

ಸರ್ಕಾರಗಳು ಉಚಿತ ಸವಲತ್ತುಗಳನ್ನು ಜನರಿಗೆ ಕೊಡುವುದರಿಂದ ಜನರ ಜೀವನವನ್ನು ಉನ್ನತ ಮಟ್ಟಕೇರಲು ಪ್ರೋತ್ಸಾಹ ಮಾಡಿದಂತಾಗುತ್ತದೆ. ಹಾಗಾಗಿ ಯೋಚನೆಗಳು ಜನರನ್ನು ಎಷ್ಟರಮಟ್ಟಿಗೆ ತಲುಪುತ್ತಿವೆ, ಯೋಜನೆಯ ಗುಣಮಟ್ಟ ಎಂತಹದ್ದು, ಯೋಜನೆಯ ಅನುಭೋಗಿಗಳು ಯಾವ ಸ್ತರದ ಜನರೆಂದು ವಿಶ್ಲೇಷಣೆ ಮಾಡುವುದು ಆರೋಗ್ಯಕರ ಸಮಾಜದ ಬೆಳವಣಿಗೆಗೆ ಸಂಬಂಧಪಟ್ಟದ್ದು. ಅದನ್ನು ಬಿಟ್ಟು ಜನಪರ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು, ಇವುಗಳಿಂದ ಜನರು ದುಡಿಯದೇ ಸೋಮಾರಿಗಳಾಗುತ್ತಾರೆ ಎಂದು ಬೊಗಳುವ ಜನರು ದೇವಸ್ಥಾನದ ಮುಂದೆ ಬಿಟ್ಟಿ ಪ್ರಸಾದಕ್ಕಾಗಿ ಕಾದು ನಿಂತಿರುವ ಪ್ರಸಂಗಗಳು ಲೆಕ್ಕವಿಲ್ಲದಷ್ಟಿವೆ.

ಯೋಜನೆಗಳ ಗುಣಮಟ್ಟ ಹಾಗೂ ಯೋಜನೆಗಳ ತಲುಪಿವಿಕೆಯ ಬಗ್ಗೆ ವಿಚಾರ ಮಾಡದೆ ಸಮಯ ವ್ಯರ್ಥ ಮಾಡಿಕೊಂಡು ಸಂಪ್ರದಾಯಕ್ಕೆ ಜೋತು ಬಿಳುವುದು ಮೂಢತನ. ಸರ್ಕಾರಿ ಯೋಜನೆಗಳಲ್ಲಿ ಬಹಳಷ್ಟು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ ಎಂಬುದು ತಳ್ಳಿ ಹಾಕಲಾಗದಂತಹ ಮಾತು. ಯಾವುದೇ ಸರ್ಕಾರವಾದರೂ ಲಂಚಗುಳಿತನಕ್ಕೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ. ಜನರು ಕೇಳದೆ, ಪ್ರಶ್ನಿಸದೆ, ಬೇಡಿಕೆಗೆ ಒತ್ತಾಯಿಸದೆ ಯಾವುದೇ ಜನಪರ ನೀತಿಗಳು, ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಲು ಸಾಧ್ಯವಿಲ್ಲ.

You cannot copy content of this page

Exit mobile version