Home ಅಂಕಣ ಸತ್ಯಜಿತ್ ಸುರತ್ಕಲ್‌ರಿಂದ ಹಿಂದುತ್ವ ಮಾದರಿಯ MRPL ಗುತ್ತಿಗೆ ಕಾರ್ಮಿಕರ ಹೋರಾಟ!

ಸತ್ಯಜಿತ್ ಸುರತ್ಕಲ್‌ರಿಂದ ಹಿಂದುತ್ವ ಮಾದರಿಯ MRPL ಗುತ್ತಿಗೆ ಕಾರ್ಮಿಕರ ಹೋರಾಟ!

0

“..ಹಿಂದುತ್ವವಾದಿ ಸತ್ಯಜಿತ್ ಸುರತ್ಕಲ್ ಅವರು ಎಂಆರ್‌ಪಿಎಲ್ ಕಾರ್ಮಿಕ ಹೋರಾಟವನ್ನು ‘ಬಿಜೆಪಿ/ಆರ್‌ಎಸ್‌ಎಸ್ ವಿರುದ್ಧದ ಅವರ ಹೋರಾಟದ ಮಾದರಿ’ಯಲ್ಲೇ ಮಾಡುತ್ತಿದ್ದಾರೆ… ನೂರು ಇಲಿ ತಿಂದ ಬಳಿಕ ಬೆಕ್ಕು ಸನ್ಯಾಸಿಯಾಯ್ತಂತೆ!” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

ಬಿಜೆಪಿ/ಆರ್‌ಎಸ್‌ಎಸ್‌ನಲ್ಲಿ ಇದ್ದಾಗ ಎಲ್ಲಾ ಕೃತ್ಯಗಳನ್ನು ಮಾಡಿ, ಈಗ ಅವಕಾಶ ವಂಚಿತರಾದಾಗ ಸಂಘದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದೂ ‘ಅರಿವಿನ ಸಂಘರ್ಷ’ವಲ್ಲ. ಅವಕಾಶಕ್ಕಾಗಿ ಸಂಘರ್ಷವಷ್ಟೆ! ಅವಕಾಶ ಸಿಕ್ಕಿದರೆ ಮತ್ತೆ ಸಂಘಪರಿವಾರ/ಬಿಜೆಪಿಯ ಸಕ್ರಿಯ ನಾಯಕರಾಗುತ್ತಾರೆ. ಸತ್ಯಜಿತ್ ಸುರತ್ಕಲ್ ಅವರು ‘ಎಂಆರ್‌ಪಿಎಲ್ ಗುತ್ತಿಗೆ ಕಾರ್ಮಿಕರ’ ವಿಷಯದಲ್ಲೂ ಇದೇ ಮಾದರಿಯ ಹೋರಾಟ ಕೈಗೆತ್ತಿಕೊಂಡಿದ್ದಾರೆ.

ಸೆಪ್ಟೆಂಬರ್ 30ರಂದು MRPL (ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್)ನ Coker Hydrotreater ಪ್ಲಾಂಟ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಗುತ್ತಿಗೆ ಕಾರ್ಮಿಕ ಮನೋಜ್ ಕರ್ಕಡ ಮೃತಪಟ್ಟು, 12 ಮಂದಿ ಗಾಯಗೊಂಡಿದ್ದರು. ಈ ಸಂಬಂಧ ಕಾರ್ಮಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಂಆರ್‌ಪಿಎಲ್ ಮಜ್ದೂರ್ ಸಂಘದ ಸತ್ಯಜಿತ್ ಸುರತ್ಕಲ್ ಎಚ್ಚರಿಕೆ ನೀಡಿದ್ದಾರೆ. ಎಚ್ಚರ ತಪ್ಪಿದರೆ MRPL ಜೀವಂತ ಜ್ವಾಲಾಮುಖಿಯಾಗಲಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಸತ್ಯಜಿತ್ ಸುರತ್ಕಲ್ ಅವರು ಹಿಂದೂ ಜಾಗರಣಾ ವೇದಿಕೆಯ ನಾಯಕರಾಗಿದ್ದಾಗ ಅವರ ಕಾರ್ಯಕರ್ತರು ‘ಎಂಆರ್‌ಪಿಎಲ್ ಪರ’ ಕಾರ್ಯಾಚರಣೆ ನಡೆಸಿದವರು. ರೈತರ ಜಮೀನುಗಳನ್ನು, ಮನೆಗಳನ್ನು ಡೆಮಾಲಿಶ್ ಮಾಡಲು ಕಾಲಾಳುಗಳನ್ನು ಒದಗಿಸಿದವರು. ಗ್ರೆಗೋರಿ ಪತ್ರಾವೋ ಎಂಬ ಕೃಷಿಕ ಕಂಪನಿಗೆ ಜಮೀನು ಕೊಡಲು ನಿರಾಕರಿಸಿದಾಗ, ಸುರತ್ಕಲ್‌ನಿಂದ ಬಂದ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಮನೆ ತೆರವುಗೊಳಿಸಲು ಅಧಿಕಾರಿಗಳಿಗೆ ಸಹಕರಿಸಿದ್ದರು. ಕುಡುಬಿ ಪದವಿನ ಕೃಷಿ ಭೂಮಿ ಉಳಿಸುವ ಹೋರಾಟಕ್ಕೆ ಖುದ್ದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಬಂದಿದ್ದರು. ಅಂದು ಗುತ್ತಿಗೆದಾರರ ಗೂಂಡಾಗಳು ಸ್ವಾಮೀಜಿಯನ್ನು ಸುತ್ತುವರಿದಾಗ ಅವರ ರಕ್ಷಣೆಗೆ ನಿಂತಿದ್ದು ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯರು ಮತ್ತು ಕೃಷಿ ಭೂಮಿ ರಕ್ಷಣಾ ಸಮಿತಿ! ಆಗ ಕನಿಷ್ಠ ಹಿಂದುತ್ವದ ಕಾರಣಕ್ಕಾದರೂ ಸ್ವಾಮೀಜಿ ಜೊತೆ ನಿಲ್ಲಬೇಕಿದ್ದ ಹಿಂದೂ ಜಾಗರಣಾ ವೇದಿಕೆ ಗುತ್ತಿಗೆದಾರರ ಪರ ನಿಂತಿತ್ತು!

2011–12ನೇ ಇಸವಿಯಲ್ಲಿ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನವನ್ನು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ತೆರವುಗೊಳಿಸಬೇಕು ಎಂಬ ಒತ್ತಡಗಳು ಸರ್ಕಾರದಿಂದ ಪ್ರಾರಂಭವಾದವು. ಕೃಷಿ ಭೂಮಿ ಸಂರಕ್ಷಣಾ ಸಮಿತಿಯು ನೆಲ್ಲಿದಡಿ ಗುತ್ತು ರಕ್ಷಣೆಗೆ ನಿಂತಿತ್ತು. ಆದರೆ ಸುತ್ತಲೂ ಪೆಟ್ರೋಲಿಯಂ ಕೈಗಾರಿಕೆಗಳಿಂದ ಆವೃತವಾಗಿದ್ದ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನವನ್ನು ಉಳಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನೆಲ್ಲಿದಡಿ ಗುತ್ತುವಿನ ಗುತ್ತಿನಾರ್ ಚೌಟರು ಮತ್ತು ಕುಟುಂಬದ ಜೊತೆ ಕೃಷಿ ಭೂಮಿ ಸಂರಕ್ಷಣಾ ಸಮಿತಿಯು ಬೆನ್ನೆಲುಬಾಗಿ ನಿಂತಿತ್ತು.

ನೆಲ್ಲಿದಡಿ ಗುತ್ತು ನೆಲಸಮ ಮಾಡಲು ಮಂಗಳೂರು ವಿಶೇಷ ಆರ್ಥಿಕ ವಲಯ ಮತ್ತು ಜಿಲ್ಲಾಡಳಿತ ಯೋಜನೆ ರೂಪಿಸಿತ್ತು. 25 ಮೇ 2012ರಂದು ಮಂಗಳೂರು ವಿಶೇಷ ಆರ್ಥಿಕ ವಲಯದ ಅಧಿಕಾರಿಗಳು ಜೆಸಿಬಿ, ಲಾರಿಗಳು ಮತ್ತು ಹಿಂದೂ ಜಾಗರಣಾ ವೇದಿಕೆಯ ನಾಯಕರೊಂದಿಗೆ ನೆಲ್ಲಿದಡಿ ಗುತ್ತು ನೆಲಸಮ ಮಾಡಲು ಬಂದರು. ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನ ಎನ್ನುವುದು ಐತಿಹಾಸಿಕ ಹಿನ್ನೆಲೆಯುಳ್ಳ ಪುರಾತನ ದೈವಸ್ಥಾನ. ಜನರ ನಂಬಿಕೆಯ ದೈವಸ್ಥಾನವನ್ನು ನೆಲಸಮ ಮಾಡಲು ಹಿಂದೂ ಜಾಗರಣಾ ವೇದಿಕೆಯನ್ನು ಬಳಸಿಕೊಂಡರೆ ವಿವಾದವಿರಲ್ಲ ಎಂದು ಆರ್‌ಎಸ್‌ಎಸ್‌ನ ಘಟಕವಾಗಿರುವ ಹಿಂದೂ ಜಾಗರಣಾ ವೇದಿಕೆಯ ನಾಯಕ ಸುಭಾಷ್ ಪಡೀಲ್‌ಗೆ ನೆಲಸಮ ಗುತ್ತಿಗೆ ನೀಡಲಾಗಿತ್ತು.

ಹೋರಾಟಗಾರ್ತಿ ವಿದ್ಯಾ ದಿನಕರ್ ಜೈಲಿನಿಂದಲೇ ನೆಲ್ಲಿದಡಿ ಗುತ್ತು ಕುಟುಂಬಸ್ಥರು ಮತ್ತು ನನ್ನ ಜೊತೆ ಸಂಪರ್ಕದಲ್ಲಿದ್ದರು. ‘25 ಮೇ 2012ರಂದು ಎಸ್‌ಇಝಡ್, ಎಂಆರ್‌ಪಿಎಲ್ ಅಧಿಕಾರಿಗಳು ಜೆಸಿಬಿ ಜೊತೆ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನಕ್ಕೆ ಹೋಗ್ತಾರೆ. ನೀನು ಆ ವೇಳೆ ಅಲ್ಲಿರಬೇಕು’ ಎಂದು ವಿದ್ಯಾ ದಿನಕರ್ ಸೂಚಿಸಿದ್ದರು. ಅದರಂತೆ ನಾನು ಅಂದು ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನದಲ್ಲಿದ್ದೆ. ಆ ದಿನ ಬೆಳಿಗ್ಗೆ 10 ಗಂಟೆಯ ವೇಳೆಗೆ ಜೆಸಿಬಿ ಮತ್ತು ಹಿಂದೂ ಜಾಗರಣಾ ವೇದಿಕೆಯ ನಾಯಕರ ಜೊತೆ ಎಸ್‌ಇಝಡ್ ಅಧಿಕಾರಿಗಳು ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನಕ್ಕೆ ದಾಳಿ ನಡೆಸಿದರು. ತುಳು ಜನಪದ ನಂಬಿಕೆಯಲ್ಲಿ ದೈವೀ ಸಮಾನರಾದ ಚೌಟರ ಮೇಲೂ ಹಿಂದೂ ಜಾಗರಣಾ ವೇದಿಕೆಯ ಗೂಂಡಾಗಳು ದಾಳಿ ನಡೆಸಿದರು. ಅಂದೇ ವಿದ್ಯಾ ದಿನಕರ್ ಸೂಚನೆಯಂತೆ ನಾವೆಲ್ಲರೂ ಬಜಪೆ ಪೊಲೀಸ್ ಠಾಣೆಗೆ ತೆರಳಿದೆವು.

ಬಂಡವಾಳಶಾಹಿ–ಪ್ರಭುತ್ವ–ಹಿಂದುತ್ವ ಗೂಂಡಾಗಳಿಂದ ಹಲ್ಲೆಗೆ ಒಳಗಾಗಿದ್ದ ನೆಲ್ಲಿದಡಿ ಗುತ್ತಿನ ಗುತ್ತಿನಾರ್ ಲಕ್ಷ್ಮಣ ಚೌಟರು ಅನಿವಾರ್ಯವಾಗಿ ಪೊಲೀಸ್ ಠಾಣೆಗೆ ಬರುವಂತಾಯಿತು. ದೈವದ ಗಡಿಹಿಡಿದ ಗುತ್ತಿನಾರ್ ಠಾಣೆ–ಕೋರ್ಟ್ ಕಚೇರಿಗಳಿಂದ ದೂರ ಇರಬೇಕು ಎಂಬುದು ತುಳುವರ ಭಾವನಾತ್ಮಕ ಆಶಯ. ಆದರೆ ಹಿಂದುತ್ವವಾದಿ ಗೂಂಡಾಗಳು ನಡೆಸಿದ ದಾಳಿಯಿಂದಾಗಿ ದೂರು ನೀಡಲು ಅನಿವಾರ್ಯವಾಗಿ ಚೌಟರು ಠಾಣೆಗೆ ಬರಬೇಕಾಯಿತು. ಪೊಲೀಸರು ದೂರು ಪಡೆದುಕೊಳ್ಳಲು ಸಿದ್ಧರಿರಲಿಲ್ಲ. ನಮ್ಮ ವಿಡಿಯೋ ದಾಖಲೆಗಳನ್ನು ವೀಕ್ಷಿಸಿ ಪೊಲೀಸರು ಕೊನೆಗೂ ಮೊಕದ್ದಮೆ ಸಂಖ್ಯೆ 98/2012 ಎಂದು ಎಫ್‌ಐಆರ್ ದಾಖಲಿಸಿಕೊಂಡರು. ಒಎನ್‌ಜಿಸಿಯ ಎಸ್‌ಇಝಡ್ ಅಧಿಕಾರಿ ರಾಘವೇಂದ್ರ ಹೊಳ್ಳ, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡೀಲ್ ಸೇರಿದಂತೆ ನಾಲ್ವರು ಹಲ್ಲೆಯ ಆರೋಪಿಗಳಾಗಿದ್ದರು. ಹಿಂದುತ್ವ ಮತ್ತು ಕಾರ್ಪೊರೇಟ್ ಮೈತ್ರಿ ಎಷ್ಟೊಂದು ಜನಪೀಡಕ ಎಂಬುದು ನಮಗೆ ಅಂದು ಅರಿವಾಗಿತ್ತು.

ನೆಲ್ಲಿದಡಿ ಜಾರಂದಾಯ ದೈವಸ್ಥಾನವನ್ನು ನೆಲಸಮಗೊಳಿಸುವ ಕಾರ್ಯಾಚರಣೆಗೆ ಆರ್‌ಎಸ್‌ಎಸ್ ಘಟಕವಾಗಿರುವ ಹಿಂದೂ ಜಾಗರಣಾ ವೇದಿಕೆಯನ್ನೇ ಮಂಗಳೂರು ವಿಶೇಷ ಆರ್ಥಿಕ ವಲಯ ಯಾಕೆ ಆಯ್ದುಕೊಂಡಿತ್ತು? ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನದ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳ ಪೈಕಿ ಸುಭಾಷ್ ಪಡೀಲ್ 2008ರಲ್ಲಿ ಭಜರಂಗದಳದಲ್ಲಿದ್ದರು. 2009ರಲ್ಲಿ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆಯಲ್ಲಿದ್ದರು. 2009ರಲ್ಲಿ ಅಮ್ನೇಶಿಯಾ ಪಬ್ ಮೇಲೆ ದಾಳಿ ಮಾಡಲಾಗಿತ್ತು. ಹಿಂದೂ ಸಂಸ್ಕೃತಿಯನ್ನು ಉಳಿಸಲು ಈ ದಾಳಿ ನಡೆಸಲಾಗಿತ್ತು ಎಂದು ಶ್ರೀರಾಮ ಸೇನೆ ಹೇಳಿತ್ತು. ಆ ಬಳಿಕ ಶ್ರೀರಾಮ ಸೇನೆಯ ಆರೋಪಿಗಳೆಲ್ಲರೂ ಆರ್‌ಎಸ್‌ಎಸ್ ಘಟಕವಾಗಿರುವ ಹಿಂದೂ ಜಾಗರಣಾ ವೇದಿಕೆ ಸೇರಿಕೊಂಡಿದ್ದರು. ಇದೇ ಸುಭಾಷ್ ಪಡೀಲ್ ನೇತೃತ್ವದ ಹಿಂದೂ ಜಾಗರಣಾ ವೇದಿಕೆಯು 2012ರ ಜುಲೈ 28ರಂದು ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಕುಖ್ಯಾತ ನೈತಿಕ ಪೊಲೀಸ್‌ಗಿರಿ ‘ಮಂಗಳೂರು ಹೋಂ ಸ್ಟೇ ದಾಳಿ’ಯನ್ನು ಮುನ್ನಡೆಸಿತ್ತು. ಇಂತಹ ಗೂಂಡಾಗಿರಿಯ ಹಿಂದೂ ಜಾಗರಣಾ ವೇದಿಕೆ ಸಂಘಟನೆಯೊಂದಿಗೆ ಎಂಆರ್‌ಪಿಎಲ್, ಒಎನ್‌ಜಿಸಿ ಎಸ್‌ಇಝಡ್ ಸಂಪರ್ಕ ಹೊಂದಿತ್ತು.

ಎಲ್ಲಾ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಿಸಿದ ಬಳಿಕ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನದ ನೆಲಸಮಕ್ಕೆ ಬಂದಿದ್ದ ಜೆಸಿಬಿ, ಲಾರಿಗಳು ವಾಪಸ್ ಹೋದವು. ಆರೋಪಿಗಳು ತಲೆಮರೆಸಿಕೊಂಡರು. ನೆಲ್ಲಿದಡಿ ಗುತ್ತು ದೈವಸ್ಥಾನ ನೆಲಸಮ ಕಾರ್ಯಾಚರಣೆ ವಿಫಲಗೊಂಡಿತ್ತು. ಮರುದಿನ, ನೆಲ್ಲಿದಡಿ ಗುತ್ತುವಿನ ಕುಟುಂಬಸ್ಥರು ಮತ್ತು ಬಜಪೆ ನಿವಾಸಿಗಳ ಜೊತೆ ಸಭೆ ನಡೆಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಲಾಯಿತು. ಸರ್ಕಾರ–ಪೊಲೀಸ್–ಎಸ್‌ಇಝಡ್–ಆರ್‌ಎಸ್‌ಎಸ್ ಹಿಂದುತ್ವ ಸಂಘಟನೆ–ಬಹುರಾಷ್ಟ್ರೀಯ ಪೆಟ್ರೋಲಿಯಂ ಕಂಪನಿಗಳು ಒಟ್ಟಾಗಿ ನಡೆಸುವ ದಾಳಿಯನ್ನು ಎದುರಿಸುವುದು ಸುಲಭವಲ್ಲ.

ಒಎನ್‌ಜಿಸಿಯ ಮಂಗಳೂರು ವಿಶೇಷ ಆರ್ಥಿಕ ವಲಯ ಅಧಿಕಾರಿ ರಾಘವೇಂದ್ರ ಹೊಳ್ಳ ಮತ್ತು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡೀಲ್ ಅವರು ಈ ಎಫ್‌ಐಆರ್ ಅನ್ನು ರದ್ದುಗೊಳಿಸಲು ಹೈಕೋರ್ಟ್ ಮೊರೆ ಹೋಗುತ್ತಾರೆ. ಈ ರೀತಿ ಎಂಆರ್‌ಪಿಎಲ್/ಎಸ್‌ಇಝಡ್ ಎಂಬ ಸರ್ಕಾರಿ ಸ್ವಾಮ್ಯದ ಕಾರ್ಪೊರೇಟ್ ಕಂಪನಿಯೊಂದು ಹೈಕೋರ್ಟ್ ಮೆಟ್ಟಿಲೇರುವಾಗ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಸುಭಾಷ್ ಪಡೀಲ್ ಎಂಬ ಆರೋಪಿಯ ಪರವಾಗಿಯೂ ಅಫಿಡವಿಟ್ ಹಾಕುತ್ತದೆ ಎಂದರೆ ಕಾರ್ಪೊರೇಟ್ ಮತ್ತು ಹಿಂದುತ್ವ ಮೈತ್ರಿ ಯಾವ ಮಟ್ಟಿನದ್ದು ಎಂಬುದನ್ನು ಊಹಿಸಬಹುದು. ಹೈಕೋರ್ಟ್‌ನಲ್ಲಿ ಒಎನ್‌ಜಿಸಿ ಎಸ್‌ಇಝಡ್ ಅಧಿಕಾರಿ ರಾಘವೇಂದ್ರ ಹೊಳ್ಳ ಮತ್ತು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡೀಲ್ ಮತ್ತು ಇತರರು ಜಂಟಿಯಾಗಿ ಕ್ರಿಮಿನಲ್ ಪಿಟೀಷನ್ (CRL.P) 6071/2014ರಂತೆ ಅರ್ಜಿ ಸಲ್ಲಿಸುತ್ತಾರೆ. ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಮತ್ತು ಒಎನ್‌ಜಿಸಿಯ ಎಸ್‌ಇಝಡ್ ಪರವಾಗಿ ಒಂದೇ ವಕೀಲರು ವಾದಿಸುತ್ತಾರೆ. ‘ನೀವುಗಳು ಹಲ್ಲೆ ಮಾಡಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇವೆ. ಹಾಗಾಗಿ ವಿಚಾರಣೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಲ್ಲ. ನೀವೇನಿದ್ದರೂ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ’ ಎಂದು ಹೇಳಿದ ಹೈಕೋರ್ಟ್ ನ್ಯಾಯಪೀಠವು ರಾಘವೇಂದ್ರ ಹೊಳ್ಳ ಮತ್ತು ಸುಭಾಷ್ ಪಡೀಲ್ ಅವರ ಅರ್ಜಿಯನ್ನು 10 ಅಕ್ಟೋಬರ್ 2014ರಂದು ವಜಾಗೊಳಿಸಿತ್ತು.

ಆರ್‌ಎಸ್‌ಎಸ್‌ನ ಹಿಂದೂ ಜಾಗರಣಾ ವೇದಿಕೆ ಮತ್ತು ಇನ್ನಿತರ ಹಿಂದುತ್ವವಾದಿ ಸಂಘಟನೆಗಳನ್ನು ಬಳಸಿಕೊಂಡು ಎಂಆರ್‌ಪಿಎಲ್/ಒಎನ್‌ಜಿಸಿಯು ನೂರಾರು ದೈವಸ್ಥಾನ, ನಾಗನ ಕಲ್ಲುಗಳು, ಹಲವು ದೇವಸ್ಥಾನಗಳನ್ನು ಬಲ ಪ್ರಯೋಗಿಸಿ ಸ್ಥಳಾಂತರಿಸಿತ್ತು. ಹಿಂದುತ್ವದ ರಕ್ಷಣೆಗಾಗಿನ ಸಂಘಟನೆ ಎಂದು ಹೇಳಿಕೊಂಡ ಆರ್‌ಎಸ್‌ಎಸ್ ಅಂಗಸಂಸ್ಥೆಗಳು ಒಎನ್‌ಜಿಸಿಯ ಮಂಗಳೂರು ವಿಶೇಷ ಆರ್ಥಿಕ ವಲಯದ 700 ಕೋಟಿ ರೂಪಾಯಿಯ ಸಿಎಸ್‌ಆರ್ ನಿಧಿಗಾಗಿ ದೈವಸ್ಥಾನ, ದೇವಸ್ಥಾನಗಳ, ರೈತರ ಮನೆಗಳ ಡೆಮಾಲಿಶನ್ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈಗ ಡೆಮಾಲಿಶನ್ ಮುಗಿದ ಬಳಿಕ ಎಂಆರ್‌ಪಿಎಲ್ ವಿರುದ್ಧದ ಹೋರಾಟ ಶುರು ಮಾಡಿದ್ದಾರೆ. ಇದು ಸತ್ಯಜಿತ್ ಸುರತ್ಕಲ್ ಅವರ ಆರ್‌ಎಸ್‌ಎಸ್/ಬಿಜೆಪಿ ವಿರುದ್ಧದ ಹೋರಾಟದ ಮಾದರಿಯಲ್ಲೇ ಇದೆ. ನೂರು ಇಲಿ ತಿಂದ ಬಳಿಕ ಬೆಕ್ಕು ಸನ್ಯಾಸಿಯಾಯ್ತಂತೆ!

You cannot copy content of this page

Exit mobile version