Home ಅಂಕಣ ಓದೋಣ ಬಾ ಗುರು – 1: ಮುರಿದು ಬಿದ್ದ ನಕ್ಷತ್ರಗಳು

ಓದೋಣ ಬಾ ಗುರು – 1: ಮುರಿದು ಬಿದ್ದ ನಕ್ಷತ್ರಗಳು

0

“..ಲೋಕಸತ್ಯಗಳು ಕಹಿಯಾದರೂ ಸಾಹಿತ್ಯ ತನ್ನೊಡಲಲ್ಲಿ ಜ್ವಾಲಾಮುಖಿಯ ಲಾವಾರಸದಂತೆ ಸದಾ ಕುದಿಸುವ ಕೆಲಸ ಮಾಡುತ್ತದೆ. ಇಲ್ಲಿಯ ಹಾಯ್ಕುಗಳು ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ..” ಅಂಕಣಕಾರರಾದ ಶಿಲ್ಪಾ ಮ್ಯಾಗೇರಿ ಅವರ ಪುಸ್ತಕ ವಿಮರ್ಶೆಯ ಮೊದಲ ಅಂಕಣ ತಪ್ಪದೇ ಓದಿ

ಕಾಲ ದೇಶಗಳಾಚೆಗೂ ಮನುಷ್ಯ ಸೃಜನಶೀಲಜೀವಿ ತನ್ನವರೊಂದಿಗಿದ್ದೂ ತನ್ನ ಪ್ರತ್ಯೇಕತೆಯನ್ನು ತಾಜಾವಾಗಿರಿಸುವ ಎಲ್ಲಾ ಅಭಿವ್ಯಕ್ತಿ ಕ್ರಿಯೆಗಳನ್ನು ಜಾರಿಯಲ್ಲಿರಿಸಿಕೊಂಡಿರುತ್ತಾನೆ. ಕ್ರಿಯಾಶೀಲ ಮತ್ತು ಪರಿವರ್ತನಾಶೀಲ ಮನಸು ಪಕ್ವತೆಯ ಕಡೆಗೆ ಹೊರಳಿದಂತೆ ಅವನ ಬಹುಮುಖ ಪ್ರತಿಭೆ ಪ್ರಕಟಗೊಳ್ಳುತ್ತಾ ಬರುತ್ತದೆ.
ಕನ್ನಡ ಸಾಹಿತ್ಯ ಪರಂಪರೆಯಗೆ ಅಗಾಧವಾದ ಇತಿಹಾಸವಿದೆ ಕಾಲ ಕಾಲಕ್ಕೂ ಕಾವ್ಯ ಜರಿ ಮಗ್ಗಲು ಬದಲಿಸುತ್ತಾ ತನ್ನದೇ ರೀತಿಯಲ್ಲಿ ಉಳಿದುಕೊಂಡು ಬೆಳೆದುಕೊಂಡು ಬಂದಿರುವುದು ಕಾವ್ಯದ ಹಿರಿಮೆಯೂ ಹೌದು.

ಪ್ರಸ್ತುತ ಹಾಯ್ಕು ಸಂಕಲನದ ಮೂಲಕ ಮುಖಾಮುಖಿಗೊಳ್ಳುತ್ತಿರುವ ‘ಮುರಿದು ಬಿದ್ದು ನಕ್ಷತ್ರಗಳು’ ಧಾರವಾಡ ಜಿಲ್ಲೆಯ ಬ್ಯಾಹಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಹೆಬಸೂರು ರಂಜಾನ್ ಅವರ ಎರಡನೇ ಹಾಯ್ಕು ಸಂಕಲನವಾಗಿದ್ದು ಎರಡು ಕವನ ಸಂಕಲನ ಮತ್ತು ಎರಡು ಸಂಪಾದಿತ ಕೃತಿ ಸೇರಿ ಇದು ಅವರ ಆರನೇ ಕೃತಿ. ಅದಾಗಲೇ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಶ್ರೀಯುತರು ‘ಪಿ ಲಂಕೇಶ್’ ಪ್ರಶಸ್ತಿ, ‘ಅಡ್ವೈಸರ್’ ‘ಡಿ ಎಸ್ ಕರ್ಕಿ’ ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದು ಓದುಗರ ಮನೋಪಟಲದಲ್ಲಿ ಸ್ಥಾನ ಪಡೆದಿದ್ದಾರೆ.

“ಮುರಿದು ಬಿದ್ದು ನಕ್ಷತ್ರಗಳು” ಹಾಯ್ಕು ಸಂಕಲನವಾಗಿದ್ದು ಸತ್ವಯುತ ಬರೆಹದಿಂದ ಕೂಡಿದ ಕಾಡುವ ಗುಣ ಹೊಂದಿರುವ ಇಲ್ಲಿನ ಹಾಯ್ಕುಗಳು ಭಾಷೆ ಮತ್ತು ಭಾವದ ದೃಷ್ಟಿಯಿಂದಲೂ ತಮ್ಮ ಪ್ರತ್ಯೇಕತೆಯನ್ನು ಉಳಿಸಿಕೊಂಡಿವೆ.
ಜಪಾನಿನ ಸಾಹಿತ್ಯ ಪ್ರಕಾರಗಳಲ್ಲಿ ಒಂದಾದ ಹಾಯ್ಕು 5-7-5 ಅಕ್ಷರಗಳಲ್ಲಿದ್ದು ಕಿರಿದರೊಳ್ ಪಿರಿದರ್ಥ ಎಂಬ ಪಂಪ ಉಕ್ತಿಯನ್ನು ನೆನಪಿಸುತ್ತದೆ. ಕನ್ನಡದ ಜಾಯಮಾನಕ್ಕೆ ಒಗ್ಗಿಸುವುದೆಂದರೆ ಕರಿಯ ಕನ್ನಡಿಯಲ್ಲಿ ಹಿಡಿದಿಡುವಂತೆ.

ಗಾಂಧಿ ಈಗ/
ಕೋಲು ಕನ್ನಡಕ/
ಅಪ್ಪನ ಖಾದಿ ಅಂಗಿ
ಅವ್ವ/
ಪ್ರತಿ ಗಾಯಕ್ಕೂ/
ಮುಲಾಮು
ಬೆವರ ಹನಿ/
ನೆಲವ ತಾ‌ಕಿತು/
ಧರ್ಮ ಬೆತ್ತಲಾಯಿತು

ಸಮಾಜಮುಖಿಯಾಗಿ ನಿಲ್ಲಬಲ್ಲ ಸಹೃದಯಿ ಕವಿಯೊಬ್ಬ ಬರೆಯಬಲ್ಲ ಸಾಲುಗಳಿವು

ವರ್ತಮಾನದ ತಲ್ಲಣಗಳನ್ನು ಸೊಗಸಾಗಿ ಕಟ್ಟಿ ಕೊಟ್ಟಿದ್ದಾರೆ ಗಾಂಧೀ ಈಗ ಸವಕಲು ನಾಣ್ಯ ಎಂಬುದನ್ನು ಮಾರ್ಮಿಕವಾಗಿ ಹೇಳುವಲ್ಲಿ ಗೆದ್ದಿದ್ದಾರೆ ಕೆಲವು ಹಾಯ್ಕು ಗಳಲ್ಲಿ ಜ್ವಲಂತ ಸಮಸ್ಯೆಗಳು ಮನಮುಟ್ಟುತ್ತವೆ ವಾಸ್ತವದ ಅರಿವಾಗುತ್ತದೆ. ಬೆವರು ಶ್ರಮದ ಸಂಕೇತ ಹಸಿವಿನ ಮುಂದೆ ಯಾವ ಧರ್ಮವೂ ಇಲ್ಲ ಯಾವ ಬೋಧನೆಯೂ ಸಲ್ಲ ಎಂಬುದನ್ನು ವಿಡಂಬನಾತ್ಮಕವಾಗಿ ಹೇಳುವಲ್ಲಿ ಹಾಯ್ಕು ಗೆದ್ದಿವೆ.

ಸಂಕಲನದ ಹಾಯ್ಕುಗಳು ಪ್ರಜ್ಞಾಪೂರ್ವಕ ಸಮಾಜದ ಆಶಯಗಳನ್ನು ಹೊತ್ತು ನಿಂತಿವೆ. ಅವ್ವ ಎಲ್ಲ ಗಾಯಕ್ಕೂ ಮುಲಾಮಾಗಬಲ್ಲ ಹೃದಯದ ಔಷಧಿ ಸಂಬಂಧಗಳ ಎಳೆಗಳನ್ನು ನಾಜೂಕಾಗಿ ಹೆಣೆದುಕೊಂಡಿವೆ ಇಲ್ಲಿನ ಹಾಯ್ಕು ಗಳು.

ಸ್ವಜನ ಪಕ್ಷಪಾತ, ಅಧಿಕಾರಶಾಹಿಗಳ ಗೋಸುಂಬೆತನ, ನೈತಿಕತೆ ಮರೆತ ರಾಜಕಾರಣ ಹೀಗೆ ಎಲ್ಲವೂಗಳು ಇಲ್ಲಿ ಕಾಣಸಿಗುತ್ತವೆ.

ಹೊಂದಿಸಿ/
ಬರೆದರೆ/
ಭಾರತ
ಹೂವು/ 
ಕತ್ತರಿಸುವಾಗ/ 
ಮೊಂಡಾಗಬೇಕು ಕತ್ತಿಗಳು
ಗೋಡೆಗಳು/ 
ತಲೆಗೇರಿವೆ/ 
ಈಗೀಗ ತಲೆಗೂ
ಅವಳ ನಗು/ 
ಇನ್ನೂ ಕೊಲ್ಲುತ್ತಿದೆಯೆಂದರೆ/ 
ಅವನು ಬಾಂಬು ತಯಾರಿಸಿದ್ದು ವ್ಯರ್ಥ

ನವಿರು ಪ್ರೀತಿಯ ನಿವೇದನೆ ಇಲ್ಲಿ ಎಂಥವರನ್ನೂ ಮುದಗೊಳಿಸುತ್ತದೆ ಪ್ರಿಯತಮೆಯನ್ನು ನೆನೆಯುವಾಗ ಸೆಳೆತ ಸಲಿಗೆಗಿಂತ ಧ್ಯಾನಸ್ಥ ಆರಾಧನೆ ಕಾಣುತ್ತದೆ. ಆತ್ಮ ಸಾಂಗತ್ಯದ ಕನವರಿಕೆ ಕೇಳುತ್ತದೆ.

ತಣ್ಣನೆಯ ಸ್ವರದಲ್ಲಿ ಗುಡುಗಿನಂತೆ ಅಬ್ಬರಿಸುವ ಸಾಲುಗಳೂ ಇಲ್ಲಿವೆ.

ನನ್ನ ದೇವರು/ 
ನನ್ನ ಧರ್ಮವೆಂದೆ/ 
ಕರೋನ ನಕ್ಕಿತು.
ಹಣತೆ/ 
ಮಾತನಾಡಿತು/ 
ನನಗೆ ಗಡಿಗಳಿಲ್ಲ.
ನಾನು/ 
ಅವಳ/ 
ಬೆರಳಚ್ಚು.
ಅಕ್ಷರಗಳು/ 
ನಡುಗುವುದಿಲ್ಲ ನಿನ್ನ / 
ಬಂದೂಕಿನ ಸದ್ದಿಗೆ..

ಮತ್ತೆ ಮತ್ತೆ ಓದಿಸಿಕೊಳ್ಳುವ ಕಾಡುವ ಹಾಯ್ಕುಗಳೂ ಇಲ್ಲಿವೆ ಸಂಕಲನದ ಅಷ್ಟೂ ಹಾಯ್ಕುಗಳು ಅದ್ಭುತವಾಗಿವೆ ಎಂದೆನಲ್ಲಾ, ಮುರಿದು ಕಟ್ಟುವ ಕೆಲಸವಂತೂ ನಮಗೆ ಕಾಣದೆ ಇರಲಾರದು. ಕೆಲವು ಅರ್ಥದಲ್ಲಿ ನಿರಸವೆನಿಸಿದರೂ ಕಟ್ಟುಗಾರಿಕೆಯಿಂದ ಗೆದ್ದಿವೆ. ಲೋಕಸತ್ಯಗಳು ಕಹಿಯಾದರೂ ಸಾಹಿತ್ಯ ತನ್ನೊಡಲಲ್ಲಿ ಜ್ವಾಲಾಮುಖಿಯ ಲಾವಾರಸದಂತೆ ಸದಾ ಕುದಿಸುವ ಕೆಲಸ ಮಾಡುತ್ತದೆ. ಇಲ್ಲಿಯ ಹಾಯ್ಕುಗಳು ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ ಎಂದು ಖಂಡಿತವಾಗಿ ಹೇಳಬಹುದು. ಇವುಗಳನ್ನು ಓದುತ್ತಾ ಹೋದಂತೆ ನಮ್ಮನ್ನು ನಾವು ಹುಡುಕಿಕೊಳ್ಳುವ ಮತ್ತು ಕಳೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಅವರವರ ಅನುಭವದ ಆಳಕ್ಕೆ ತಕ್ಕಂತೆ ಆಂತರ್ಯದಲ್ಲಿ ಹೆಪ್ಪುಗಟ್ಟಿದ ಆರ್ದ್ರ ಭಾವ ಇಲ್ಲಿ ಕರಗದೆ ಇರಲಾರದು. ಈ ಸಂಕಲನವನ್ನೊಮ್ಮೆ ಓದಿಯೇ ಅದರ ಅನುಭವ ದಕ್ಕಿಸಿಕೊಳ್ಳಬೇಕೆಂದು ಹೇಳುತ್ತಾ ಹೆಬಸೂರು ರಂಜಾನ್ ಅವರು
ಹೊಸ ಹೊಸ ರೂಪಕ ಮತ್ತು ಪ್ರತಿಮೆಗಳ ಮೂಲಕ ಕಾವ್ಯ ಕಟ್ಟಲಿ ಸಾಹಿತ್ಯ ಕೃಷಿಯಲ್ಲಿ ಇನ್ನಷ್ಟು ಹೆಸರು ಮಾಡಲಿ ಎಂದು ಶುಭ ಕೋರುವೆ.

You cannot copy content of this page

Exit mobile version