ಮಂಡ್ಯ: ಬೆಂಗಳೂರಿನಲ್ಲಿರುವ ವಿಂಡ್ಸರ್ ಮ್ಯಾನರ್, ರಾಡಿಸನ್ ಬ್ಲೂ, ಏರ್‌ಲೈನ್ಸ್‌ನಂತಹ ಐಷಾರಾಮಿ ಹೋಟೆಲ್‌ಗಳನ್ನು ವಕ್ಫ್ ಮಂಡಳಿಯು ಮೊದಲು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ಅವುಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕು ಎಂದು ಕಾಂಗ್ರೆಸ್ ಶಾಸಕ ಪಿ.ರವಿಕುಮಾರ್ ಬುಧವಾರ ಹೇಳಿದರು.
ಬುಧವಾರ ಇಲ್ಲಿನ ಬಸರಾಳು-ಮುತ್ತಿಗೆರೆ ರಸ್ತೆಯಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಈ ಜಾಗಗಳು ಸಾವಿರಾರು ಕೋಟಿ ಮೌಲ್ಯದ್ದಾಗಿದ್ದು ಅದನ್ನು ಬೇಕಿದ್ದರೆ ವಶಪಡಿಸಿಕೊಳ್ಳಲಿ, ಅದು ಬಿಟ್ಟು ರೈತರ ಜಮೀನು ವಶಪಡಿಸಿಕೊಳ್ಳಲು ಯತ್ನಿಸಿದರೆ ಸುಮ್ಮನಿರುವುದಿಲ್ಲ” ಎಂದರು.
‘ಬಿಜೆಪಿ-ಜೆಡಿ(ಎಸ್) ಅವಧಿಯಲ್ಲಿ ವಕ್ಫ್ ಆಸ್ತಿ ಗುರುತಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಈಗ ನಮ್ಮ ಮೇಲೆ ಆರೋಪ ಹೊರಿಸಿ ಕಾಂಗ್ರೆಸ್ ಸರ್ಕಾರವನ್ನು ಟಾರ್ಗೆಟ್ ಮಾಡಲು ಯತ್ನಿಸುತ್ತಿದ್ದಾರೆ, ಅವರ ಷಡ್ಯಂತ್ರ ಫಲ ನೀಡುವುದಿಲ್ಲ, ಇದೊಂದು ರೀತಿಯ ರಾಜಕೀಯ ಭಯೋತ್ಪಾದನೆಯಾಗಿದೆ” ಎಂದು ಅವರು ಟೀಕಿಸಿದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ 26,000 ಎಕರೆ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದ್ದರೆ, ಅವರ ವಿರುದ್ಧವೂ ತನಿಖೆ ನಡೆಸಬೇಕು. ನೋಟಿಸ್ ಹಿಂಪಡೆಯುವ ಜೊತೆಗೆ ವಕ್ಫ್ ಆಸ್ತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.