Home ರಾಜ್ಯ ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು, ಡಿಸೆಂಬರ್ 21: ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಅವರು ಇಂದು ಮಿಲ್ಲರ್ಸ್ ರಸ್ತೆಯ ಆರ್ಚ್ ಬಿಷಪ್ಸ್ ಹೌಸ್ ನ ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಗತ್ತಿನಲ್ಲಿ ಹಾಗೂ ನಮ್ಮ ದೇಶದಲ್ಲಿ ಅನೇಕ ಧರ್ಮಗಳಿವೆ. ಎಲ್ಲಾ ಧರ್ಮಗಳ ಸಾರ ಮನುಷ್ಯರು ಒಂದೇ ಎನ್ನುವುದು. ಅವರ ಮಧ್ಯೆ ಯಾವುದೇ ಬೇಧ ಭಾವ ಇರದೆ ಪರಸ್ಪರ ಪ್ರೀತಿಸಿ ಗೌರವಿಸಬೇಕು ಎಂದರು.

ಎಲ್ಲರನ್ನೂ ಸಮಾನವಾಗಿ ಕಾಣಬೇಕಿದೆ.
ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯವಸ್ಥೆ ನಮ್ಮ ಸಮಾಜದಲ್ಲಿ ನಿರ್ಮಾಣವಾಗಬೇಕು ಪ್ರತಿಯೊಬ್ಬ ಮಾನವನೂ ಕೂಡ ಇದನ್ನು ಅನುಸರಿಸಬೇಕು. ಹಿಂದೂ, ಕ್ರೈಸ್ತ, ಇಸ್ಲಾಂ, ಬೌದ್ಧ, ಜೈನ ಸೇರಿದಂತೆ ಎಲ್ಲಾ ಧರ್ಮಗಳೂ ಅದನ್ನೇ ಹೇಳುತ್ತವೆ. ಯಾವ ಧರ್ಮವೂ ಧ್ವೇಷವನ್ನು ಬೋಧಿಸುವುದಿಲ್ಲ ಎಂದರು.

ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು
ಕ್ರೈಸ್ತ ಶಾಂತಿದೂತನಾಗಿ ಜನ್ಮತಾಳಿದನು. ಶಾಂತಿ ನೆಲಸಬೇಕಾದರೆ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸಬೇಕು. ದಯೆ ಇಲ್ಲದ ಧರ್ಮಯಾವುದಯ್ಯ ಎಂದು ಬಸವಣ್ಣ ಹೇಳಿದ್ದರು. ಇನ್ನೊಬ್ಬರ ಬಗ್ಗೆ ನಮಗೆ ದಯೆಯಿರಬೇಕು. ಅದನ್ನೇ ಕ್ರೈಸ್ತ ಧರ್ಮದವರು ಹೇಳುತ್ತಾರೆ. ಎಲ್ಲಾ ಧರ್ಮದವರನ್ನು ಗೌರವದಿಂದ ಕಾಣುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯ. ಭಾರತ ಬಹುತ್ವದ ದೇಶ. ಏಕ ಧರ್ಮ ಏಕ ದೇವರು, ಏಕ ಜಾತಿ ಇರಲು ಸಾಧ್ಯವಿಲ್ಲ ಅನೇಕ ಧರ್ಮ, ಭಾಷೆ , ಜಾತಿಗಳಿದ್ದು, ಇದರಲ್ಲಿಯೇ ಏಕತೆಯನ್ನು ಕಾಣಬೇಕಿದೆ. ಮನುಷ್ಯತ್ವ ಬಹಳ ಅವಶ್ಯಕ. ಕ್ರೈಸ್ತ ಧರ್ಮದವರು ಅದನ್ನೇ ಪ್ರತಿಪಾದಿಸುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್, ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಆರ್ಚ್ ಬಿಷಪ್ ಮೊದಲಾದವರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು

You cannot copy content of this page

Exit mobile version