“..ಇಂದಿಗೂ ಓದುಗ ಅಭಿಮಾನಿಗಳು ಬರೆದ ಅದೆಷ್ಟೋ ಪತ್ರಗಳು ಪ್ರಶಸ್ತಿಗಳಂತೆ ನನ್ನ ಬಳಿ ಬೆಚ್ಚಗೆ ಉಸಿರಾಡುತ್ತಿವೆ. ಅವುಗಳ ಮಧ್ಯದಿಂದ ಆಯ್ದ ಒಂದಷ್ಟು ಪತ್ರಗಳ ಭಾವಗಳನ್ನು ನಿಮ್ಮೆದುರು ಹರವಿ ಕೂರಬೇಕೆನಿಸಿತು..” ಕವಿ, ವಿಮರ್ಶಕರಾದ ನಾಗೇಶ್ ಜೆ ನಾಯಕ ಅವರ ಬರಹದಲ್ಲಿ
ನನ್ನ ಓಲೆ ಓಲೆಯಲ್ಲ
ಮಿಡಿವ ಒಂದು ಹೃದಯ
ಒಡೆಯಬೇಡ ಒಲವಿಲ್ಲದೆ
ನೋಯುತಿರುವ ಎದೆಯ…
ಎಂದು ನನ್ನಿಷ್ಟದ ಕವಿ ಬಿ. ಆರ್. ಲಕ್ಷö್ಮಣರಾವ್ ಬರೆದ ಭಾವಗೀತೆ ನೀವೆಲ್ಲ ಕೇಳಿರಬಹುದು. ಮೊದಲಿನ ದಿನಮಾನಗಳಲ್ಲಿ ಯಾವುದೇ ಮುಜುಗರವಿಲ್ಲದೇ ಎದೆಯ ಎಲ್ಲ ಅಹವಾಲುಗಳನ್ನು ಹರವಿ ಹಗುರಾಗಲು ಇದ್ದ ಏಕೈಕ ಆಸರೆಯೆಂದರೆ ಪತ್ರ ಮಾತ್ರ. ಬರವಣಿಗೆಯ ಪುಳಕ, ಪದಗಳಿಗೆ ತಡಕಾಡುವಿಕೆ, ಭಾವನೆಗಳ ಅಭಿವ್ಯಕ್ತಿ, ಅತ್ತಲಿನ ಉತ್ತರಕ್ಕೆ ಕಾಯುವ ಕಾತರ, ಅಂಚೆಯಣ್ಣನ ನಿರೀಕ್ಷೆ ಇವೆಲ್ಲ ಈಗ ಸಾಧ್ಯವೇ ಇಲ್ಲವೇನೋ ಎಂಬಷ್ಟು ನಿರಾಸೆ. ಒಂದು ಪುಟ್ಟ ಯಂತ್ರ ಎಷ್ಟೆಲ್ಲ ಸಂಭ್ರಮಗಳನ್ನು ತಿಂದು ತೇಗಿಬಿಟ್ಟಿತಲ್ಲವೇ? ಈಗೀಗ ಮಾತ್ರ, ಮೊಬೈಲಿನಲ್ಲಿ ಹುಡುಗ ಹುಡುಗಿಗೆ ‘ಆಯ್ ಲವ್ ಯುವ್’ ಎಂಬ ಮೂರಕ್ಷರಗಳ ಮೆಸೆಜು ಕುಟ್ಟಿ ನಿಟ್ಟುಸಿರಾಗುತ್ತಾನೆ. ಭಾವನೆಗಳ ವಿಲೇವಾರಿ ಕೀ ಪ್ಯಾಡಿನಲ್ಲಿ ಬೆರಳು ಒತ್ತಿದಷ್ಟೇ ಸಲೀಸು. ನಾನು ಹೇಳ ಹೊರಟಿರುವುದು ಪತ್ರಗಳ ವಿನಿಮಯ ಕಾಲದ ಸಡಗರ ಮತ್ತು ಬೆರಗುಗಳನ್ನು.
ನನ್ನ ಬರವಣಿಗೆ ಎಲ್ಲ ಪತ್ರಿಕೆಗಳಲ್ಲೂ ಅಚ್ಚಾಗುತ್ತಿರುವ ಸಂದರ್ಭವದು. ‘ನಿಮ್ಮ ಬರಹ ಆಯ್ಕೆಯಾಗಿದೆ’ ಎಂದು ಸಂಪಾದಕರು ಪೋಸ್ಟ್ ಕಾರ್ಡನಲ್ಲಿ ಬರೆದು ತಿಳಿಸುತ್ತಿದ್ದರು. ಅಷ್ಟೇ ಅಲ್ಲದೆ ಓದುಗರು ಕಥೆ, ಕವಿತೆ, ಬರಹಗಳನ್ನು ಮೆಚ್ಚಿಕೊಂಡು ಪತ್ರ ಬರೆದು ಅಭಿಮಾನ ವ್ಯಕ್ತಪಡಿಸುತ್ತಿದ್ದರು. ಯಾವುದೋ ಸಂದರ್ಭದಲ್ಲಿ ಬರೆದ ಬರಹ, ಕವಿತೆ ಅದು ಅವರ ಬದುಕಿನದ್ದೇ ಆಗಿ, ಅವರಿಗಾಗಿಯೇ ಅದನ್ನು ಬರೆದಿರಬಹುದೇನೋ ಎನ್ನುವಷ್ಟರ ಮಟ್ಟಿಗೆ ಮನಸ್ಸಿಗೆ ಹಚ್ಚಿಕೊಂಡು ಪತ್ರಮುಖೇನ ಬಣ್ಣಿಸಿ ಅಭಿಮಾನ ತೋರುತ್ತಿದ್ದರು. ಇಂದಿಗೂ ಓದುಗ ಅಭಿಮಾನಿಗಳು ಬರೆದ ಅದೆಷ್ಟೋ ಪತ್ರಗಳು ಪ್ರಶಸ್ತಿಗಳಂತೆ ನನ್ನ ಬಳಿ ಬೆಚ್ಚಗೆ ಉಸಿರಾಡುತ್ತಿವೆ. ಅವುಗಳ ಮಧ್ಯದಿಂದ ಆಯ್ದ ಒಂದಷ್ಟು ಪತ್ರಗಳ ಭಾವಗಳನ್ನು ನಿಮ್ಮೆದುರು ಹರವಿ ಕೂರಬೇಕೆನಿಸಿತು.
೨೦೦೬ ರಲ್ಲಿ ಚಳ್ಳಕೆರೆಯಿಂದ ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುವ ಪಿ. ಮಂಜುನಾಥ್ ಎಂಬುವವರು ಹೀಗೆ ಬರೆದಿದ್ದರು. “ನಾಗೇಶ್‌ರವರೆ ನಾನು ಯಾರೆಂದು ನಿಮಗೆ ಗೊತ್ತಿಲ್ಲ, ನೀವು ಯಾರೆಂದು ನನಗೆ ಗೊತ್ತಿಲ್ಲ. ಕರ್ಮವೀರ ಪತ್ರಿಕೆಯ ಕಾವ್ಯಧಾರೆಯಲ್ಲಿ ನಿಮ್ಮ ಕವಿತೆ ಓದಿದ ತಕ್ಷಣ ನನ್ನ ಮನದಲ್ಲಿ ಏನೋ ಅದರ ಬಗ್ಗೆ ಒಂದು ಅಭಿಮಾನ ಮೂಡಿತು. ಆ ಕ್ಷಣ ನಾನು ನಿಮ್ಮ ಅಭಿಮಾನಿಯಾಗಿಬಿಟ್ಟೆ. ನೀವು ನನಗೆ ಬೆಸ್ಟ್ ಫ್ರೆಂಡ್, ನನ್ನ ನಿಮ್ಮ ಸ್ನೇಹದ ಬಗ್ಗೆ ಒಂದು ಕವನ ಬರೆದು ಕಳಿಸಿ ಪ್ಲೀಸ್….” ಅಪರಿಚಿತ ಓದುಗ ಅಭಿಮಾನಿಯ ಮುಗ್ಧ ಬರಹಕ್ಕೆ ಕರಗಿ ಹೋಗಿದ್ದೆ. ಇಂದಿಗೂ ಆ ಪತ್ರವನ್ನು ಓದಿದಾಗ ರೋಮಾಂಚನವಾಗುತ್ತದೆ. ೨೦೦೨ ರಲ್ಲಿ ಸಂಕೇಶ್ವರದಿAದ ಓದುಗರು ಬರೆದ ಪತ್ರ ಹೀಗಿತ್ತು, “ಆತ್ಮೀಯ ಫ್ರೆಂಡ್, ನಮಸ್ಕಾರ ಎಂದೇ ಆಶೀರ್ವಾದ ಬೇಡುವೆ. ಫೋನ್(ಲ್ಯಾಂಡ್ ಫೋನ್) ಹಚ್ಚಿದರೆ ಅದಕ್ಕೆ ಜ್ವರ ಬಂದಿತ್ತು. ಕರ್ಮವೀರದ ಬಾ ಕವಿತಾ ವಿಭಾಗದಲ್ಲಿ ‘ಸಾರ್ಥಕ ಬದುಕು’ ಕವಿತೆ ಓದಿದೆ. ಅಭಿನಂದನೆಗಳು, ಸಿಕ್ಕಾಗ ಕತ್ತರಿಸಿ ಮಾತಾಡೋಣ” ಇಂದಿಗೂ ಪದೆ ಪದೆ ನೆನಪಿಗೆ ಬರುವ ಒಂದು ಪತ್ರವೆಂದರೆ ಸಲೂನ್ ಅಂಗಡಿಯಲ್ಲಿ ಕೆಲಸ ಮಾಡುವ ಒಬ್ಬ ಹುಡುಗನದು. ಆತ ಬೆಳಗಾವಿಯಲ್ಲಿ ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಬಿಡುವಿನ ವೇಳೆಯಲ್ಲಿ ಅಂಗಡಿಗೆ ತರಿಸುತ್ತಿದ್ದ ಲೋಕದರ್ಶನ ದಿನಪತ್ರಿಕೆಯನ್ನು ಓದುತ್ತಿದ್ದ. ಭಾನುವಾರ ಬರುವ ಸಾಪ್ತಾಹಿಕ ದರ್ಶನ ಪುರವಣಿಯಲ್ಲಿನ ನನ್ನ ಕವಿತೆ ಓದಿ ಆತ ಹೀಗೆ ಬರೆದಿದ್ದ. “ಸರ್, ಎಷ್ಟೋ ಬಾರಿ ನಿಮ್ಮ ಕವಿತೆ ಓದಿದೆ. ನನ್ನ ಬದುಕಿಗೆ ತೀರಾ ಹತ್ತಿರವಾಗಿರುವ ಅದು ಕಣ್ಣಲ್ಲಿ ನೀರು ತರಿಸಿತು. ನಿಮಗೆ ಪತ್ರ ಬರೆಯದೆ ಇರಲಾಗಲಿಲ್ಲ. ಹೀಗೆ ಬರೆಯುತ್ತಿರಿ ಸರ್…” ಇಂತಹ ಮಾತುಗಳು ನನ್ನನ್ನು ತೀವ್ರ ಭಾವುಕನನ್ನಾಗಿಸುತ್ತವೆ.
ಲೇಖಕ ಮತ್ತು ಓದುಗನನ್ನು ಬಿಟ್ಟಿರಲಾರದಂತೆ ಬಂಧಿಸಿದ್ದು ಅಕ್ಷರ ಬಾಂಧವ್ಯದ ಸಂಕೋಲೆ. ಓದುಗನಿರದೇ ಬರವಣಿಗೆ ಬಹಳ ದಿನ ಬದುಕಿರಲಾರದು. ಓದುಗರನ್ನು ಸೃಷ್ಟಿಸಿಕೊಳ್ಳುವ ಜರೂರತ್ತು ಕೂಡ ಇಂದಿನ ಬರಹಗಾರನಿಗೆ ಅಗತ್ಯ. ಓದುಗ ಕೊಟ್ಟ ಅಭಿಮಾನದ, ಪ್ರೀತಿಯ ಸಾಲುಗಳು ಇಂದಿಗೂ ನನ್ನ ಬರವಣಿಗೆಯನ್ನು ಜೀವಂತವಾಗಿಟ್ಟಿವೆ. ಬರಹದ ಒಂದು ಸಾಲಾದರೂ ಓದುಗನನ್ನು ಕಾಡಿದರೆ ಲೇಖನಿಗೆ ಗರಿ ಮೂಡಿದಂತೆ.
