ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ : ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲು

ಲೋಕಸಭಾ ಚುನಾವಣೆ ಕಾವು ಏರುತ್ತಿದ್ದಂತೆ ಈಗ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಪತ್ರ ಬಂದ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಮಗೆ ಜೀವ ಬೆದರಿಕೆ ಬಂದಿರುವ ಬಗ್ಗೆ ಸ್ವತಃ ಹೇಳಿಕೊಂಡಿರುವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಗಲಭೆ ಸೃಷ್ಟಿ ಮಾಡಿ ಬಿಜೆಪಿಯವರು ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ ಚುನಾವಣೆ ಗೆಲ್ಲುವ ಪ್ಲಾನ್ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ನನಗೆ ಎರಡು ಜೀವ ಬೆದರಿಕೆ ಪತ್ರಗಳು ಬಂದಿವೆ. ಇನ್ನೊಂದರಲ್ಲಿ ನನ್ನನ್ನು ಎನ್ಕೌಂಟರ್ ಮಾಡುವುದು ಸತ್ಯ ಎಂದು ಬೆದರಿಕೆ ಹಾಕಲಾಗಿದೆ. ಈ ಪತ್ರ ಫಿನ್‌ಲ್ಯಾಂಡ್‌ನಿಂದ ಬಂದಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ. ಆದರೆ ಈ ಪತ್ರ ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇನ್ನು ಪತ್ರದಲ್ಲಿ ಜಾತಿ ನಿಂದನೆ ಕೂಡಾ ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗು, ನಿನ್ನ ಸೊಕ್ಕು ಹೊಲೆಯ-ಮಾದಿಗ ಓಣಿಯಲ್ಲಿ ನಡೆಯುತ್ತೆ” ಎಂದು ಪತ್ರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು