ಬ್ರಿಟನ್ ನ ಹೊಸ ಪ್ರಧಾನಿಯಾಗಿ ಆಯ್ಕೆ ಆಗಿದ್ದ ಲಿಜ್ ಟ್ರಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ಕೇವಲ 44 ದಿನಕ್ಕೆ ರಾಜೀನಾಮೆ ನೀಡಿ, ಅತಿ ಕಡಿಮೆ ಅವಧಿಯ ಆಡಳಿತ ನಡೆಸಿದ ದೇಶದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ. ಆದರೆ ಬ್ರಿಟನ್ ನಲ್ಲಿ ಮುಂದಿನ ಪ್ರಧಾನಿ ಆಯ್ಕೆಯಾಗುವ ವರೆಗೂ ತಮ್ಮ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ವಿಫಲತೆ ಕಂಡ ಹಿನ್ನೆಲೆಯಲ್ಲಿ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು ಲಿಜ್ ಟ್ರಸ್ ನೇತೃತ್ವದ ಸರ್ಕಾರ ಆರ್ಥಿಕ ಯೋಜನೆಯೊಂದನ್ನು ಮಂಡಿಸಿತ್ತು. ಆದರೆ ಮಂಡಿಸಿದ ಆರ್ಥಿಕ ಯೋಜನೆ ದೇಶದ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುವಂತೆ ಮಾಡಿದ ಹಿನ್ನೆಲೆಯಲ್ಲಿ ಲಿಜ್ ಟ್ರಸ್ ರಾಜಕೀಯ ನೀಡಿದ್ದಾರೆ.
ಹೊಸ ಮಾರುಕಟ್ಟೆಯ ಅವ್ಯವಸ್ಥೆಯನ್ನು ತಪ್ಪಿಸಲು ಕಳೆದ ತಿಂಗಳು ಘೋಷಿಸಲಾಗಿದ್ದ ತನ್ನ ಎಲ್ಲಾ ಸಾಲ-ಇಂಧನ ತೆರಿಗೆ ಕಡಿತಗಳನ್ನು ಬ್ರಿಟಿಷ್ ಸರ್ಕಾರ ರದ್ದುಗೊಳಿಸಿತ್ತು. ಇದು ಪ್ರಧಾನಿ ಲಿಜ್ ಟ್ರಸ್ ಗೆ ತೀವ್ರ ಮುಖಭಂಗವಾಗಿತ್ತು. ಆ ನಂತರದ ಬೆಳವಣಿಗೆಯಲ್ಲಿ ಬ್ರಿಟನ್ ಗೃಹ ಕಾರ್ಯದರ್ಶಿ ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್ ಮನ್ ಟ್ರಸ್ ಜೊತೆಗೆ ನಡೆಸಿದ ಮಾತುಕತೆ ನಂತರ ಗೃಹ ಕಾರ್ಯದರ್ಶಿ ಹುದ್ದೆ ತೊರೆದಿದ್ದರು.
ಇವೆಲ್ಲಾ ಬೆಳವಣಿಗೆಯಿಂದ ಸಂಸತ್ ಸದಸ್ಯರ ಕಡೆಯಿಂದಲೂ ಟ್ರಸ್ ಆಡಳಿತ ನೀತಿ ವಿರುದ್ಧ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿತ್ತು. ಅಂದೇ ಟ್ರಸ್ ಪ್ರಧಾನಿ ಹುದ್ದೆ ತೊರೆಯುವ ಬಗ್ಗೆ ಮಾತುಗಳು ಕೇಳಿ ಬಂದಿತ್ತು.
ಸಧ್ಯದಲ್ಲೇ ಬ್ರಿಟನ್ ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅಧ್ಯಕ್ಷ ಗಾದಿಗೆ ಭಾರತೀಯ ಮೂಲದ ರಿಷಿ ಸುನಕ್ ಹೆಸರು ಹೆಚ್ಚು ಕೇಳಿ ಬರುತ್ತಿದ್ದರೂ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸ್ಪರ್ಧಿಸುವ ಬಲವಾದ ಸುಳಿವು ನೀಡಿದ್ದಾರೆ. ಇದು ತ್ವರಿತವಾಗಿ ಕಾರ್ಯಸಾಧ್ಯವಾಗಬಹುದೆಂದೂ ಕೆಲವರು ಭಾವಿಸಿಯೂ ಇದ್ದಾರೆ. ಟ್ರಸ್ ಅವರ ಸ್ಥಾನ ತುಂಬಲು ಬೋರಿಸ್ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವ ಸಾಧ್ಯತೆಗಳು ಇವೆ ಎಂದು ‘ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
ಮುಂದೆ ಬ್ರಿಟನ್ ಮುಂದಿನ ಪ್ರಧಾನಿಯಾಗಿ ಯಾರೇ ಆಯ್ಕೆ ಆದರೂ ಅಲ್ಲಿನ ಆರ್ಥಿಕ ಸ್ಥಿತಿ ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕು. ಇಲ್ಲವಾದರೆ ಮತ್ತೆ ಲಿಜ್ ಟ್ರಸ್ ನ ರಾಜೀನಾಮೆ ರೀತಿಯಲ್ಲೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ.