ಓಡಾಡುವ ರಸ್ತೆ ಮಧ್ಯೆ ಗೋಪುರ ನಿರ್ಮಾಣ ಮಾಡಿ, ಸಾರ್ವಜನಿಕ ಓಡಾಟಕ್ಕೆ ಅನಾನುಕೂಲ ಮಾಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ದೇವಸ್ಥಾನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆಡಳಿತ ಮಂಡಳಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಇಂದು ಗುರುವಾರ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಧರ್ಮಕರ್ತರಾದ ದಿ. ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ದಂಪತಿಯ ಕಂಚಿನ ಪುತ್ಥಳಿಯ ಉದ್ಘಾಟನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಆಗಮನದ ಹಿನ್ನೆಲೆಯಲ್ಲಿ, ರಾಜ್ಯಪಾಲರಿಗೆ ಬರೆದ ಈ ಪತ್ರ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಈ ಗೋಪುರದ ಉದ್ಘಾಟನೆ ಮಾಡದಂತೆ ಗ್ರಾಮಸ್ಥರು ರಾಜ್ಯಪಾಲರಿಗೆ ಪತ್ರ ಬರೆದಿರುವಾಗ ರಾಜ್ಯಪಾಲರು ಉದ್ಘಾಟನೆ ಮಾಡುವರೇ ಅಥವಾ ಇಲ್ಲವೇ ಎಂಬಂತಾಗಿದೆ.
ಹೊರನಾಡು ರಸ್ತೆಯಲ್ಲಿ, ರಸ್ತೆ ಮಧ್ಯಯೇ ನೂತನವಾಗಿ ನಿರ್ಮಾಣವಾಗಿರುವ ಗೋಪುರದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ದಿ. ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ದಂಪತಿಯ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ರಸ್ತೆ ಜಾಗಕ್ಕೆ ಸಂಬಂಧಿಸಿದಂತೆ ಇದು ನಮ್ಮ ಜಾಗ ಎಂದು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ಹೇಳುತ್ತಿದ್ದರೆ, ದಾಖಲೆಗಳ ಪ್ರಕಾರ ಸರ್ಕಾರಿ ರಸ್ತೆ ಎಂದಿದೆ.
ಇತ್ತ ಇಂದು ನಡೆಯಲಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿರುವುದೂ ಅಲ್ಲದೇ ದೇವಸ್ಥಾನದ ಆಡಳಿತ ಮಂಡಳಿಯ ಈ ನಡೆ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿರುವ ಗ್ರಾಮಸ್ಥರು, ನಾವು ಓಡಾಟ ಮಾಡುವುದಾರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರಿಗೆ ಗೋಪುರ ಉದ್ಘಾಟನೆ ಮಾಡದಂತೆ ಸ್ಥಳೀಯರು ಪತ್ರ ಬರೆದಿದ್ದಾರೆ. ಹಾಗಾಗಿ ರಾಜ್ಯಪಾಲರು ಇಂದು ಗೋಪುರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರಾ ಎಂಬುದೇ ಪ್ರಶ್ನೆಯಾಗಿದೆ.