ಬೆಂಗಳೂರು : ಕಾಂಗ್ರೆಸ್ (Congress) ಬಿಜೆಪಿ ಮಧ್ಯೆ ಜಾಹೀರಾತು ಸಮರ ಶುರುವಾಗಿದೆ. ವಿಬಿ-ಜಿ ರಾಮ್ ಜಿ ಯೋಜನೆ ವಿರುದ್ಧ ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಜಾಹೀರಾತು ಒಂದನ್ನು ನೀಡಿತ್ತು. ಇದೀಗ ಬಿಜೆಪಿ (Bjp) ಕೂಡಾ ಜಾಹೀರಾತು ನೀಡಿದೆ. ಅದನ್ನು ಕಂಡು ಕಾಂಗ್ರೆಸ್ ಕೆರಳಿ ಕೆಂಡವಾಗಿದೆ.
ಕಾಂಗ್ರೆಸ್ನ ಸಂಘಪ್ಪ ಆ್ಯಡ್ಗೆ ಬಿಜೆಪಿಯು ನುಂಗಪ್ಪ ಆ್ಯಡ್ ಮೂಲಕ ಕೌಂಟರ್ ಕೊಟ್ಟಿದೆ. ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಗಾಂಧೀಜಿಯೇ ಕೋಲಿನಿಂದ ಹೊಡೆಯುವಂತೆ ಚಿತ್ರಿಸಿದೆ. ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಾಹೀರಾತು ವಾರ್ ಜೋರಾಗಿದೆ.
ಬಿಜೆಪಿ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳು ಎಂದು ಶೀರ್ಷಿಕೆ ನೀಡಲಾಗಿದೆ. ‘ಸಿದ್ದಪ್ಪ, ರಾಗಪ್ಪ, ಮಲ್ಲಪ್ಪ ಹಾಗೂ ಎಲ್ಲಾ ನುಂಗಪ್ಪಗಳಿರ , ನನ್ನ ಹೆಸರಲ್ಲಿ 60 ವರ್ಷ ಲೂಟಿ ಮಾಡಿದ್ದಲ್ಲದೇ, ನನ್ನ ಗ್ರಾಮ ಸ್ವರಾಜ್ಯ ಕನಸು ನನಸಾಗಲು ಮೋದಿ ಸರ್ಕಾರ ಜಾರಿಗೆ ತಂದಿರುವ ವಿಬಿ – ಜಿ ರಾಮ್ ಜಿ ಯೋಜನೆ ಕುರಿತಾಗಿ ಅಪಪ್ರಚಾರ ಮಾಡ್ತೀರಾ?’ ಎಂದು ದೊಣ್ಣೆ ಎತ್ತಿ ಹಿಡಿದ ಹಾಗೆ ಚಿತ್ರಿಸಲಾಗಿದೆ.
ಕಾಂಗ್ರೆಸ್ ಪಕ್ಷ ನೀಡಿತ್ತು ಜಾಹೀರಾತು
ಮನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮಿಷನ್ ಗ್ರಾಮೀಣ) ಯೋಜನೆಯನ್ನು ತಂದಿದೆ. ಇದರಿಂದ ಗ್ರಾಮೀಣ ಭಾಗದ ಬಡ ಜನರ ಉದ್ಯೋಗಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಂಬುವುದು ಕಾಂಗ್ರೆಸ್ ಆರೋಪವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದಲೇ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು. ಈ ಜಾಹೀರಾತಿನಲ್ಲಿ ಸಂಘಪ್ಪ ಎಂದು ಬಿಜೆಪಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಹಾತ್ಮಾ ಗಾಂಧೀಜಿ ಅವರು ಉದ್ಯೋಗ ಖಾತ್ರಿ ಯೋಜನೆಯ ಮಹತ್ವವನ್ನು ಸಾರಿ ಹೇಳುವಂತೆ ಚಿತ್ರಿಸಲಾಗಿತ್ತು.
ಬಿಜೆಪಿ ಜಾಹೀರಾತಿಗೆ ಕಾಂಗ್ರೆಸ್ ವಿರೋಧ
ಬಿಜೆಪಿ ಜಾಹೀರಾತಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ‘ಅಂದು – ಗೋಡ್ಸೆಯಿಂದ ಗಾಂಧಿ ಹತ್ಯೆ. ಇಂದು – ಗೋಡ್ಸೆವಾದಿಗಳಿಂದ ಗಾಂಧಿವಾದದ ಹತ್ಯೆ. ಜಗತ್ತಿಗೆ ಅಹಿಂಸೆಯ ಸಂದೇಶವನ್ನು ಪ್ರಬಲವಾಗಿ ನೀಡಿದ್ದವರು ಮಹಾತ್ಮ ಗಾಂಧಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಸಿದ್ಧಾಂತದ ಹತ್ಯೆಗೆ ಬಿಜೆಪಿ ಸಂಚು?
ಗಾಂಧೀಜಿ ಎಂದಿಗೂ ತಮ್ಮ ಕೈಲಿದ್ದ ಕೋಲನ್ನು ಹಲ್ಲೆಗೆ ಬಳಸಿದವರಲ್ಲ ಅಥವಾ ಸುಳ್ಳಿನ ಮಾರ್ಗ ತೋರಿದವರಲ್ಲ. ಆದರೆ ಮಹಾತ್ಮನ ಮಹತ್ವ ಅರಿಯದ ಆರೆಸ್ಸೆಸ್ ಮತ್ತು ಬಿಜೆಪಿ, ಅವರನ್ನು ಹಿಂಸಾವಾದಿಯನ್ನಾಗಿ ಚಿತ್ರಿಸುತ್ತಿದೆ, ಎಂದು ಖರ್ಗೆ ಕಿಡಿಕಾರಿದ್ದಾರೆ. ಗಾಂಧೀಜಿಯವರನ್ನು ದೈಹಿಕವಾಗಿ ಮುಗಿಸಿದವರು ಈಗ ಅವರ ಸಿದ್ಧಾಂತವನ್ನೂ ನಾಶ ಮಾಡಲು ಹೊರಟಿದ್ದಾರೆ. ಅವರ ತತ್ವಗಳನ್ನು ನಾವು ರಕ್ಷಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
