ಚೆನ್ನೈ: ಪ್ರವಾಸಿ ತಾಣಗಳಲ್ಲಿ ಪ್ರವಾಸ ಬಂದ ಪ್ರವಾಸಿಗರು ಉಳಿದುಕೊಂಡ ಹೋಟೆಲ್ಲುಗಳ ಹೊರಗೆ, ಪಾರ್ಕಿಂಗ್ ಲಾಟುಗಳಲ್ಲಿ ಅವರು ಬಂದ ಕಾರಿನ ಡ್ರೈವರುಗಳು ಕಾರಿನಲ್ಲೇ ಮಲಗಿರುವುದನ್ನು ಕಾಣಬಹುದು. ಕೆಲವು ಹೋಟೆಲ್ಲುಗಳು ಅವರಿಗೆ ಶೌಚಾಲಯಗಳನ್ನು ಬಳಸಲು ಸಹ ಬಿಡುವುದಿಲ್ಲ.
ಈ ನಿಟ್ಟಿನಲ್ಲಿ ಮಾನವೀಯ ಹೆಜ್ಜೆಯೊಂದನ್ನು ಇಟ್ಟಿರುವ ತಮಿಳುನಾಡು ಸರ್ಕಾರವು ಕಾಯಿದೆಗೆ ತಿದ್ದುಪಡಿ ತಂದು ಹೋಟೆಲ್‌ಗಳು ಮತ್ತು ಲಾಡ್ಜ್‌ಗಳಲ್ಲಿ ಅತಿಥಿಗಳ ವಾಹನ ಚಾಲಕರಿಗೆ ಡಾರ್ಮಿಟರಿ ಮತ್ತು ಶೌಚಾಲಯ ಸೌಲಭ್ಯಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ.
ಈ ಡಾರ್ಮಿಟರಿಯನ್ನು ಹೋಟೆಲ್ಲಿನಿಂದ 250 ಮೀಟರ್ ದೂರದ ಒಳಗೆ ಎಲ್ಲಿ ಬೇಕಿದ್ದರೂ ಕಲ್ಪಿಸಬಹುದೆಂದು ಹೇಳಿದೆ ಮತ್ತು ಪ್ರತಿ ಎಂಟು ಹಾಸಿಗೆಗಳಿಗೆ ಒಂದು ಪ್ರತ್ಯೇಕ ಸ್ನಾನಗೃಹವನ್ನು ಕಡ್ಡಾಯಗೊಳಿಸಲಾಗಿದೆ.
ತಮಿಳುನಾಡು ಸಂಯೋಜಿತ ಅಭಿವೃದ್ಧಿ ಮತ್ತು ಕಟ್ಟಡ (TNCDB) ನಿಯಮಗಳು, 2019 ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ವಾಹನ ಚಾಲಕರಿಗೆ ವಸತಿ ನಿಲಯದಂತಹ ಸೌಕರ್ಯಗಳನ್ನು ಒದಗಿಸುವುದನ್ನು ಹೋಟೆಲ್‌ಗಳು ಮತ್ತು ಲಾಡ್ಜ್‌ಗಳಿಗೆ ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ, ಎರಡು ನಿರ್ದಿಷ್ಟ TNCDB ನಿಯಮಗಳನ್ನು ತಿದ್ದಲಾಗಿದೆ.
ತಮಿಳುನಾಡು ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಈ ನಿಯಮಗಳಿಗೆ ತಿದ್ದುಪಡಿ ತಂದಿದೆ. ಈ ಉದ್ದೇಶಕ್ಕಾಗಿ ಜೂನ್ 28, 2023ರಂದು ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ. ಹೊಸ ನಿಯಮಗಳು ತಮ್ಮ ಕೆಲಸವನ್ನು ಪುನರಾರಂಭಿಸುವ ಮೊದಲು ಚಾಲಕರಿಗೆ ಸರಿಯಾದ ವಿಶ್ರಾಂತಿ ಮತ್ತು ನಿದ್ರೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿವೆ.