ಮನೆಯ ಗೌರವ ನೇತ್ರಾವತಿಯಲ್ಲಿ ಕೊಚ್ಚಿ ಹೋಗದಂತೆ ಹರಿದಿದ್ದ ಒಳ ಅಂಗಿಗೆ ಸೌಜನ್ಯಳ ಮನೆಯವರು ತಮ್ಮ ಕಣ್ಣೀರಿನ ಹನಿಗಳನ್ನು ಪೋಣಿಸಿ ಹಾಕಿದ ಒಂದೊಂದು ಹೊಲಿಗೆಯ ಗಂಟಿಗೂ ತಪ್ಪಿತಸ್ಥ ಅಧಿಕಾರಿಗಳು ಉತ್ತರಿಸಬೇಕಾದ ಸಮಯವಿದು. ತಾವಾಗಿಯೇ ತಲೆಯ ಮೇಲೆ ಸುರಿದುಕೊಂಡ ಗಲೀಜು ನೀರು ಅವರುಗಳ ಪಾದಗಳ ಸುತ್ತ ನಿಂತು “
ಇವರೇ ನ್ಯಾಯದ ಹಂತಕರು” ಎನ್ನುವ ಸಹಿಸಲಾಗದ ದುರ್ವಾಸನೆ ಬೀರುತ್ತಿದೆ. ದೌರ್ಜನ್ಯಕ್ಕೊಳಪಟ್ಟವರನ್ನು ಕಾಯಲಾಗದ, ಜನರು ನೀಡುವ ಸಂಬಳಕ್ಕೆ ನ್ಯಾಯ ಒದಗಿಸದೆ, ಹೇಸಿಗೆ ತಿನ್ನಲೆಂದೇ ದುಷ್ಟರ ಕೂಟ ಸೇರುವ ಮನಸ್ಥಿತಿ ಯುವ ಪೀಳಿಗೆಯ ಯಾವ ವೈದ್ಯರಿಗೂ, ವಕೀಲರಿಗೂ , ಪೊಲೀಸರಿಗೂ ಬಾರದಿರಲಿ!
ನೆನ್ನೆ ಸೌಜನ್ಯಳ ಹೆತ್ತವರನ್ನು, ಅವರಿಗಾಗಿ ಹೋರಾಡುತ್ತಿರುವ ಹಟವಾದಿಗಳನ್ನು ಕಾಣಲು ಉಜಿರೆಯ ಕಾಡುಗಳ ನಡುವೆ ಪಯಣಿಸಿದ್ದೆವು. ಹೋಗಲೇ ಬೇಕು ನೀನು ಎಂದು ಬಹಳ ದಿನಗಳಿಂದ ಬೇಡುತ್ತಿದ್ದ ಮನಸ್ಸನ್ನು ಒಂದಿಷ್ಟು ಬರೆದು ಸಂತೈಸಿದ್ದೆ.
ನಾವು ಈ ಹೋರಾಟವನ್ನು ಎಲ್ಲಿಯವರೆಗೆ ಕೊಂಡೊಯ್ಯುತ್ತೇವೆಯೋ ಗೊತ್ತಿಲ್ಲ. ಆದರೆ ಅಲ್ಲಿ ಸೇರಿದ್ದ ಜನರಲ್ಲಿ, ಸೌಜನ್ಯಳ ಪೋಷಕರ ಕಂಗಳಲ್ಲಿ ಏನೋ ಒಂದು ಭರವಸೆ, ನಂಬಿಕೆಯ ಬೆಳಕು. ಅದು ಸುಳ್ಳಾಗದಿರಲಿ!
ಸೌಜನ್ಯಳ ಮೃತ ದೇಹ ಸಿಕ್ಕ ದಿನ ಸ್ಥಳೀಯ ಪೊಲೀಸರ ಬುದ್ಧಿವಂತಿಕೆ ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿತ್ತು. ಆಕೆಯ ಚಪ್ಪಲಿ, ಕೊಡೆ, ಒಳ ಉಡುಪು ಸಂಗ್ರಹಿಸದ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಮತ್ತು ಪೊಲೀಸರು ಅತ್ಯಾಚಾರಿಗಳನ್ನು ಹಿಡಿಯಲು ಆಕೆಯ ಒಳ ಉಡುಪು ಬೇಕೇ ಬೇಕು ಎಂದು ಕಣ್ಣೀರಿನಲ್ಲಿ ಮುಳುಗಿದ್ದವರನ್ನು ಬೇಡಿ ಬಡವರ ಮನೆಗೆ ಬಂದಿದ್ದರು. ಮಗಳ ಒಳ ಉಡುಪನ್ನು ಪರಕೀಯ ವ್ಯಕ್ತಿಗೆ ಕೊಡಬೇಕಾದ ದುಸ್ಥಿತಿ ಹೆತ್ತವರದ್ದಾದರೂ ಇರುವುದರಲ್ಲೇ ಕಡಿಮೆ ಹರಿದಿದ್ದನ್ನು ಆರಿಸಿ, ಕಣ್ಣು ಮಂಜಾದ ಕ್ಷಣದಲ್ಲಿ ಸೂಜಿಗೆ ನೂಲು ಪೋಣಿಸಿ, ಹೊಲಿದು, ಪೋಲೀಸರ ಕೈಗೊಪ್ಪಿಸಿ, ನ್ಯಾಯ ಕೊಡಿಸುವಂತೆ ಕೈ ಮುಗಿದು ಬೇಡಿದ್ದರು. ಹೆಣ್ಣು ಮಗಳೊಬ್ಬಳ ಪೋಷಕರಿಗಾದ ಆ ದಿನದ ದಯನೀಯ, ಅವಮಾನಕರ ಸ್ಥಿತಿ ನೆನದರೆ ಎದೆ ಭಾರವಾಗುತ್ತದೆ . ಸಣ್ಣ ಪುಟ್ಟ ಪ್ರಕರಣಗಳಲ್ಲೂ ತಮ್ಮ ಕ್ಷಮತೆ ಮೆರೆಯುವ ಪೊಲೀಸರು ಅಂದು ಯಾಕೋ ಎಲ್ಲವನ್ನೂ ಪ್ರಜ್ಞಾಪೂರ್ವಕವಾಗಿ ಮರೆತಿದ್ದರು. ಮೃತ ದೇಹ ಸಿಕ್ಕ ಸ್ಥಳದ ಸಮೀಪ ಇದ್ದ ” ನೇಚರ್ ಕ್ಯೂರ್” ಆಸ್ಪತ್ರೆಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ದಾಖಲೆಗಳನ್ನು ಇವರು ಸಂಗ್ರಹಿಸಿಲ್ಲ . ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಆದಂ ಮತ್ತು ಡಾ.ರಷ್ಮಿ ತಮ್ಮ ವೈದ್ಯ ವೃತ್ತಿಯ ಪ್ರಮಾಣ ಮತ್ತು ಘನತೆಯನ್ನು ಅತ್ಯಾಚಾರಿಗಳ ಕೈಗಿತ್ತರು. ಮೃತಳ ಮೇಲ್ಭಾಗದ ದೇಹದ ಮೇಲಾದ ದಾಳಿ ಅವರಿಗೆ ಮುಖ್ಯವಾಗಿ ಕಾಣಲಿಲ್ಲ. ಮೃತಳ ಗುಪ್ತಾಂಗದಿಂದ ಅವರು ಸಂಗ್ರಹಿಸಿದ್ದ ಸ್ವಾಬ್ ಲಬೋರೇಟರಿ ಸೇರುವ ಹೊತ್ತಿಗೆ ಫಂಗಸ್ ಹಿಡಿದ ಸ್ಥಿತಿಯಲ್ಲಿತ್ತು. ನ್ಯಾಯ ಕೇಳಲು ಹೋದ ಮಹೇಶ್ ಶೆಟ್ಟರ ಸ್ಥೈರ್ಯ ಕುಗ್ಗಿಸಲು ಅವರ ಮೇಲೆ ಸುಳ್ಳು ಕೇಸು ದಾಖಲಿಸಿದ ಪೊಲೀಸರು ತಾವೇ ಅದನ್ನು ಸುಳ್ಳು ಪ್ರಕರಣವೆಂದು ಮುಕ್ತಾಯ ಹಾಡುತ್ತಾರೆ. ಇವೆರೆಲ್ಲರೂ ಹೆಣದ ಮೇಲೆರಗಿ ಸಂಭೋಗ ನಡೆಸಿ, ಕಿತ್ತು ತಿನ್ನುವ, ಕಾನೂನಿನ ಸಮವಸ್ತ್ರದೊಳಗಿನ ಅಘೋರಿಗಳಂತೆ ಕಾಣಿಸಿಕೊಳ್ಳುತ್ತಿದ್ದಾರೆ.
ಈಗ ಸಿಬಿಐ ಗೆ ಇರುವುದು ಒಂದೇ ದಾರಿ. ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿ, ದಟ್ಟ ಕಾನನದ ನಡುವೆ ಬಿಟ್ಟು ಬಂದು, ಹನ್ನೊಂದು ವರ್ಷಗಳ ಕಾಲ ಜನರ ಕೋಟಿಗಟ್ಟಲೆ ಹಣ, ಸರ್ಕಾರದ ಮತ್ತು ನ್ಯಾಯಾಲಯದ ಸಮಯ ವ್ಯಯ ಮಾಡಿಸಿದ ಮೂಲ ತನಿಖಾಧಿಕಾರಿಗಳನ್ನು ಮತ್ತು ವೈದ್ಯಾಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ , ಅಮಾನತ್ತಿನಲ್ಲಿಟ್ಟು ವಿಚಾರಣೆ ನಡೆಸಿದರೆ ಮಾತ್ರ ಕೊಲೆಯಾದ ಬಾಲಕಿಗೂ, ನಕಲಿ ಆರೋಪಿಯಾಗಿದ್ದ ಸಂತೋಷ್ ರಾವ್ ನಿಗೂ ನ್ಯಾಯ ಸಿಗುವ ಲಕ್ಷಣವಿದೆ. ಆ ನಿಟ್ಟಿನಲ್ಲಿ ಸರ್ಕಾರವನ್ನು ಹೆಣ್ಣುಮಕ್ಕಳಿರುವ, ಧಾರ್ಮಿಕ ಪಥದಲ್ಲಿ ನಡೆಯುವ, ವಿಚಾರವಂತ, ಪ್ರಗತಿಪರ ಕುಟುಂಬಗಳ ಜವಾಬ್ದಾರಿಯುತ ನಡೆಯಾಗಲಿ.
ಒಡನಾಡಿ ಸ್ಟ್ಯಾನ್ಲಿ
ಸಾಮಾಜಿಕ ಕಾರ್ಯಕರ್ತ