Home ರಾಜಕೀಯ ಧರ್ಮಸ್ಥಳ ಪೊಲೀಸರು ಸೀಜ್ (ಜಪ್ತಿ) ಮಾಡಿದ ಮನೆಯನ್ನು ಬಿಡುಗಡೆ ಮಾಡಲು ಪುತ್ತೂರು ಉಪವಿಭಾಗಾಧಿಕಾರಿ ಆದೇಶ

ಧರ್ಮಸ್ಥಳ ಪೊಲೀಸರು ಸೀಜ್ (ಜಪ್ತಿ) ಮಾಡಿದ ಮನೆಯನ್ನು ಬಿಡುಗಡೆ ಮಾಡಲು ಪುತ್ತೂರು ಉಪವಿಭಾಗಾಧಿಕಾರಿ ಆದೇಶ

0

ಪೊಲೀಸರು ಕಾನೂನು ಮೀರಿ ಎಫ್ಐಆರ್ ನಲ್ಲಿ ಹೆಸರಿಲ್ಲದ ಸಾರಮ್ಮ ಎನ್ನುವವರ ಮನೆಯನ್ನು “ದನಸಾಗಾಟ” ಎಫ್ಐಆರ್ ನಲ್ಲಿ ಸೀಝ್ ಮಾಡಿದ್ದರು. ಸಾರಮ್ಮ ಅವರ ಮೊಮ್ಮಕ್ಕಳನ್ನು ಮಾಡದ ತಪ್ಪಿಗೆ ಮನೆಯಿಂದ ಹೊರಹಾಕಲಾಗಿತ್ತು. ಹೀಗಾಗಿ ವಕೀಲರಾಗಿರುವ ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ ಎಂ ಭಟ್ ಅವರು ಕಾನೂನು ಪ್ರಕಾರ ಪುತ್ತೂರು ಉಪವಿಭಾಗಾಧಿಕಾರಿ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿ ಕೇಸ್ ಗೆದ್ದಿದ್ದಾರೆ.

ವಕೀಲ ಬಿ ಎಂ ಭಟ್ ಅವರು ಉಪವಿಭಾಗಾಧಿಕಾರಿ ಕೋರ್ಟ್ ನಲ್ಲಿ ವಾದಿಸಿರುವ ಪ್ರಮುಖ ಅಂಶಗಳು :

1. ಧರ್ಮಸ್ಥಳ ಪೊಲೀಸರು 02/11/2025 ರಂದು ಮಹಮ್ಮದ್ ಸಿನಾನ್, ಇಬ್ರಾಹಿಂ ಖಲೀಲ್, ಜೊಹಾರ ಎಂಬವರ ವಿರುದ್ದ ಅಕ್ರಮ ದನ ಸಾಗಾಟದ ಎಫ್ಐಆರ್  ದಾಖಲಿಸಿದ್ದಾರೆ.

2. ಎಫ್ಐಆರ್ ಪ್ರಕಾರ ಮಹಮ್ಮದ್ ಸಿನಾನ್ ಮತ್ತು ಇಬ್ರಾಹಿಂ ಖಲೀಲ್ ಅವರು ದನದ ಸಾಗಾಟಗಾರರಾಗಿದ್ದರೆ, ಜೊಹಾರ ಅವರು ದನದ ಮಾರಾಟಗಾರರು.

3. ಪೊಲೀಸರು ಎಫ್ಐಆರ್ ನಲ್ಲಿ ಹೆಸರು ಇಲ್ಲದೇ ಇರುವ ಸಾರಮ್ಮ ಅವರಿಗೆ ಜಪ್ತಿ ನೋಟಿಸ್ ಜಾರಿ ಮಾಡಿ ಮನೆಯನ್ನು ಜಪ್ತಿ ಮಾಡಿದ್ದಾರೆ‌. ಈ ಜಪ್ತಿ ನೋಟಿಸ್ ಮತ್ತು ಮನೆ ಜಪ್ತಿ ಅಕ್ರಮವಾಗಿದ್ದು, ತಕ್ಷಣ  ಜಪ್ತಿಯನ್ನು ರದ್ದು ಮಾಡಬೇಕು.

4. ಎಫ್ಐಆರ್ ನಲ್ಲಿ ಜೊಹಾರ ಎಂಬ ಹೆಸರಿದೆ. ಜೊಹಾರ ಮತ್ತು ಸಾರಮ್ಮ ಒಂದೇ ವ್ಯಕ್ತಿಗಳೇ ಎಂಬ ಸ್ಪಷ್ಟತೆ ಇಲ್ಲ.

5. ಸಾರಮ್ಮ ಮತ್ತು ಜೊಹಾರ ಒಂದೇ ಆಗಿದ್ದರೆ, ಎಫ್ಐಆರ್ ಪ್ರಕಾರ ಅಪರಾಧದಲ್ಲಿ ಜೊಹಾರ ಅವರ ಪಾತ್ರ ಏನೆಂದರೆ, ದನ ಸಾಗಾಟಗಾರರಿಗೆ ದನವನ್ನು ಮಾರಾಟ ಮಾಡಿರುವುದು.‌ ದನದ ಹತ್ಯೆ ಜೊಹಾರ ಅವರಿಗೆ ಸೇರಿದ ಸ್ಥಳದಲ್ಲಿ ನಡೆದಿರುವ ಬಗ್ಗೆ ಎಫ್ಐಆರ್ ನಲ್ಲಿ ಮಾಹಿತಿ ಇಲ್ಲ. ಸಾಗಾಟವಾದ ದನ ಜೊಹಾರ ಅವರ ಮನೆಗೆ ಸಾಗಾಟವಾಗುತ್ತಿದ್ದರೆ ಅದು ವಧೆಗೆ ಎಂದು ಊಹಿಸಬಹುದಿತ್ತು. ದನವನ್ನು ಸಾಗಾಟಗಾರರಿಗೆ ಮಾರಾಟ ಮಾಡುವುದೇ ಸ್ಥಳವನ್ನು ಜಪ್ತಿ ಮಾಡುವಂತಹ ಅಪರಾಧವಾದರೆ ಸಾವಿರಾರು ರೈತರ ಜಮೀನು ಮನೆಗಳನ್ನು ಜಪ್ತಿ ಮಾಡಬೇಕಾಗುತ್ತದೆ.

6. ಸೆಕ್ಷನ್ 11(1)(d) ಯ 1960 ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯನ್ನು ಕರ್ನಾಟಕ ವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ -2020  ಜೊತೆಗೆ ಉಲ್ಲೇಖಿಸಿದಾಗ, ‘ಅಕ್ರಮ ವಧೆಯಲ್ಲಿ ಬಳಸುವ ದನಗಳ ಸಂಬಂಧ ಅವರಣಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡುತ್ತದೆ’ ಎಂದಿದೆ. ಎಫ್ಐಆರ್ ನಲ್ಲಿ ವಧೆಯಾಗಿರುವ ಸ್ಥಳ, ವಧೆಯಾಗಲಿರುವ ಸ್ಥಳಗಳ ಬಗ್ಗೆ ಉಲ್ಲೇಖವಿಲ್ಲ.

7. ಎಲ್ಲಕ್ಕಿಂತ ಮುಖ್ಯವಾಗಿ 06.11.2025 ರಂದು ನೋಟಿಸ್ ನೀಡಿ 06.11.2025 ರಂದೇ ಜಪ್ತಿ ಮಾಡಲಾಗಿದೆ. ಕನಿಷ್ಠ ಕಾಲಾವಕಾಶದ ನೋಟಿಸ್ ನೀಡುವ, ತಮ್ಮ ಸ್ಪಷ್ಟೀಕರಣ ನೀಡುವ ಅವಕಾಶವನ್ನು ಸಾರಮ್ಮರಿಗೆ ನೀಡಿಲ್ಲ. ಇದು ನ್ಯಾಚುರಲ್ ಜಸ್ಟಿಸ್ ಗೆ ವಿರುದ್ದವಾಗಿದೆ.

8. ಸಾರಮ್ಮರ ವಿಳಾಸದಲ್ಲಿರುವ ಯಾವ ಆವರಣ, ಯಾವ ಸರ್ವೆ ನಂಬರ್, ಯಾವ ಮನೆ ನಂಬರ್ ಗೆ ಸೇರಿದ ಕಟ್ಟಡವನ್ನು ಜಪ್ತಿ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ನೋಟಿಸ್ ನಲ್ಲಿ ಉಲ್ಲೇಖಿಸಿಲ್ಲ. ಜಪ್ತಿ ಮಾಡಿದ ಆಸ್ತಿಗಳ ಕಾಲಂ ಅನ್ನು ಖಾಲಿ ಇಡಲಾಗಿದೆ.

9. ಮನೆ, ಮನೆಯ ಆವರಣ ಎನ್ನುವುದು ಯಾವುದೇ ಒಬ್ಬ ಆರೋಪಿಗೆ/ವ್ಯಕ್ತಿಗೆ ಸೇರಿರುವುದಿಲ್ಲ. ಆರೋಪಗಳ, ಕೃತ್ಯಗಳ ಅರಿವೇ ಇಲ್ಲದ ಮಕ್ಕಳು, ಮೊಮ್ಮಕ್ಕಳು, ತಾಯಂದಿರು ಮನೆಯಲ್ಲಿ ಇರುತ್ತಾರೆ. ಅಂತವರನ್ನು ಏಕಾಏಕಿ ಮಾಹಿತಿಯನ್ನೂ ನೀಡದೇ ಮನೆಯಿಂದ ಹೊರಹಾಕುವುದು ಆರೋಪಿಗಳಲ್ಲದವರಿಗೂ ಶಿಕ್ಷೆ ನೀಡಿದಂತಾಗುತ್ತದೆ. ಪೊಲೀಸರು ಕಾನೂನನ್ನು ಈ ರೀತಿ ಬಳಸುವುದನ್ನು ನಿಲ್ಲಿಸಬೇಕು.

ಬಿ ಎಂ ಭಟ್ ಅವರ ವಾದವನ್ನು ಪುರಸ್ಕರಿಸಿದ ಪುತ್ತೂರು ಉಪವಿಭಾಗಾಧಿಕಾರಿ ಕೋರ್ಟ್, ಸೀಝ್ ಆಗಿರುವ ಮನೆಯನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಬಿ ಎಂ ಭಟ್ ಅವರ ಪ್ರತಿಫಲಾಪೇಕ್ಷೆ ಇಲ್ಲದ ಕೆಲಸದಿಂದ, ಮಾಡದ ತಪ್ಪಿಗೆ ಪೊಲೀಸರಿಂದ ಸೀಝ್ ಆಗಿದ್ದ ಮನೆಯನ್ನು ಅಮಾಯಕ ಕುಟುಂಬ ಮರಳಿ ಪಡೆದುಕೊಂಡಿದೆ.

– ನವೀನ್ ಸೂರಿಂಜೆ

You cannot copy content of this page

Exit mobile version