Home ದೆಹಲಿ ಬಜೆಟ್‌ ಅಧಿವೇಶನ | ಪ್ರಧಾನಿ ಭಾಷಣವಿಲ್ಲದೆಯೇ ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಅಂಗೀಕಾರ

ಬಜೆಟ್‌ ಅಧಿವೇಶನ | ಪ್ರಧಾನಿ ಭಾಷಣವಿಲ್ಲದೆಯೇ ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಅಂಗೀಕಾರ

0

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡದೆಯೇ ಲೋಕಸಭೆಯಲ್ಲಿ ನಿರ್ಣಯ ಅಂಗೀಕಾರವಾಗಲು ಕಾರಣವಾದ ಸನ್ನಿವೇಶಗಳ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಲೋಕಸಭೆಗೆ ಬಾರದಂತೆ ಪ್ರಧಾನಿ ಮೋದಿ ಅವರಿಗೆ ತಾವೇ ಮನವಿ ಮಾಡಿದ್ದಾಗಿ ಸ್ಪೀಕರ್ ಬಹಿರಂಗಪಡಿಸಿದರು. ಬುಧವಾರ ಲೋಕಸಭೆಯಲ್ಲಿ ಪ್ರಧಾನಿ ಮೋದಿಯವರ ಆಸನವನ್ನು ವಿಪಕ್ಷದ ಮಹಿಳಾ ಸಂಸದರು ಸುತ್ತುವರಿದ ಹಿನ್ನೆಲೆಯಲ್ಲಿ ಸದನದಲ್ಲಿ ತೀವ್ರ ಗದ್ದಲ ಉಂಟಾಗಿತ್ತು. ಪ್ರಧಾನಿ ಮಾತನಾಡದೆಯೇ ಸದನವನ್ನು ಗುರುವಾರಕ್ಕೆ ಮುಂದೂಡಲಾಗಿತ್ತು. ಈ ಘಟನೆಗಳ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಗುರುವಾರ ಲೋಕಸಭೆಯಲ್ಲಿ ಮಾತನಾಡಿದರು.

“ಯಾವುದೇ ಅಹಿತಕರ ಘಟನೆ ನಡೆಯಬಹುದು ಎಂಬ ಕಾರಣಕ್ಕೆ ಸದನಕ್ಕೆ ಬಾರದಂತೆ ನಾನೇ ಪ್ರಧಾನಿಯವರನ್ನು ಕೋರಿದ್ದೆ. ಕೆಲವು ವಿಪಕ್ಷ ಸದಸ್ಯರು ಆಡಳಿತ ಪಕ್ಷದ ಕಡೆಗೆ ಬಂದರು. ಅವರ ವರ್ತನೆ ಸಂಸದೀಯ ನಿಯಮಗಳಿಗೆ ವಿರುದ್ಧವಾಗಿದೆ,” ಎಂದು ಗುರುವಾರ ಸದನವನ್ನು ಮುಂದೂಡುವ ಮುನ್ನ ಸ್ಪೀಕರ್ ಹೇಳಿದರು. ಕೈಯಲ್ಲಿ ಬ್ಯಾನರ್‌ಗಳನ್ನು ಹಿಡಿದು ಪ್ರಧಾನಿ ಮೋದಿ ಅವರ ಆಸನದ ಸುತ್ತ ಜಮಾಯಿಸಿದ ಕಾಂಗ್ರೆಸ್ ನೇತೃತ್ವದ ವಿಪಕ್ಷ ಮಹಿಳಾ ಸಂಸದರ ವರ್ತನೆಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಗದ್ದಲ ಮುಂದುವರಿದಿದ್ದರಿಂದ ಗುರುವಾರವೂ ಪ್ರಧಾನಿ ಸದನದಲ್ಲಿ ಮಾತನಾಡಲಾಗಲಿಲ್ಲ. ವಿಪಕ್ಷ ಸದಸ್ಯರ ವರ್ತನೆಯನ್ನು ಅನುಚಿತ ಮತ್ತು ಅಸಭ್ಯ ಎಂದು ಬಣ್ಣಿಸಿದ ಸ್ಪೀಕರ್, ಸದನದೊಳಗೆ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ತಂದರೆ ಸದನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.

ಇದೇ ವೇಳೆ, ಬುಧವಾರ ಸದನದಲ್ಲಿ ನೆಹರು-ಗಾಂಧಿ ಕುಟುಂಬದ ಬಗ್ಗೆ ಅನುಚಿತ ಹೇಳಿಕೆ ನೀಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನೇತೃತ್ವದ ವಿಪಕ್ಷ ಸಂಸದರು ಗುರುವಾರ ಸದನದಲ್ಲಿ ಗದ್ದಲ ಸೃಷ್ಟಿಸಿದರು. ಪೂರ್ವ ಸೂಚನೆ ನೀಡದೆ ಇತರರ ಬಗ್ಗೆ ಟೀಕೆ ಮಾಡಬಾರದು ಎಂದು ಸ್ಪೀಕರ್ ಇತ್ತೀಚೆಗೆ ನೀಡಿದ್ದ ಆದೇಶವನ್ನು ಕಾಂಗ್ರೆಸ್ ನೆನಪಿಸಿತು. ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಟೀಕಿಸಲು ಅಮುದ್ರಿತ ಪುಸ್ತಕವೊಂದನ್ನು ಉಲ್ಲೇಖಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಯತ್ನಿಸಿದ ಸಂದರ್ಭದಲ್ಲಿ ಸ್ಪೀಕರ್ ಈ ರೂಲಿಂಗ್ (ಆದೇಶ) ನೀಡಿದ್ದರು.

ಪ್ರಧಾನಿ ನಿರ್ಧಾರ ಸರಿಯಾಗಿದೆ ಅಹಿತಕರ ಘಟನೆಯನ್ನು ತಡೆಯಲು ಸದನಕ್ಕೆ ಹಾಜರಾಗಬಾರದು ಎಂಬ ಪ್ರಧಾನಿ ಮೋದಿ ಅವರ ನಿರ್ಧಾರ ಸರಿಯಾಗಿದೆ ಎಂದು ಬಿಜೆಪಿ ಸಂಸದರಾದ ಸಂಜಯ್ ಜೈಸ್ವಾಲ್ ಮತ್ತು ಅಪರಾಜಿತಾ ಸಾರಂಗಿ ಸಮರ್ಥಿಸಿಕೊಂಡರು. ಲೋಕಸಭೆಯಲ್ಲಿ ತಮ್ಮ ಆಸನಕ್ಕೆ ಹೋಗುವ ದಾರಿಗೆ ಅಡ್ಡಿಯಾಗಿ ವಿಪಕ್ಷ ಮಹಿಳಾ ಸದಸ್ಯರು ನಿಂತಿದ್ದರು ಮತ್ತು ಅವರ ಕೈಯಲ್ಲಿ ಅಸಭ್ಯವಾಗಿ ಬರೆದ ಬ್ಯಾನರ್‌ಗಳಿದ್ದವು ಎಂದು ಸಾರಂಗಿ ಹೇಳಿದರು. ತಮ್ಮ ಗೌರವವನ್ನು ಕಾಪಾಡಿಕೊಳ್ಳಲು ಪ್ರಧಾನಿ ಸದನಕ್ಕೆ ಬರಲಿಲ್ಲ ಎಂದು ಅವರು ಹೇಳಿದರು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಪ್ರಧಾನಿ ಮೋದಿಯವರ ಉತ್ತರಕ್ಕೆ ಅಡ್ಡಿಪಡಿಸಿ ಕಲಾಪಕ್ಕೆ ಅಡಚಣೆ ಉಂಟುಮಾಡಿದ ಮಹಿಳಾ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೈಸ್ವಾಲ್ ಒತ್ತಾಯಿಸಿದರು. ಆದರೆ, ದುಬೆ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂದು ವಿಪಕ್ಷ ಸಂಸದರು ತಮ್ಮ ಪಟ್ಟು ಮುಂದುವರಿಸಿದರು.

You cannot copy content of this page

Exit mobile version